Advertisement

ವ್ಯವಹಾರ ಶುಲ್ಕ ರದ್ದಾಗದಿದ್ದರೆ ಕ್ಯಾಶ್‌ಲೆಸ್‌ ವಿಫ‌ಲ

12:05 PM Apr 07, 2017 | |

ಬೆಂಗಳೂರು: ನೋಟು ಆಮಾನ್ಯದ ಬಳಿಕ ನಗದು ರಹಿತ ವಹಿವಾಟು ವ್ಯವಸ್ಥೆಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆಯಾದರೂ ಈ ವ್ಯವಸ್ಥೆಯಡಿ ವಿಧಿಸಲಾಗುತ್ತಿರುವ ವ್ಯವಹಾರ ಶುಲ್ಕ ರದ್ದುಪಡಿಸದಿದ್ದರೆ ಕ್ಯಾಶ್‌ಲೆಸ್‌ ಆರ್ಥಿಕ ವ್ಯವಸ್ಥೆ ಯಶಸ್ವಿಯಾಗದು ಎಂದು ಅಸೋಚಾಮ್‌ ತಿಳಿಸಿದೆ. 

Advertisement

ಅಸೋಚಾಮ್‌ ಹಾಗೂ ಆರ್‌ಎನ್‌ಸಿಒಎಸ್‌ ಜಂಟಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ “ಇಂಡಿಯನ್‌ ಪಾಯಿಂಟ್‌ ಆಫ್ ಸೇಲ್‌ ಮಾರ್ಕೆಟ್‌’ ಅಧ್ಯಯನ ವರದಿ ಪ್ರಕಾರ, ದೇಶದಲ್ಲಿ ಸದ್ಯ ನಗದು ರಹಿತ ಭಾಗವಾದ “ಪಾಯಿಂಟ್‌ ಆಫ್ ಸೇಲ್‌’ ವ್ಯವಹಾರ ಪ್ರಮಾಣ 63,500 ಕೋಟಿ ರೂ. ಇದ್ದು, 2022ರ ವೇಳೆಗೆ ಈ ವ್ಯವಹಾರ ಪ್ರಮಾಣ 7.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಆದರೆ, ಇದಕ್ಕೆ ವ್ಯವಹಾರ ಶುಲ್ಕ ಪಾವತಿ ದೊಡ್ಡ ಮಟ್ಟದ ಅಡ್ಡಿಯಾಗಿದೆ.

ಅದನ್ನು ರದ್ದು ಮಾಡದೇ ಹೋದರೆ ಕ್ಯಾಶ್‌ಲೆಸ್‌ ವ್ಯವಸ್ಥೆ ಜಾರಿ ಯಶಸ್ವಿಯಾಗದು ಎಂದು ಹೇಳಲಾಗಿದೆ. ನಗರದಲ್ಲಿ ಗುರುವಾರ ಅಸೋಚಾಮ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ರಾವತ್‌, ಕರ್ನಾಟಕ ಪ್ರಾದೇಶಿಕ ಮಂಡಳಿ ಅಧ್ಯಕ್ಷ ಆರ್‌.ಶಿವಕುಮಾರ್‌ ಅಧ್ಯಯನ ವರದಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಡಿ.ಎಸ್‌.ರಾವತ್‌, “ದೇಶದಲ್ಲಿ ನೋಟು ಅಮಾನ್ಯದ ಬಳಿಕ “ಪಾಯಿಂಟ್‌ ಆಫ್ ಸೇಲ್‌’ (ಪಿಒಎಸ್‌) ಯಂತ್ರದ ಮೂಲಕ ನಗದುರಹಿತ ವ್ಯವಹಾರ ಪ್ರಮಾಣ ಹೆಚ್ಚಾಗಿದೆ.

2016ರವರೆಗೆ 16 ಲಕ್ಷ ಪಿಒಎಸ್‌ ಯಂತ್ರಗಳ ಬಳಕೆಯಿದ್ದು, 2022ರ ವೇಳೆಗೆ ಇದು 76 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ದೇಶದಲ್ಲಿ 74 ಕೋಟಿ ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ಗಳಿದ್ದು, ಪಿಒಎಸ್‌ ಉಪಕರಣಗಳ ಬಳಕೆಗೆ ಸಾಕಷ್ಟು ಅವಕಾಶವಿದೆ’ ಎಂದು ವಿವರಿಸಿದರು. ಪಿಒಎಸ್‌ ಯಂತ್ರ ಬಳಸುವ ಮಳಿಗೆದಾರರಿಗೆ ಪ್ರತಿ ವ್ಯವಹಾರಕ್ಕೆ ಶೇ.2, ಶೇ.3ರಷ್ಟು ವ್ಯವಹಾರ ಶುಲ್ಕ ವಿಧಿಸುವುದು ನ್ಯಾಯವಲ್ಲ. ಶುಲ್ಕ ವಿಧಿಸಿದರೆ ಅವರು ಅದನ್ನು ಗ್ರಾಹಕರ ಮೇಲೆ ಹೇರುವುದರಿಂದ ಬಳಕೆದಾರರಿಗೆ ಹೊರೆಯಾಗಲಿದೆ ಎಂದರು.

ಸುರಕ್ಷತೆಗೆ ಒತ್ತು ಅಗತ್ಯ: ಪಿಒಎಸ್‌ ಯಂತ್ರದಡಿ ವ್ಯವಹಾರ ಹೆಚ್ಚಾದಂತೆ ಬಳಕೆದಾರರ ಖಾಸಗಿತನ, ಸುರಕ್ಷತೆ, ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಒತ್ತು ನೀಡಬೇಕು. ಜತೆಗೆ ಟೆಲಿಕಾಂ ಮೂಲ ಸೌಕರ್ಯ, ಗುಣಮಟ್ಟದ ಇಂಟರ್‌ನೆಟ್‌ ಸೇವೆ, ಬಳಕೆದಾರರ ಹಣಕಾಸು ವ್ಯವಹಾರಕ್ಕೆ ಸುರಕ್ಷತೆ ಒದಗಿಸುವುದು ಪ್ರಮುಖವಾಗಿದೆ. ಸೈಬರ್‌ ಆರ್ಥಿಕ ಅಕ್ರಮಗಳ ತಡೆ ಕ್ರಮಗಳ ಅಗತ್ಯದ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಹೇಳಿದರು.

Advertisement

“ಒಂದು ಪಿಒಎಸ್‌ ಯಂತ್ರದ ಬೆಲೆ 8ರಿಂದ 10 ಸಾವಿರ ರೂ. ಇದೆ. ಈ ಯಂತ್ರ ಬಳಸುವವರಿಗೆ ಬ್ಯಾಂಕ್‌ಗಳು 800 ರೂ.ನಿಂದ 1000 ರೂ. ಮಾಸಿಕ ಶುಲ್ಕ ವಿಧಿಸುತ್ತಿದ್ದು, ಇದನ್ನು 100 ರೂ.ಗೆ ಇಳಿಕೆ ಮಾಡಬೇಕು. ಪಿಒಎಸ್‌ ಯಂತ್ರಗಳ ಬೇಡಿಕೆ ಮತ್ತು ಪೂರೈಕೆ ನಡುವೆ ದೊಡ್ಡ ಅಂತರವಿದೆ. ಯಂತ್ರಗಳನ್ನು ಇಂದಿಗೂ ಆಮದು ಮಾಡಿಕೊಳ್ಳಲಾಗುತ್ತಿದ್ದು, ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ಪರವಾನಗಿ ನೀಡುವುದು ಸೂಕ್ತ’ ಎಂದು ಹೇಳಿದರು.

ನಗದುರಹಿತ ಆರ್ಥಿಕ ವ್ಯವಸ್ಥೆ ತರಬೇಕೆಂಬುದು ಸರ್ಕಾರದ ಚಿಂತನೆಯೇ ಹೊರತು ಜನರದ್ದಲ್ಲ. ಸರ್ಕಾರದ ಪ್ರಯತ್ನಕ್ಕೆ ಸ್ಪಂದಿಸುವವರಿಗೆ ವ್ಯವಹಾರ ಶುಲ್ಕ ವಿಧಿಸಿ ಹೊರೆ ಉಂಟು ಮಾಡುವುದು ಸರಿಯಲ್ಲ. ನಗದುರಹಿತ ಆರ್ಥಿಕತೆಯ ಪರಿಕಲ್ಪನೆಯ ಯಶಸ್ವಿಯಾಗಬೇಕಾದರೆ ವ್ಯವಹಾರ ಶುಲ್ಕ ವಿಧಿಸುವುದನ್ನು ರದ್ದುಪಡಿಸಬೇಕು. ವ್ಯವಹಾರ ಶುಲ್ಕ ವಿಧಿಸುವುದನ್ನು ರದ್ದುಪಡಿಸುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
-ಡಿ.ಎಸ್‌.ರಾವತ್‌, ಅಸೋಚಾಮ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next