ನವದೆಹಲಿ: ಪ್ಯಾನ್ ಕಾರ್ಡ್ ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಆಧಾರ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಘೋಷಿಸಿದ ನಂತರ ಇನ್ಮುಂದೆ ದೇಶದಲ್ಲಿ ಉಪಯೋಗಿಸಲ್ಪಡುವ ಎಲ್ಲಾ ಮೊಬೈಲ್ ಫೋನ್ ಸಂಖ್ಯೆಗಳು ಆಧಾರ್ ಜೊತೆ ಲಿಂಕ್ ಆಗಿರಬೇಕು. ಫೋನ್ ಸಂಖ್ಯೆಗೆ ಆಧಾರ್ ಸಂಖ್ಯೆ ಕಡ್ಡಾಯವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಲು ಸಿದ್ಧತೆ ನಡೆಸುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ದೇಶದಲ್ಲಿರುವ ಎಲ್ಲಾ ಮೊಬೈಲ್ ಫೋನ್ ನಂಬರ್ ಗಳನ್ನು ಟೆಲಿಕಂ ಸಂಸ್ಥೆಗಳು ಆಧಾರ್ ಸಂಖ್ಯೆಯ ಮೂಲಕ ಮರು ಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯವಿದೆ. ಒಂದು ವೇಳೆ ಪರಿಶೀಲನೆ ವೇಳೆ ಯಾವುದೇ ಮೊಬೈಲ್ ನಂಬರ್ ಆಧಾರ್ ಸಂಖ್ಯೆ ಜೊತೆ ಸಂಪರ್ಕ ಹೊಂದದೆ ಇರುವುದು ಕಂಡುಬಂದಲ್ಲಿ 2018ರ ಫೆ.6ರ ನಂತರ ಅದು ಕಾನೂನು ಬಾಹಿರವಾಗಲಿದೆ ಎಂದು ದೂರಸಂಪರ್ಕ ಇಲಾಖೆ ಕಳುಹಿಸಿರುವ ನೋಟಿಸ್ ನಲ್ಲಿ ವಿವರಿಸಿರುವುದಾಗಿ ವರದಿ ಹೇಳಿದೆ.
ಫೆಬ್ರುವರಿ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರಕಾರ ದೂರಸಂಪರ್ಕ ಇಲಾಖೆ ಈ ನಿರ್ದೇಶನ ನೀಡಿದೆ. ಭಾರತದಲ್ಲಿರುವ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ಪರಿಶೀಲನೆಗೆ ಒಳಪಡಿಸಬೇಕಾಗಿದ ಅಗತ್ಯವಿದೆ ಎಂದು ಸುಪ್ರೀಂ ಹೇಳಿತ್ತು. ಮೊಬೈಲ್ ಫೋನ್ ಬಳಸುವ ಗ್ರಾಹಕರಿಗೆ ಆಧಾರ್ ಕಡ್ಡಾಯ ಮಾಡಬೇಕೆಂಬ ಬಗ್ಗೆ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ಕೋರ್ಟ್ ಆದೇಶ ನೀಡಿತ್ತು.
ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಆಧಾರ್ ಕಡ್ಡಾಯ ಮಾಡುವ ಬಗ್ಗೆ ಕಳೆದ ಫೆಬ್ರುವರಿ ತಿಂಗಳಿನಲ್ಲಿ ದೂರಸಂಪರ್ಕ ಇಲಾಖೆ, ಯುಐಡಿಎಐ, ಟ್ರಾಯ್ ಹಾಗೂ ಪ್ರಧಾನಮಂತ್ರಿ ಸಚಿವಾಲಯದ ಸಿಬ್ಬಂದಿಗಳು ಸಭೆ ನಡೆಸಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲಿ ಜನರಿಗೆ ಮಾಹಿತಿ ನೀಡಿ 2018ರ ಫೆಬ್ರುವರಿ 6ರೊಳಗೆ ಆಧಾರ್ ಸಂಖ್ಯೆ ಜೋಡಣೆ ಆಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮರು ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ ಎಂದು ಇಲಾಖೆ ಸೂಚನೆ ನೀಡಿದೆ.