Advertisement

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

08:16 PM Nov 19, 2024 | Team Udayavani |

ಪಣಜಿ: “ನಾನು ಪ್ರದರ್ಶನ ನೀಡುವಾಗ ನನಗೆ ಮಂಗವೊಂದು ಪ್ರದರ್ಶನ ಕೊಟ್ಟಂತೆ ಅನಿಸುತ್ತದೆ!” ಹೀಗೆ ಯಾವುದಾದರೂ ಒಬ್ಬ ಕಲಾವಿದ ಅಥವಾ ಗಾಯಕ ತನ್ನ ಬಗೆಯೇ ಅಂದುಕೊಂಡರೆ ಹೇಗನ್ನಿಸಬಹುದು?

Advertisement

ವಿಚಿತ್ರ ವ್ಯಕ್ತಿಯಂತೆ ತೋರಬಹುದು. ಆದರೆ ಆ ಮಾತನ್ನೇ ಬುನಾದಿಯಾಗಿಟ್ಟುಕೊಂಡು ಸಿನಿಮಾವೊಂದರಲ್ಲಿ ಆ ಕಲ್ಪನೆಯನ್ನೇ ನಿಜವೆನ್ನುವಂತೆ ಮಾಡಿದರೆ? ಇನ್ನೂ ವಿಚಿತ್ರ ಎನಿಸಬಹುದಲ್ಲವೇ?

ಹಾಗೆ ಎನಿಸುವುದು ಬೆಟರ್‌ ಮ್ಯಾನ್‌ ಸಿನಿಮಾ ನೋಡಿದ ಮೇಲೆ. ದಿ ಗ್ರೇಟೆಸ್ಟ್‌ ಶೋ ಮ್ಯಾನ್‌ ಸಿನಿಮಾದ ನಿರ್ದೇಶಕ ಮೈಕೆಲ್‌ ಗ್ರೇಸಿ ನಿರ್ದೇಶಿಸಿರುವ ಚಿತ್ರ ಬೆಟರ್‌ ಮ್ಯಾನ್. ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ದ 55 ನೇ ಆವೃತ್ತಿಯಲ್ಲಿ ನ. 20 ರಂದು ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗುತ್ತಿರುವುದು ಇದೇ ಬೆಟರ್‌ ಮ್ಯಾನ್.

ಪ್ರಖ್ಯಾತ ಬ್ರಿಟಿಷ್‌ ಪಾಪ್‌ ಸಿಂಗರ್‌ ರಾಬಿ ವಿಲಿಯಮ್ಸ್‌ ರ ಜೀವನಗಾಥೆಯ ಹಿನ್ನೆಲೆಯಲ್ಲಿ ರೂಪಿಸಲಾದ ಚಿತ್ರ. ಸಿನಿಮಾದಲ್ಲಿ ಬರುವ ಎಲ್ಲ ಪ್ರಸಂಗಗಳೂ ರಾಬಿ ವಿಲಿಯಮ್ಸ್‌ ರ ಜೀವನಕ್ಕೆ ಹೊಂದುವಂಥದ್ದಲ್ಲ. ಆದರೆ ಕೆಲವು ವಿಶೇಷ ಎನಿಸುವಂಥ, ಸಾಮಾನ್ಯವಾಗಿ ಆತ್ಮಕಥನ, ಜೀವನ ಚರಿತ್ರೆ ಆಧರಿತ ಸಿನಿಮಾಗಳಲ್ಲಿ ಪ್ರಸ್ತಾಪಿಸಲು ಇಷ್ಟಪಡದಂಥ ಸಂಗತಿಗಳನ್ನೂ ಇಲ್ಲಿ ಪ್ರಸ್ತಾಪಿಸಿರುವುದು ವಿಶೇಷ. ಈ ಸಿನಿಮಾದಲ್ಲಿ ವಿಲಿಯಮ್ಸ್‌ ರನ್ನು ಅವರೇ ಹೇಳಿಕೊಂಡದ್ದಕ್ಕೆ ದೃಶ್ಯದ ಹೂರಣ ತುಂಬಲು ಪ್ರಯತ್ನಿಸಿದ್ದಾನೆ.

ಜಾನೊ ಡೇವಿಸ್‌ ಅಭಿನಯಿಸಿರುವ ಚಿತ್ರವಿದು. ವಿಶೇಷವೆಂದರೆ ರಾಬಿ ವಿಲಿಯಮ್ಸ್‌ ಸಹ ಕೆಲವು ಭಾಗಗಳಲ್ಲಿ ಜಾನೊ ಡೇವಿಸ್‌ ಜತೆ ಅಭಿನಯಿಸಿದ್ದಾರೆ.

Advertisement

ಈ ಚಿತ್ರ ಮೊದಲಿಗೆ ಟೆಲ್ಯುರೈಡ್‌ ಸಿನಿಮೋತ್ಸವದಲ್ಲಿ ಪ್ರೀಮಿಯರ್‌ ಪ್ರದರ್ಶನ ಕಂಡಿತ್ತು. ಬಳಿಕ ಟೊರೊಂಟೊ ಸಿನಿಮೋತ್ಸವದಲ್ಲೂ ಪ್ರದರ್ಶಿತವಾಯಿತು.

ಸಿನಿಮಾ ರಾಬಿನ್‌ ವಿಲಿಯಮ್ಸ್‌ ರ ಬದುಕಿನ ಮೂರು ದಶಕಗಳನ್ನು ಮರು ನಿರ್ಮಿಸುವ ಪ್ರಯತ್ನ ಮಾಡಿದೆ. ಮೊದಲ ಯಶಸ್ಸಿನಿಂದ ಆರಂಭಿಸಿ ಕ್ಷೇತ್ರದಲ್ಲಿನ ಪ್ರಸಿದ್ಧಿ ಹಾಗೂ ಪತನದವರೆಗೂ ಭಿನ್ನ ಭಿನ್ನ ನೆಲೆಗಳನ್ನು ಚಿತ್ರಿಸಲು ಪ್ರಯತ್ನಿಸಿದೆ. ಇದಕ್ಕಾಗಿ ರಾಬಿನ್‌ ವಿಲಿಯಮ್ಸ್‌ ಹಾಡಿದ ಹಲವು ಹಾಡುಗಳನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸಲಾಗಿದೆ.

ರಾಬಿಯ ಬಹಳ ಪ್ರಮುಖ ಎನ್ನುವ ಗೀತೆಗಳನ್ನೆಲ್ಲ ಈ ಚಿತ್ರದಲ್ಲಿ ಪೋಣಿಸಿರುವುದು ವಿಶೇಷ.

ನಾನೇ ವಿಲನ್

ಇತ್ತೀಚಿನ ಒಂದು ಸಂದರ್ಶನದಲ್ಲೂ ಚಿತ್ರದಲ್ಲಿನ ತನ್ನ ಬದುಕಿನ ವಿವಾದಿತ ಅಂಶಗಳ ಕುರಿತು ಪ್ರತಿಕ್ರಿಯಿಸಿ, ಅವುಗಳ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ. ಈ ಸಿನಿಮಾದಲ್ಲಿ ನಾವೇ ಇಂಥವರು ವಿಲನ್‌ ಎಂದು ಹೇಳುವ ಮೊದಲು ಹಲವು ವಿಲನ್‌ ಗಳಿದ್ದಾರೆ ಎಂದು ಗ್ರಹಿಸಬಹುದು. ಆದರೆ ನಾನೇ ಇದರಲ್ಲಿನ ನಿಜವಾದ ವಿಲನ್‌. ನನ್ನ ಸಿನಿಮಾದಲ್ಲಿ ನಾನೇ ಮುಖ್ಯ ವಿಲನ್‌ ಗಾಗಿ ಬಿಂಬಿಸಿಕೊಳ್ಳಲು ಬೇಸರವಿಲ್ಲʼ ಎಂದು ಹೇಳಿದ್ದರು. ಪ್ರಮುಖವಾಗಿ ಅವರ ಮಾದಕ ವ್ಯಸನ ಹಾಗೂ ಸಂಬಂಧಗಳ ಬಗ್ಗೆಯೂ ಈ ಚಿತ್ರದಲ್ಲಿ ಪ್ರಸ್ತಾಪವಾಗಿದೆ.

ಈ ಬಾರಿ ಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾವನ್ನು ಕಂಟ್ರಿ ಫೋಕಸ್‌ ವಿಭಾಗದಲ್ಲಿ ಪರಿಗಣಿಸಲಾಗಿದ್ದು, ಆಸ್ಟ್ರೇಲಿಯದಲ್ಲಿ ನಿರ್ಮಿತವಾದ ಚಿತ್ರವೇ ಉದ್ಘಾಟನಾ ಚಿತ್ರವಾಗಿದೆ.

ಈ ಸಿನಿಮಾವು ಡಿಸೆಂಬರ್‌ 26 ರಂದು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಲಿದೆ. ಬಳಿಕ ಅಮೆರಿಕದ ಸಿನಿಮಾ ಮಂದಿರಗಳಲ್ಲೂ ವೀಕ್ಷಣೆಗೆ ಲಭ್ಯವಾಗಲಿದ್ದು, 2025 ರ ಜನವರಿ 17 ರಂದು ವಿವಿಧೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next