ಬೆಂಗಳೂರು: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಾಗೂ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಇಒಗಳನ್ನು ಕಾನೂನು ರೀತಿ ಬಂಧಿಸಿ ಕ್ರಮ ಜರುಗಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸರ್ಕಾರಕ್ಕೆ ಸೂಚಿಸಿದೆ.
ಕೋವಿಡ್ ಸೋಂಕಿನಿಂದ ಮೃತಪಟ್ಟವರ ಗೌರವ ಯುತ ಶವಸಂಸ್ಕಾರ, ಸೋಂಕಿತರಿಗೆ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ, ರೋಗಿ ಗಳನ್ನು ಆಸ್ಪತ್ರೆಗಳಿಗೆ ದಾಖಲಿಸುವ ವಿಚಾರದಲ್ಲಿ ಆಗುತ್ತಿರುವ ಅವ್ಯವಸ್ಥೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧ ಮಾಜಿ ಸಚಿವ ಎಚ್.ಕೆ. ಪಾಟೀಲ್ ಸಲ್ಲಿಸಿದ್ದ ದೂರು ಆಧರಿಸಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ನ್ಯಾ. ಡಿ.ಎಚ್. ವಘೇಲಾ ನೇತೃತ್ವದ ಪೀಠ ಈ ಸೂಚನೆ ನೀಡಿತು.
ಆಯೋಗದ ಸೂಚನೆಯಂತೆ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಸೋಮವಾರ ವಿಚಾರಣೆಗೆ ಹಾಜರಾಗಿದ್ದರು. ಅವರಿಂದ ವಿವರಣೆ ಪಡೆದ ಆಯೋಗ, ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಾಗೂ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಇಒಗಳನ್ನು ಕಾನೂನು ರೀತಿ ಬಂಧಿಸಿ ಕ್ರಮ ಜರುಗಿಸಬೇಕು. ಅಂತ್ಯಕ್ರಿಯೆ ಶಿಷ್ಟಾಚಾರಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಸೋಂಕಿತರ ಶವಸಂಸ್ಕಾರ, ಚಿಕಿತ್ಸೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸ ಬೇಕು. ಈ ಸಂಬಂದ ನಾಳೆಯಿಂದ (ಮಂಗಳವಾರ) ಯಾವುದೇ ದೂರುಗಳು ಬರ ದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿತು.
ಇದಕ್ಕೆ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉತ್ತರಿಸಿ, ಅಂತ್ಯಕ್ರಿಯೆಯ ಶಿಷ್ಟಾಚಾರಗಳ ಬಗ್ಗೆ ಮಂಗಳವಾರ ಪ್ರಕಟಣೆ ಹೊರಡಿ ಸಲಾಗುವುದು. ಪಿಪಿಇ ಕಿಟ್‌ಗಳಿಗೆ ಸಂಬಂಧಿಸಿದ ವಿಚಾರ ಆ.10ರೊಳಗೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ವಿಚಾರಣೆಯನ್ನು ಆ.7ಕ್ಕೆ ಮುಂದೂಡಲಾಯಿತು.
ಎಚ್.ಕೆ. ಪಾಟೀಲ್ ಕೋರಿಕೆ : ಇದೇ ವೇಳೆ ಮಾನವ ಹಕ್ಕುಗಳ ಆಯೋಗದ ಮುಂದೆ ಹಾಜರಾದ ಮಾಜಿ ಸಚಿವ ಎಚ್.ಕೆ ಪಾಟೀಲ್ ಅವರು, ಸೋಂಕು ದೃಢಪಟ್ಟವರಿಗೆ ಅಸ್ಪತ್ರೆಗೆ ಸೇರಿಸಲು ಒಂದು ಗಂಟೆಯೊಳಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಮೂರು ತಾಸಿನೊಳಗೆ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು. ಗುಣಮಟ್ಟದ ಚಿಕಿತ್ಸೆ ಹಾಗೂ ಉತ್ತಮ ಸೇವೆ ಒದಗಿಸಬೇಕು. ಶೌಚಾಲಯ ಇನ್ನಿತರ ಮೂಲಭೂತ ಅಗತ್ಯತೆಗಳನ್ನು ಸಮರ್ಪಕವಾಗಿ ಒದಗಿಸಬೇಕು. ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಪ್ರಮಾಣದಲ್ಲಿ ಕಾಲ ಕಾಲಕ್ಕೆ ಪಿಪಿಇ ಕಿಟ್‌ಗಳನ್ನು ಪೂರೈಸಬೇಕು. ಆಕ್ಸಿಜನ್, ವೆಂಟಿಲೇಟರ್, ಔಷಧಿಗಳನ್ನು ಸಮರ್ಪಕ ಪ್ರಮಾಣದಲ್ಲಿ ಲಭ್ಯಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಕೋರಿದರು. ರಾಜ್ಯ ಮಾನವ ಹಕ್ಕುಗಳ ಆಯೋಗ ಸರ್ಕಾರಕ್ಕೆ ಸೂಚಿಸಿದೆ.