ಮೊದಲಿಂದಲೂ ನಮ್ಮಿಬ್ಬರ ಪ್ರೀತಿ ಗಟ್ಟಿಯಾಗಿ ಇರಲೇ ಇಲ್ಲವೆಂದು ನನಗೀಗ ಅನಿಸುತ್ತಿದೆ. ಸಣ್ಣ ಸಣ್ಣ ಸಂಗತಿಗಳಿಗೂ ನೀನು ಮುನಿಸಿಕೊಳ್ಳುತ್ತಿದ್ದೆ. ವಾರಗಟ್ಟಲೆ ನಿನ್ನ ಕರೆಯಿಲ್ಲದೆ ಫೋನ್ ನಿರ್ಜಿವ ಬಿದ್ದುಕೊಂಡಿದ್ದರೂ ನಿನ್ನ ಕಲ್ಲು ಮನಸು ಕರಗುತ್ತಿರಲಿಲ್ಲ.
ಉಕ್ಕೇರುವ ಕಡಲ ತೀರದಲ್ಲಿ ಒಬ್ಬಂಟಿಯಾಗಿ ಕುಳಿತು, ಉಕ್ಕುಕ್ಕಿ ಬರುವ ಅಳುವನ್ನು ತಡೆಯಲೆತ್ನಿಸಿದರೂ ಕೆನ್ನೆ ಮೇಲಿಳಿವ ಕಣ್ಣ ಹನಿ ನನ್ನ ಹತಾಶ ಪ್ರಯತ್ನಕ್ಕೆ ಕೇಕೆ ಹಾಕಿ ನಕ್ಕಂತೆ ಭಾಸವಾಗುತ್ತಿದೆ. ಅದೆಷ್ಟು ದಿನ ನಿನ್ನ ಮೋಸದ ಪ್ರೀತಿಯ ಜಾಲದಲ್ಲಿ ಸಿಲುಕಿ, ನನ್ನತನಕ್ಕೆ ಪೆಟ್ಟು ಬಿದ್ದರೂ ನೀನು ನನ್ನ ಬಿಟ್ಟು ಹೋಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡು ಬಂದೆ. ಕೊನೆಗೂ ನಿನ್ನನ್ನು ಉಳಿಸಿಕೊಳ್ಳಲಾಗಲೇ ಇಲ್ಲ ನೋಡು.
ಪ್ರೀತಿ ಎಂಬ ಮಧುರ ಅನುಭೂತಿಯ ಸಾಮೀಪ್ಯದಲ್ಲಿ ಲೋಕದ ಜಂಜಡವನ್ನೆಲ್ಲ ಮರೆತು ಹಾಯಾಗಿದ್ದ ಸುಖದ ಉತ್ತುಂಗದ ಕ್ಷಣವದು. “ಸಾಯುವುದಾದರೆ ನಾನೇ ಮೊದಲು ಸಾಯಬೇಕು ಶಶಿ. ನೀನು ಜೊತೆಯಿಲ್ಲದ ದಿನಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಿನ್ನ ತೊಡೆಯ ಮೇಲೆ ಮಲಗಿ, ನಿನ್ನ ಒರಟು ಕೈಗಳು ಹಣೆಯನ್ನು ಮೆಲ್ಲಗೆ ನೇವರಿಸುತ್ತಿರುವ ಘಳಿಗೆಯಲ್ಲಿಯೇ ಜೀವದ ಜಾತ್ರೆ ಮುಗಿದು ಬಿಡಬೇಕು. ನೀನಿಲ್ಲದ ಕ್ಷಣಗಳು ಸಾವಿಗಿಂತ ಕ್ರೂರವಾಗಿರುತ್ತವೆ’ ಎಂದವಳು ನೀನು. “ಹುಚ್ಚು ಹುಡುಗಿ, ಖುಷಿಯನ್ನು ತೋಳತೆಕ್ಕೆಯಲ್ಲಿ ಬಿಗಿದಪ್ಪಿಕೊಳ್ಳುತ್ತಿರುವ ಸಮಯದಲ್ಲಿ ಸಾವಿನ ಮಾತ್ಯಾಕೆ?’ ಎಂದು ಗದರಿಸಿದ್ದು ಈಗ ನೆನಪಾಗುತ್ತಿದೆ.
ಮೊದಲಿಂದಲೂ ನಮ್ಮಿಬ್ಬರ ಪ್ರೀತಿ ಗಟ್ಟಿಯಾಗಿ ಇರಲೇ ಇಲ್ಲವೆಂದು ನನಗೀಗ ಅನಿಸುತ್ತಿದೆ. ಸಣ್ಣ ಸಣ್ಣ ಸಂಗತಿಗಳಿಗೂ ನೀನು ಮುನಿಸಿಕೊಳ್ಳುತ್ತಿದ್ದೆ. ವಾರಗಟ್ಟಲೇ ನಿನ್ನ ಕರೆಯಿಲ್ಲದೆ ಫೋನ್ ನಿರ್ಜಿàವ ಬಿದ್ದುಕೊಂಡಿದ್ದರೂ ನಿನ್ನ ಕಲ್ಲು ಮನಸು ಕರಗುತ್ತಿರಲಿಲ್ಲ. ನಾನು ತಪ್ಪು ಮಾಡಿರದಿದ್ದರೂ, ಪ್ರತಿ ಸಲವೂ “ಕ್ಷಮಿಸು’ ಎಂದು ನಾನೇ ಸೋಲುತ್ತಿದ್ದೆ. ನನ್ನ ಅತ್ಯಂತ ದುಃಖದ ಕ್ಷಣಗಳಲ್ಲೂ ನೀನು ನಿನ್ನ ಕುಟುಂಬದ ಜೊತೆ ಖುಷಿ ಆಚರಿಸಿಕೊಳ್ಳುತ್ತಿದ್ದೆ. ಒಂದೇ ಒಂದು ಸಲವೂ “ಅಳಬೇಡ ಹೃದಯವೇ… ನಾನಿರುವೆ ನಿನ್ನ ಜೊತೆ’ ಎನ್ನಲಿಲ್ಲ. ಮಾತು ಮುರಿದು ಮೌನ ಆಳುವಾಗಲೆಲ್ಲ “ಇದು ನನ್ನ ಕೊನೆಯ ಕಾಲ್, ಇಲ್ಲಿಗೆ ಮುಗಿಸಿಬಿಡೋಣ. ಇನ್ನೆಂದೂ ನಿನಗೆ ನಾನು ಸಿಗೋದಿಲ್ಲ’ ಎಂಬ ಸಿದ್ಧ ಉತ್ತರ ರೆಡಿಯಾಗಿರುತ್ತಿತ್ತು. ಎಲ್ಲಿ ಪ್ರೀತಿಸಿದ (?) ಜೀವ ನೊಂದುಕೊಳ್ಳುತ್ತದೋ ಎಂದು ಅಳು ನುಂಗಿ ನಗಿಸುತ್ತಿದ್ದೆ. ನಿನ್ನ ಖುಷಿ ಖಾಯಮ್ಮಾಗಿರಲೆಂದು ಪ್ರತಿ ಸಲ ಸೋಲುತ್ತಿದ್ದೆ. ಈಗನ್ನಿಸುತ್ತಿದೆ… ಯಾವಾಗಲೋ ಕೊನೆಯಾಗಬೇಕಿದ್ದ ಪ್ರೀತಿಯ ನಂಟು, ಇಲ್ಲಿಯವರೆಗೂ ಎಳೆದುಕೊಂಡು ಬಂದಿದ್ದೇ ಆಶ್ಚರ್ಯ.
ಅದೊಂದು ದಿನ, “ಶಶಿ ನೀನು ನನ್ನನ್ನೆಷ್ಟು ಪ್ರೀತಿಸುತ್ತೀಯಾ? ನಾನು ಏನು ಕೇಳಿದರೂ ಕೊಡಿಸುತ್ತೀಯಾ? ಪ್ರೀತಿಗೋಸ್ಕರ ಸಣ್ಣ ಗಿಫ್ಟ್ ಕೊಡಲಾಗುವುದಿಲ್ಲವೆ?’ ಎಂದಾಗ ನನ್ನ ಪರಿಸ್ಥಿತಿ ವಿಷಮವಾಗಿದ್ದರೂ ಹೂಂಗುಟ್ಟಿದ್ದೆ. “ಗಿಪ್ಟ್’ ಕೊಡಿಸಲು ತಡವಾದಾಗ ನೀನಂದ ಮಾತುಗಳು ಇಂದಿಗೂ ಮನಸಿನಲ್ಲಿ ಉಳಿದುಬಿಟ್ಟಿವೆ. ಹಾಗೂ ಹೀಗೂ ನಿನಗೆ ದುಬಾರಿ ಚೂಡಿ ಕೊಡಿಸಿದಾಗ ನಿನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದೇ ಸಂತೋಷದಲ್ಲಿಯೇ “ನಿನ್ನ ತೋರು ಬೆರಳಿಗೆ ಉಂಗುರ ಮಾಡಿಸಿದ್ದೀನೋ, ಸಂತೋಷ ತಾನೆ?’ ಎಂದಾಗ ಅದೆಷ್ಟು ಪ್ರೀತಿಸುತ್ತೆ ಈ ಹುಡುಗಿ.. ಎಂದುಕೊಂಡು ಕಣ್ಣೀರಾಗಿದ್ದೆ. ಆದರೆ ಪ್ರತಿಸಲ ನೀನು ತೊಡಿಸೋ ಉಂಗುರದ ಮಾತು ಬಂದಾಗಲೆಲ್ಲ ನೀನು ಬಿಟ್ಟು ಹೋಗೋ ಮಾತಾಡಿ ನನ್ನ ಮನಸನ್ನು ನೋಯಿಸಿದೆ. ಆಗಲೇ ಗೊತ್ತಾಯ್ತು, ನನ್ನಂಥ ನಿಷ್ಪ್ರಯೋಜಕನ ಪ್ರೀತಿಗೆ ದುಬಾರಿ ಗಿಫ್ಟ್ ಕೊಡೋದು ಶುದ್ಧ ನಾಟಕ ಅಂತ. ಹುಡುಗಿಯರು ಹೀಗೂ ಇರ್ತಾರಾ? ಎಂಬ ನನ್ನ ಯಕ್ಷಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
ಸಾವಿರ ನದಿಗಳ ಪ್ರತೀಕವಾದ ಈ ಸಾಗರದ ಮರಳಿನ ಮೇಲೆ ನೀನು ಮಾಡಿದ ದ್ರೋಹವನ್ನು ಬರೆದುಬಿಟ್ಟೆ. ಸಾಗರದ ಅಲೆಗಳು “ಸಮಾಧಾನ ತಂದುಕೋ ಹುಡುಗ’ ಎಂದು ಎಲ್ಲವನ್ನೂ ಅಳಿಸಿಬಿಟ್ಟವು. ತೆಕ್ಕೆಗಟ್ಟಲೇ ಕಣ್ಣೀರನ್ನು ಸಮುದ್ರದ ಮಡಿಲಿಗೆ ಸುರಿದು ನಿರಾಳವಾಗಿ ಹೊಸ ಬದುಕನ್ನು ಬದುಕೋಣ ಎಂಬ ತುಂಬು ಹಂಬಲವನ್ನು ಹೆಗಲಿಗೇರಿಸಿಕೊಂಡೇ ಹೊರಬಂದಿದ್ದೇನೆ. ಈ ಸಲ ಮೋಸ ಹೋಗಲಾರೆ…ಕ್ಷಮಿಸಿಬಿಡು!
ನಾಗೇಶ್ ಜೆ. ನಾಯಕ