ಬಂಗಾರಪೇಟೆ: ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಅಂಗಡಿಗಳ ಮಾಲಿಕರಿಗೆ ರಸ್ತೆಗೆ ಕಸ ಸುರಿಯದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ, ಮಾಲಿಕರು ನಿಯಮ ಪಾಲಿಸುತ್ತಿಲ್ಲ. ಇದು ಮುಂದುವರಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಮತ್ತು ದಂಡ ವಿಧಿಸಲಾಗುವುದು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸೂಚನೆ ನೀಡಿದರು.
ಗುರುವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿರೊಂದಿಗೆ ಬಜಾರ್ ರಸ್ತೆಗೆ ಆಗಮಿಸಿದ ಶಾಸಕರು, ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿ ಪ್ರತಿಯೊಂದು ಅಂಗಡಿಗಳ ಮಾಲಿಕರು ತಮ್ಮ ಅಂಗಡಿಯೊಳಗಿನ ಕಸ ರಸ್ತೆ ಹಾಕಿದ್ದಾರೆ. ಪ್ರತಿ ದಿನ ಪುರಸಭೆಯಿಂದ ಕಸವನ್ನು ತೆಗೆದುಕೊಂಡು ಹೋಗಲು ವಾಹನ ಬರುತ್ತಿದ್ದರೂ ಎಚ್ಚೆತ್ತುಕೊಳ್ಳದೇ ರಸ್ತೆಗೆ ಕಸ ಹಾಕುತ್ತಿರುವುದಕ್ಕೆ ತೀವ್ರ ಗರಂ ಆಗಿದ್ದರು.
ಮುಖ್ಯ ಬಜಾರ್ ರಸ್ತೆಯ ಉದ್ದಕ್ಕೂ ಎಲ್ಲಾ ಅಂಗಡಿಗಳೇ ಇದ್ದು, ಪ್ರತಿಯೊಂದು ಅಂಗಡಿಯ ಮುಂದೆ ಕಸ ಸುರಿದರೆ ತುಂಬಲು ಪೌರಕಾರ್ಮಿಕರಿಗಾಗಿ ಕಾಯಬೇಕು. ಬದಲಿಗೆ ಡಬ್ಬಿಯನ್ನು ಇಟ್ಟುಕೊಂಡು ಪುರಸಭೆ ವಾಹನಕ್ಕೆ ಸುರಿದರೆ ಸ್ವಚ್ಛವೂ ಉಳಿಯುತ್ತದೆ. ಹೀಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು ಎಂದು ಅಸಮಧಾನ ವ್ಯಕ್ತಪಡಿಸಿದರು.
ಮುಖ್ಯವಾಗಿ ಟೀ ಅಂಗಡಿಗಳಲ್ಲಿ ಟೀ ಕುಡಿದ ಬಳಿಕ ಗ್ಲಾಸ್‌ಗಳನ್ನು ರಸ್ತೆಗೆ ಹಾಕದೇ, ಒಂದು ಕಾಟನ್ ಬಾಕ್ಸ್ ಇಟ್ಟು ಅದರಲ್ಲಿ ಹಾಕಬೇಕು. ಪುರಸಭೆ ಅಧಿಕಾರಿ ಸಿಬ್ಬಂದಿ ಎಷ್ಟೇ ಅರಿವು ಮೂಡಿಸದರೂ ಜನರು ಹಾಗೂ ಅಂಗಡಿಗಳ ಮಾಲಿಕರು ಎಚ್ಚೆತ್ತುಕೊಂಡಿಲ್ಲ. ಇನ್ನು ಮುಂದೆ ಕಸವನ್ನು ಬೇಕಾಬಿಟ್ಟಿ ಕಸ ರಸ್ತೆಗೆ ಸುರಿದರೆ ಅಂತಹ ಅಂಗಡಿಗಳ ಒಳಗೆ ಕಸ ಹಾಕಿ. ತಮ್ಮ ಮನೆಯಲ್ಲಿ ಈ ರೀತಿ ಕಸ ಹಾಕಿಕೊಳ್ಳುತ್ತಾರೆಯೇ ? ಇನ್ನು ಮುಂದೆ ಪುರಸಭೆ ವ್ಯಾಪ್ತಿಯ ರಸ್ತೆಯಲ್ಲಿ ಕಸ ಹಾಕುವಂತಿಲ್ಲ, ಮನೆಗಳು, ಅಂಗಡಿಗಳು, ಹೋಟೆಲ್ಗಳು, ತರಕಾರಿ ಅಂಗಡಿಗಳು ಸೇರಿದಂತೆ ರಸ್ತೆಗೆ ಕಸ ಸುರಿದರೆ 5 ಸಾವಿರವರೆಗೂ ದಂಡ ವಿಧಿಸಿ ಎಂದು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ಅನಧಿಕೃತ ಶೀಟ್‌ಗಳನ್ನು ಹಾಕಿರುವುದರಿಂದ ಪುರಸಭೆ ಅಧಿಕಾರಿ ಸಿಬ್ಬಂದಿ ತೆರವುಗೊಳಿಸಲಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ ಮಾತನಾಡಿ, ಪಟ್ಟಣದಲ್ಲಿ ಪ್ರತಿ ಯೊಂದು ರಸ್ತೆಯ ಉದ್ದಕ್ಕೂ ಅಂಗಡಿಗಳ ಮುಂದೆ ಅನಧಿಕೃತವಾಗಿ ಅಳವಡಿಸಿಕೊಂಡಿರುವ ಕ್ರಮ ಶೀಟ್‌ಗಳನ್ನು ಹಾಗೂ ಅಂಗಡಿಗಳ ಮುಂದೆ ರಸ್ತೆಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿರುವ ಅಂಗಡಿಗಳನ್ನು ಸಂಪೂರ್ಣವಾಗಿ ತೆಗೆಯಬೇಕು. ಒತ್ತಡಕ್ಕೂ ಮಣಿಯದೇ ನೇರವಾಗಿ ತೆರವುಗೊಳಿಸಿ ಪಟ್ಟಣವನ್ನು ಪ್ರಾಫಿಕ್ ಹಾಗೂ ಕಸ ಮುಕ್ತ ನಗರವನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು. ಪುರಸಭೆ ಸದಸ್ಯ ಪ್ರಶಾಂತ್, ಆರೋಗ್ಯ ನಿರೀಕ್ಷಕ ಗೋವಿಂದ ರಾಜು, ಪೌರಕಾರ್ಮಿಕರು ಸಿಬ್ಬಂದಿ ಹಾಜರಿದ್ದರು.