Advertisement

“ಉತ್ತಮ ರಸ್ತೆ ಬೇಕಿದ್ದರೆ ಜನ ಟೋಲ್‌ ಪಾವತಿಸಲೇಬೇಕು’

12:37 AM Jul 17, 2019 | Team Udayavani |

ಹೊಸದಿಲ್ಲಿ: “ಉತ್ತಮ ರಸ್ತೆ ಬೇಕಾದರೆ ಟೋಲ್‌ ಪಾವತಿ ಮಾಡಬೇಕು. ಸರಕಾರದ ಬಳಿ ಹೆಚ್ಚಿನ ಹಣ ಸಂಗ್ರಹವಿಲ್ಲ.’ ಹೀಗೆಂದು ಲೋಕಸಭೆಯಲ್ಲಿ ಹೇಳಿದ್ದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೀಡಲಾಗಿರುವ ಅನುದಾನದ ಮೇಲೆ ನಡೆದ ಚರ್ಚೆಯ ಬಳಿಕ ಉತ್ತರ ನೀಡುವ ಸಂದರ್ಭದಲ್ಲಿ ಅವರು ಮಾತುಗಳನ್ನಾಡಿದ್ದಾರೆ.

Advertisement

“ಹಿಂದಿನ ಐದು ವರ್ಷಗಳಲ್ಲಿ 40 ಸಾವಿರ ಕಿ.ಮೀ. ಉದ್ದ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಟೋಲ್‌ ಮೂಲಕ ಸಂಗ್ರಹಿಸಲಾಗುವ ಮೊತ್ತವನ್ನು ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ. ಈ ವೇಳೆ ಟೋಲ್‌ಗೆ ಸಂಬಂಧಿಸಿ ವಿಪಕ್ಷ ಸದಸ್ಯರೊಬ್ಬರು ಆಕ್ಷೇಪಿಸಿದಾಗ, ಪ್ರತಿಕ್ರಿಯಿಸಿದ ಗಡ್ಕರಿ, “ಟೋಲ್‌ ವ್ಯವಸ್ಥೆ ಬಂದ್‌ ಆಗದು. ದೇಶದ ಜನರು ಉತ್ತಮ ದರ್ಜೆಯ ರಸ್ತೆಗಳನ್ನು ಬಯಸುವುದಾದರೆ ಅವರು ಟೋಲ್‌ ಪಾವತಿ ಮಾಡಬೇಕು. ಸರಕಾರದ ಬಳಿ ರಸ್ತೆ ನಿರ್ಮಾಣಕ್ಕೆ ಹಣ ಇಲ್ಲ’ ಎಂದು ಹೇಳಿದ್ದಾರೆ.

ಅನುತ್ಪಾದಕ ಸಾಲ ಇಳಿಕೆ: ವಾಣಿಜ್ಯಿಕ ಬ್ಯಾಂಕ್‌ಗಳಿಗೆ ಹೊರೆಯಾಗಿರುವ ಅನುತ್ಪಾದಕ ಸಾಲದ ಪ್ರಮಾಣ 2018-19ನೇ ಸಾಲಿನಲ್ಲಿ 1.02 ಲಕ್ಷ ಕೋಟಿ ರೂ. ಇಳಿಕೆಯಾಗಿದೆ. ಹೀಗಾಗಿ ಆ ಸಾಲದ ಪ್ರಮಾಣ ಈಗ 9.34 ಲಕ್ಷ ಕೋಟಿ ರೂ. ಆಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ನೋಂದಣಿ ರದ್ದು: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪಗಳಿಗಾಗಿ ಐದು ವರ್ಷ ಅವಧಿಯಲ್ಲಿ 14,800 ಎನ್‌ಜಿಒಗಳ ನೋಂದಣಿ ರದ್ದು ಮಾಡಲಾಗಿದೆ ಎಂದು ಸಚಿವ ನಿತ್ಯಾನಂದ ರಾವ್‌ ಮಾಹಿತಿ ನೀಡಿದ್ದಾರೆ.

963 ಉಗ್ರರ ಹತ್ಯೆ: 5 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 963 ಉಗ್ರರನ್ನು ಕೊಲ್ಲಲಾಗಿದೆ, 413 ಭದ್ರತಾ ಸಿಬಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ ತಿಳಿಸಿದ್ದಾರೆ. ಜತೆಗೆ 3 ವರ್ಷಗಳಲ್ಲಿ ಸುಮಾರು 400 ಉಗ್ರರು ಒಳನುಸುಳಲು ಯತ್ನಿಸಿದ್ದಾರೆ. ಈ ಪೈಕಿ 126 ಮಂದಿಯನ್ನು ಕೊಲ್ಲಲಾಗಿದೆ ಎಂದಿದ್ದಾರೆ.

Advertisement

ಪ್ರಾಥಮಿಕ ಆರೋಗ್ಯ ಕೇಂದ್ರ: ಆಯುಷ್ಮಾನ್‌ ಭಾರತ ಯೋಜನೆಯಡಿ 2019-20ನೇ ಸಾಲಿನಲ್ಲಿ 40 ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಲಿವೆ ಎಂದು ಸಚಿವ ಡಾ| ಹರ್ಷವರ್ಧನ್‌ ತಿಳಿಸಿದ್ದಾರೆ. “ಆಯುಷ್ಮಾನ್‌ ಭಾರತ್‌ ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳು ವಿತ್ತೀಯ ವರ್ಷಾಂತ್ಯದಲ್ಲಿ ಸ್ಥಾಪನೆಯಾಗಲಿವೆ ಎಂದಿದ್ದಾರೆ.

ರೈತರ ಆತ್ಮಹತ್ಯೆ-ಕಳವಳ: ದೇಶದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರ ಲೋಕಸಭೆಯಲ್ಲಿ ಮತ್ತೂಮ್ಮೆ ಪ್ರಸ್ತಾಪವಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ವಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಬೆಳೆಗಳಿಗೆ ನೀರು, ಫ‌ಸಲಿಗೆ ಬೆಲೆ ನೀಡುವುದರ ಮೂಲಕ ಆತ್ಮಹತ್ಯೆ ಘಟನೆಗಳನ್ನು ತಪ್ಪಿಸಬಹುದಾಗಿದೆ ಎಂದು ವಿಪಕ್ಷಗಳ ಸದಸ್ಯರು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next