ಪಣಜಿ: ಇಲ್ಲಿ ನಡೆಯುತ್ತಿರುವ ಅಂ.ರಾ. ಚಲನಚಿತ್ರೋತ್ಸವದ 2ನೇ ದಿನಕ್ಕೆ ಕಳೆಗಟ್ಟಿದ್ದು ಭಾರತೀಯ ಪನೋರಮಾ ವಿಭಾಗದ ಚಿತ್ರ ಪ್ರದರ್ಶನ ಉದ್ಘಾಟನೆ, ತುಳು ಭಾಷೆಯ ಚಲನಚಿತ್ರ ಕುರಿತ ಪ್ರಸ್ತಾವ, ಪ್ರಾದೇಶಿಕ ಭಾಷೆಗಳ ಸಿನಿ ಫಸಲು ಕುರಿತು ಪ್ರಶಂಸೆ, ಮಲ್ಪಿಫ್ಲೆಕ್ಸ್ ಮಾಫಿಯಾ ಎಂಬ ಪದ ಬಳಕೆ ಮೂಲಕ ಆಕ್ರೋಶ ಹಾಗೂ ರೆಡ್ ಕಾರ್ಫೆಟ್‌ನಲ್ಲಿ ಮಿಂಚಿದ ಇಸ್ರೇಲ್ ಸಿನಿಮಂದಿ.
ಬುಧವಾರ ಐನಾಕ್ಸ್ 2ರಲ್ಲಿ ಬೆಳಗ್ಗೆ ಭಾರತೀಯ ಪನೋರಮಾ ವಿಭಾಗದ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಷಾಜಿ ಎನ್. ಕರುಣ್ ಅವರ ನಿರ್ದೇಶನದ “ಒಲು’ ಚಲನಚಿತ್ರ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಂಡಿತು. ಕಥೇತರ ವಿಭಾಗದಲ್ಲಿ ಆದಿತ್ಯ ಸುಹಾಸ್ ಜಂಬಳೆಯವರ “ಖರ್ವಾಸ್’ ಪ್ರದರ್ಶನಗೊಂಡಿತು.
ಅಪರಾಹ್ನ ನಡೆದ ಭಾರತೀಯ ಪನೋರಮಾ ವಿಭಾಗದ ತೀರ್ಪುಗಾರರ ಪತ್ರಿಕಾಗೋಷ್ಠಿಯಲ್ಲಿ ತುಳು ಭಾಷೆಯ ಚಿತ್ರ ಪ್ರಸ್ತಾಪವಾಯಿತು. ಕಥಾ ವಿಭಾಗದ ತೀರ್ಪುಗಾರರ ಸಮಿತಿ ಅಧ್ಯಕ್ಷ ರಾಹುಲ್ ರಾವಲಿ, “ವಿವಿಧ ರಾಜ್ಯಗಳ, ಭಾಗಗಳಿಂದ ಮೂಡಿ ಬರುತ್ತಿರುವ ಪ್ರಾದೇಶಿಕ ಚಿತ್ರಗಳು ಹೊಸ ಭರವಸೆಯನ್ನು ಮೂಡಿಸುತ್ತಿವೆ. ತುಳು ಇತ್ಯಾದಿ ಭಾಷೆಗಳ ಚಿತ್ರಗಳೂ ಬರುತ್ತಿರುವುದು ಸ್ವಾಗತಾರ್ಹ’ ಎಂದರು. ಪ್ರಾದೇಶಿಕ ಚಿತ್ರಗಳ ಪ್ರದರ್ಶನಕ್ಕೆ ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕಿದೆ. ಸರಕಾರಗಳೂ ಕ್ರಮ ಕೈಗೊಳ್ಳಬೇಕು. ಇಂದು ಯಾವ ಸಿನಿಮಾಗಳು, ಎಷ್ಟುದಿನ ಪ್ರದರ್ಶನ ಗೊಳ್ಳಬೇಕು ಎಂಬುದನ್ನು ಮಲ್ಟಿಫ್ಲೆಕ್ಸ್ ಮಾಫಿಯಾ ನಿರ್ಧರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಿರುಚಿತ್ರಗಳ ಅಲೆ: ಕಿರುಚಿತ್ರಗಳ ಅಲೆ ಜೋರಾಗಿದೆ ಎಂದು ಕಥೇತರ ಚಿತ್ರಗಳ ವಿಭಾಗದ ತೀರ್ಪುಗಾರರ ಅಧ್ಯಕ್ಷ ವಿನೋದ್ ಘನಂತ್ರ ಹೇಳಿದರು. ಪ್ರಾದೇಶಿಕ ಭಾಷೆಗಳಿಂದಲೂ ಗುಣಮಟ್ಟದ ಕಥೇತರ ಕಿರುಚಿತ್ರಗಳು ನಿರ್ಮಾಣಗೊಳ್ಳುತ್ತಿವೆ ಎಂದು ಹರ್ಷಿಸಿದರು.