ಪಾಟ್ನಾ: ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿದಂತೆ ಆರ್ ಎಸ್ ಎಸ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿರುವ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಗೆ ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಹಿರಂಗ ಸವಾಲು ಹಾಕಿದ್ದಾರೆ.
ಇದನ್ನೂ ಓದಿ:ವಿವಾಹಿತ / ಅವಿವಾಹಿತ ಸೇರಿ ಎಲ್ಲಾ ಮಹಿಳೆಯರು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು: ಸುಪ್ರೀಂ
“ಆರ್ ಎಸ್ ಎಸ್ ಸ್ವಯಂಸೇವಕ ಎಂದು ಹೇಳಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ, ಆದರೆ ತಾನು ಪಿಎಫ್ ಐನ ಸದಸ್ಯ ಎಂದು ಲಾಲುಪ್ರಸಾದ್ ಹೇಳುತ್ತಾರೆಯೇ ಎಂದು ಪ್ರಶ್ನಿಸಿರುವ ಸಿಂಗ್, ಬಿಹಾರದಲ್ಲಿ ನಿಮ್ಮದೇ (ಆರ್ ಜೆಡಿ) ಸರ್ಕಾರವಿದೆ, ಒಂದು ವೇಳೆ ನಿಮಗೆ ತಾಕತ್ತಿದ್ದರೆ ಬಿಹಾರದಲ್ಲಿ ಆರ್ ಎಸ್ ಎಸ್ ಅನ್ನು ನಿಷೇಧಿಸಿ ಎಂದು ಸವಾಲು ಹಾಕಿರುವುದಾಗಿ” ವರದಿ ವಿವರಿಸಿದೆ.
ದೇಶಾದ್ಯಂತ ಪಿಎಫ್ ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಬುಧವಾರ ಪಿಎಫ್ ಐ ಮತ್ತು ಸಹವರ್ತಿ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಲಾಲುಪ್ರಸಾದ್ ಯಾದವ್, ಪಿಎಫ್ ಐ ರೀತಿ ಆರ್ ಎಸ್ ಎಸ್ ಅನ್ನು ಕೂಡಾ ನಿಷೇಧಿಸಬೇಕು ಎಂದು ಆಗ್ರಹಿಸಿದ್ದರು. ಪಿಎಫ್ ಐ ಸಂಘಟನೆ ಕುರಿತು ತನಿಖೆ ನಡೆಯುತ್ತಿದೆ, ಅದೇ ರೀತಿ ಆರ್ ಎಸ್ ಎಸ್ ವಿರುದ್ಧವೂ ತನಿಖೆ ನಡೆಯಬೇಕು ಎಂದು ಲಾಲೂಪ್ರಸಾದ್ ಹೇಳಿದ್ದರು.