ಧಾರವಾಡ: ದೇಶದ ಯುವಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಬಲಿಷ್ಠ ಭಾರತ ನಿರ್ಮಿಸಲು ಸಾಧ್ಯವೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅಭಿಪ್ರಾಯಪಟ್ಟರು. ನಗರದ ಕವಿಸಂನಲ್ಲಿ ಆಯೋಜಿಸಿದ್ದ ದಿ| ವಿಶಾಲ ರಾಜಶೇಖರ ಹಂಚಿನಮನಿ ಸಂಸ್ಮರಣೆ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಲೆಕ್ಕಾಚಾರ ಮರೆತು ನಾವೆಲ್ಲರೂ ಒಂದಾಗಿ ವಿಶ್ವದಲ್ಲಿ ಭಾರತ ಉತ್ತಮ ಭವಿಷ್ಯ ಹೊಂದುವಂತಾಗಲು ಮಕ್ಕಳಿಗೆ ಶ್ರೇಷ್ಠವಾದ ಶಿಕ್ಷಣ ದೊರೆಯುವಂತೆ ಮಾಡಬೇಕು. ಈ ದಿಸೆಯಲ್ಲಿ ಜನ ನಾಯಕರು, ಸಂಘ-ಸಂಸ್ಥೆಗಳು, ಕಂಕಣಬದ್ಧವಾಗಿ ಕಾರ್ಯ ಮಾಡಬೇಕು ಎಂದರು.
“ಕುಟುಂಬ ಹಾಗೂ ಸಮಾಜದಲ್ಲಿ ಯುವಕರ ಪಾತ್ರ’ ವಿಷಯ ಕುರಿತು ಉಪನ್ಯಾಸ ನೀಡಿದ ಪರಿಸರವಾದಿ ಮುಕುಂದ ಮೈಗೂರ, ಯುವಕರಲ್ಲಿ ಅಪಾರವಾದ ಸಾಮರ್ಥ್ಯ, ಶಕ್ತಿ, ಜ್ಞಾನ ಇರುತ್ತದೆ. ಅದನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯ ಕುಟುಂಬ ಹಾಗೂ ಸಮಾಜದ ಮೇಲಿದೆ ಎಂದರು.
ಹಿರೇಮಲ್ಲೂರ ಈಶ್ವರನ್ ಪ.ಪೂ. ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಶಶಿಧರ ತೋಡಕರ ಮಾತನಾಡಿದರು. ಕೆ.ಎಚ್. ಪಾಟೀಲ ಕಾಮರ್ಸ್ ಬಿ.ಬಿ.ಎ ಕಾಲೇಜು, ಹುಬ್ಬಳ್ಳಿ ವಿದ್ಯಾರ್ಥಿನಿ 2016-17ನೇ ಸಾಲಿನಲ್ಲಿ ಬಿಬಿಎದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ದ್ರಾಕ್ಷಾಯಣಿ ಕುಂಬಾರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ದತ್ತಿ ದಾನಿ ಚನ್ನಬಸಪ್ಪ ಮರದ ಮಾತನಾಡಿದರು.
ವಿಜಯಲಕ್ಷ್ಮೀ ರಾಜಶೇಖರ ಹಂಚಿನಮನಿ ಹಾಗೂ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ, ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಶೀತಲ್ ಹಂಚಿನಮನಿ, ಕಮಲಾ ಇಮ್ಮಡಿ, ಸರೋಜಾ ಮೊರಬದ, ಶೇಷರಾಜ ಗುತ್ತಲ, ಚಿಕ್ಕಮಠ, ವಸಂತ ವಾಯಿ, ಸಿ.ಎಸ್. ಪಾಟೀಲ, ಎ.ಸಿ. ವಿರಕ್ತಮಠ, ಎಲ್.ಸಿ. ಕಬ್ಬೂರ, ಬಿ.ಬಿ. ಭೂಮನಗೌಡರ, ಸುರೇಬಾನ, ಜಿ.ಬಿ. ಹೊಂಬಳ, ಬಿ.ಎಸ್. ಶಿರೋಳ, ಸಿ.ಜಿ. ಜಾಫಣ್ಣವರ ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಬಸವಪ್ರಭು ಹೊಸಕೇರಿ ವಂದಿಸಿದರು.