Advertisement

ಹೆಚ್ಚುವರಿ ಸ್ವೈಪಿಂಗ್‌ ಮಷಿನ್‌ ಇದ್ದರೆ ಮರಳಿಸಿ

03:45 AM Jan 12, 2017 | Team Udayavani |

ಬೆಂಗಳೂರು: ನೋಟುಗಳ ನಿಷೇಧದಿಂದ ಒಂದೆಡೆ ಕಾರ್ಡ್‌ ಬಳಕೆ ಸಾಧನ (ಪಿಒಎಸ್‌)ಗಳಿಗೆ ಹೆಚ್ಚುತ್ತಿರುವ ಬೇಡಿಕೆ, ಮತ್ತೂಂದೆಡೆ ಅಸಮರ್ಪಕ ಪೂರೈಕೆಯಿಂದಾಗುತ್ತಿರುವ ಅಸಮತೋಲವನ್ನು ಸರಿದೂಗಿಸಲು ಬ್ಯಾಂಕ್‌ಗಳು ಈಗ ಹೆಚ್ಚುವರಿ ಯಂತ್ರಗಳನ್ನು ಹೊಂದಿದ ವ್ಯಾಪಾರಿಗಳಿಗೆ ದುಂಬಾಲು ಬಿದ್ದಿವೆ!

Advertisement

ಈ ಸಂಬಂಧ ಬ್ಯಾಂಕ್‌ಗಳು, ಪಿಒಎಸ್‌ ಮಷಿನ್‌ಗಳನ್ನು ಹೊಂದಿದ ಹಾಗೂ ಅವುಗಳನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಬಳಸದವರ ಹುಡುಕಾಟ ನಡೆಸಿವೆ. ರಾಜ್ಯದಲ್ಲಿ ಒಟ್ಟಾರೆ 1,52,033 ಪಿಒಎಸ್‌ ಮಷಿನ್‌ಗಳಿವೆ. ಇವುಗಳಲ್ಲಿ ಯಾವ ಮಷಿನ್‌ನಿಂದ ನಿತ್ಯ ಎಷ್ಟು ವಹಿವಾಟು ನಡೆಯುತ್ತಿದೆ ಎಂಬುದರ ಸಮಗ್ರ ಮಾಹಿತಿ ಆಯಾ ಬ್ಯಾಂಕ್‌ಗಳಿಗೆ ಸಿಗುತ್ತದೆ. ಈ ಅಂಕಿ-ಅಂಶಗಳನ್ನು ಆಧರಿಸಿ, ಆ ವ್ಯಾಪಾರಿಗಳನ್ನು ಮನವೊಲಿಸುವ ಪ್ರಯತ್ನ ನಡೆದಿದೆ. 

ನೋಟುಗಳ ನಿಷೇಧದಿಂದ ಗ್ರಾಮೀಣ ಭಾಗಗಳಲ್ಲಿ ವ್ಯಾಪಾರ-ವಹಿವಾಟಿಗೆ ವಿಪರೀತ ಸಮಸ್ಯೆಯಾಗಿದೆ. ಪಿಒಎಸ್‌ಗಳಿಗೆ ಬೇಡಿಕೆ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ನಗರ ಪ್ರದೇಶಗಳಲ್ಲಿ ಹೆಚ್ಚುವರಿ ಅಥವಾ ಅಷ್ಟೇನೂ ಬಳಕೆಯಾಗದ ಪಿಒಎಸ್‌ಗಳನ್ನು ತಮಗೆ ಹಿಂತಿರುಗಿಸಬೇಕು ಎಂದು ವಿವಿಧ ಬ್ಯಾಂಕ್‌ಗಳು ವ್ಯಾಪಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಇದುವರೆಗೆ ಯಾರೊಬ್ಬರೂ ಹಿಂತಿರುಗಿಸಿಲ್ಲ.

ಹಳ್ಳಿಯಲ್ಲಿ ಒಂದೂ ಇಲ್ಲ:
ಬೆಂಗಳೂರಿನಂತಹ ಮಹಾನಗರಗಳಲ್ಲಿ ಒಂದೊಂದು ಮಳಿಗೆಗಳಲ್ಲಿ ಒಂದಕ್ಕಿಂತ ಹೆಚ್ಚು ಪಿಒಎಸ್‌ಗಳಿವೆ. ಇದರ ಜತೆಗೆ ಪೇಟಿಎಂ, ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇರಿದಂತೆ ನಗದುರಹಿತ ವಹಿವಾಟಿಗೆ ವಿವಿಧ ಸಾಧನಗಳಿವೆ. ಆದರೆ, ಹಳ್ಳಿಗಳಲ್ಲಿ ಇಂತಹ ಯಾವುದೇ ಸೌಲಭ್ಯಗಳಿಲ್ಲ. ಒಂದು ಪಿಒಎಸ್‌ನಲ್ಲಿ ಒಂದು ಹಳ್ಳಿಯಲ್ಲಿನ ವಹಿವಾಟನ್ನೇ ನಿರ್ವಹಿಸಬಹುದು. ಹಾಗಾಗಿ, ಹೆಚ್ಚುವರಿ ಅಥವಾ ತಮ್ಮಲ್ಲಿ ಬಳಕೆಯಾಗದ ಪಿಒಎಸ್‌ಗಳನ್ನು ಹಿಂತಿರುಗಿಸುವಂತೆ ಮನವಿ ಮಾಡಲಾಗುತ್ತಿದೆ ಎಂದು ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದು ಪಿಒಎಸ್‌ಗಳ ಪುನರ್‌ರಚನೆ. ಎಲ್ಲಿ ಹೆಚ್ಚುವರಿ ಪಿಒಎಸ್‌ಗಳಿವೆಯೋ ಅವುಗಳನ್ನು ಹಿಂಪಡೆದು, ಗ್ರಾಮೀಣ ಪ್ರದೇಶಗಳಿಗೆ ಪೂರೈಸುವುದು. ಆದರೆ, ಒತ್ತಾಯಪೂರ್ವಕವಾಗಿ ಅಲ್ಲ. ಎಷ್ಟು ಹೆಚ್ಚುವರಿ ಅಥವಾ ಹೆಚ್ಚು ಬಳಕೆಯಾಗದ ಪಿಒಎಸ್‌ಗಳಿವೆ ಎಂಬುದರ ಮಾಹಿತಿ ಆಯಾ ಬ್ಯಾಂಕ್‌ಗಳ ಬಳಿ ಇದೆ ಎಂದು ಎಸ್‌ಎಲ್‌ಬಿಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಸುರೇಶ್‌ ತಿಳಿಸುತ್ತಾರೆ. 

Advertisement

ಒಮ್ಮೆಲೆ ಹೆಚ್ಚಿರುವ ಬೇಡಿಕೆಯನ್ನು ಪೂರೈಸುವುದು ತಕ್ಷಣದಲ್ಲಿ ಸಾಧ್ಯವಿಲ್ಲ. ಈಗ ನಮ್ಮ ಮುಂದಿರುವ ಆಯ್ಕೆ ಬಳಕೆಯಾಗದಿರುವುದನ್ನು ಬೇಡಿಕೆ ಇರುವಲ್ಲಿ ತಲುಪಿಸುವುದು. ಈ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಈ ಪ್ರಕ್ರಿಯೆಯಲ್ಲಿ ನಮ್ಮ ಬ್ಯಾಂಕ್‌ ತೊಡಗಿದೆ. ಇದರ ಉದ್ದೇಶ ಗ್ರಾಮೀಣ ಭಾಗಗಳಲ್ಲಿ ನಗದುರಹಿತ ವಹಿವಾಟಿಗೆ ಅನುಕೂಲ ಮಾಡಿಕೊಡುವುದಾಗಿದೆ. ಆದರೆ, ಇನ್ನೂ ಯಾರೊಬ್ಬರೂ ಹಿಂತಿರುಗಿಸಿಲ್ಲ ಎಂದು ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರಿನ ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ ಮಾಹಿತಿ ನೀಡಿದರು. 

ಹಳ್ಳಿಗಳಿಗೆ ಬ್ಯಾಂಕ್‌ ಮಿತ್ರರ ನೆರವು:
ಸಾಮಾನ್ಯವಾಗಿ ವ್ಯಾಪಾರಿಗಳಿಗೆ ಬ್ಯಾಂಕ್‌ ಮೂಲಕವೇ ಪಿಒಎಸ್‌ ಮಷಿನ್‌ ಹೋಗುತ್ತದೆ. ಅದರ ಮೂಲಕ ನಡೆಯುವ ನಿತ್ಯದ ವಹಿವಾಟು ನಮ್ಮಲ್ಲಿ ದಾಖಲಾಗಿರುತ್ತದೆ. ಅದನ್ನು ಆಧರಿಸಿ ನಾವು ಹಲವು ಗ್ರಾಹಕರನ್ನು ಸಂಪರ್ಕಿಸಿ ಮನವಿ ಮಾಡುತ್ತಿದ್ದೇವೆ. ಲಿಖೀತವಾಗಿ ಯಾವುದೇ ಮನವಿ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

ಇದಲ್ಲದೆ, ಗ್ರಾಮೀಣ ಭಾಗದಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ಇಬ್ಬರು ಡಿಜಿಟಲ್‌ ಬ್ಯಾಂಕರ್ಗಳನ್ನು ನೇಮಿಸಿ, ತರಬೇತಿ ನೀಡಲಾಗುತ್ತಿದೆ. ಬ್ಯುಸಿನೆಸ್‌ ಕರಸ್ಪಾಂಡಂಟ್‌ ಏಜೆಂಟ್‌ಗಳಾದ ಬ್ಯಾಂಕ್‌ ಮಿತ್ರರ ಮೂಲಕವೂ ಡಿಜಿಟಲ್‌ ವ್ಯಾಪಾರ-ವಹಿವಾಟಿನ ತಿಳಿವಳಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 5,072 ಬ್ಯಾಂಕ್‌ ಮಿತ್ರರಿದ್ದು, ಇವರ ಸಹಾಯದಿಂದ ಹಳ್ಳಿಯ ಜನ ಮೊಬೈಲ್‌ ಬ್ಯಾಂಕಿಂಗ್‌ ವಹಿವಾಟು ನಡೆಸಬಹುದು. ಇಷ್ಟೇ ಅಲ್ಲ, ಪ್ರತಿ ಗ್ರಾ.ಪಂ.ಗಳಲ್ಲಿ ವೈಟ್‌ ಎಟಿಎಂತೆರೆಯುವ ಚಿಂತನೆಯೂ ಇದೆ. ಈ ಮಾದರಿಯ ಎಟಿಎಂಗಳನ್ನು ಖಾಸಗಿಯವರು ನಿರ್ವಹಣೆ ಮಾಡುತ್ತಾರೆ ಎನ್ನಲಾಗಿದೆ. ಇದಕ್ಕೆ ಹಣ ಭರಿಸುವುದು ಮಾತ್ರ ಬ್ಯಾಂಕ್‌ಗಳಾಗಿರುತ್ತವೆ. 

ರಾಜ್ಯದಲ್ಲಿ ಒಟ್ಟಾರೆ 1.52 ಲಕ್ಷ ಪಿಒಎಸ್‌ ಯಂತ್ರಗಳಿದ್ದು,
ಅತಿ ಹೆಚ್ಚು ಯಂತ್ರಗಳನ್ನು ವಿತರಿಸಿದ ಬ್ಯಾಂಕ್‌ಗಳ ವಿವರ ಹೀಗಿದೆ. 

ಬ್ಯಾಂಕ್‌ಗಳು    ಪಿಒಎಸ್‌ಗಳು
ಎಸ್‌ಬಿಐ    26,709
ಎಚ್‌ಡಿಎಫ್ಸಿ    31,147
ಎಕ್ಸಿಸ್‌    25,321
ಐಸಿಐಸಿಐ    24,768
ಯೆಸ್‌    23,555

– ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next