Advertisement

ಪ್ಲಾಸ್ಟಿಕ್‌ ಬಳಸಿದ್ರೆ ಸಾವಿರ ರೂ. ದಂಡ

12:28 AM Oct 01, 2019 | Team Udayavani |

ಬೆಂಗಳೂರು: ಬರುವ ಗಾಂಧಿ ಜಯಂತಿಯಿಂದ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಬೆಂಗಳೂರು ರೈಲ್ವೆ ವಿಭಾಗೀಯ ವ್ಯಾಪ್ತಿಯಲ್ಲಿನ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿ ಬಳಸುವವರ ವಿರುದ್ಧ ಗರಿಷ್ಠ ಪ್ರಮಾಣದ ದಂಡ ವಿಧಿಸುವುದಾಗಿ ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

Advertisement

ಪ್ರಮುಖ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಅಲ್ಲದೆ, ರಾಜ್ಯಾದ್ಯಂತ ಪ್ಲಾಸ್ಟಿಕ್‌ ನಿಷೇಧಿಸಲ್ಪಟ್ಟಿದೆ. ಆದಾಗ್ಯೂ ಅ.2ರಿಂದ ನೀರಿನ ಬಾಟಲಿ, ಹಾಲಿನ ಕವರ್‌ಗಳು ಸೇರಿದಂತೆ ವಿನಾಯ್ತಿ ನೀಡಲಾದ ಪ್ಲಾಸ್ಟಿಕ್‌ ವಸ್ತುಗಳನ್ನು ಹೊರತುಪಡಿಸಿ, ಉಳಿದ ಉತ್ಪನ್ನ ಬಳಸಿದವರಿಗೆ ಸಾವಿರ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ನಿಲ್ದಾಣಗಳಲ್ಲಿರುವ ಮಳಿಗೆಗಳು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಕವರ್‌ ಹಾಗೂ ಇತರ ವಸ್ತು ಬಳಸಬಾರದು ಎಂದು ಸೂಚಿಸಲಾಗಿದೆ. ನಾಲ್ಕು ಪ್ರಮುಖ ನಿಲ್ದಾಣಗಳಲ್ಲಿ ನೀರಿನ ಬಾಟಲಿಗಳನ್ನು ಪುಡಿ ಮಾಡುವ ಆರು ಯಂತ್ರಗಳನ್ನು ಅಳವಡಿಸಲಾಗಿದ್ದು, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿ ಈ ಮಾದರಿಯ ಯಂತ್ರಗಳನ್ನು ಪೂರೈಸುವಂತೆ ಮನವಿ ಮಾಡಲಾಗಿದೆ. ಪೂರಕ ಸ್ಪಂದನೆ ಸಿಕ್ಕರೆ, ಯಂತ್ರಗಳ ಸಂಖ್ಯೆ ಹೆಚ್ಚಲಿದೆ ಎಂದರು.

ಈ ಮಧ್ಯೆ ಗಾಂಧಿ ಜಯಂತಿಯಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ಮಕ್ಕಳು, ರೈಲ್ವೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. “ಸ್ವಚ್ಛತೆಯೇ ಸೇವೆ’ ಎಂಬುದು ಅಭಿಯಾನದ ಮೂಲಮಂತ್ರ ಆಗಿದೆ. ಇದರಡಿ ಕಳೆದ 15 ದಿನಗಳಿಂದ ಶ್ರಮದಾನ, ಸ್ವಚ್ಛ ಸಂವಾದ, ಸ್ವಚ್ಛ ನೀರು, ರೈಲು ಶೌಚಾಲಯಗಳ ಶುಚಿಗೊಳಿಸುವುದು, ಸ್ವಚ್ಛ ನಿಲ್ದಾಣ ಸೇರಿದಂತೆ ಹತ್ತುಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಸ್ವಯಂಸೇವಾ ಸಂಘಗಳು, ಶಿಕ್ಷಣ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next