Advertisement

ಸಂಗಮದಲ್ಲಿ ಸ್ನಾನ ಮಾಡಿದ್ರೆ ಪಾಪ ತೊಳೆದು ಹೋಗುತ್ತೆ

07:28 AM Feb 18, 2019 | |

ಮೈಸೂರು: ಮನುಷ್ಯ ಜೀವನದಲ್ಲಿ ಮಾಡಿದ ಪಾಪಗಳನ್ನು ತೊಳೆದುಕೊಂಡು ಪುಣ್ಯವನ್ನು ಸಂಪಾದಿಸಲು ಸಂಗಮ ಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಬೇಕು. ಮಾಘಮಾಸದಲ್ಲಿ ಜರುಗುವ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಜೀವನದಲ್ಲಿ ಮಾಡಿದ ಪಾಪವೆಲ್ಲ ತೊಳೆದುಕೊಂಡು ಹೋಗಿ ಫ‌ಲ ಸಿಗುತ್ತೆ. ಋಷಿ-ಮುನಿಗಳಿಗೆ ಈ ಪವಿತ್ರ ಸ್ನಾನ ಬಹಳ ಶ್ರೇಷ್ಠವಾದುದ್ದು.

Advertisement

ವರ್ಷದ 12 ತಿಂಗಳೂ ದುಡಿದು- ತಿನ್ನುವುದರಲ್ಲೇ ಜೀವನ ಕಳೆದುಕೊಳ್ಳುವುದರಲ್ಲಿ ಏನು ಅರ್ಥವಿಲ್ಲ. ಅದಕ್ಕಾಗಿ ಕಳೆದ 20 ವರ್ಷಗಳ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದು, ವರ್ಷದ ಜ್ಯೋತಿಷ್ಯ ಹೇಳುವುದು, ಧಾರ್ಮಿಕ ಪ್ರವಚನಗಳನ್ನು ನೀಡುವ ಜೊತೆ ಜೊತೆಗೆ ಹನ್ನೊಂದು ತಿಂಗಳು ನನ್ನ ವೈಯಕ್ತಿಕ ಬದುಕು ನೋಡಿಕೊಳ್ಳುತ್ತೇನೆ. ಇನ್ನು ಒಂದು ತಿಂಗಳು ಪೂರ್ತಿ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲು ಮುಡಿಪಾಗಿಟ್ಟಿದ್ದೇನೆ ಎನ್ನುತ್ತಾರೆ ಊಟಿಯ ಶ್ರೀರಾಘವೇಂದ್ರ ಸೇವಾಲಯದ ಸದ್ಗುರು ಭಾಗ್ಯಶ್ರೀರಾಮಸ್ವಾಮಿಗಳು. 

ಇದುವೇ ಕಾಶಿ ಎಂಬ ಭಾವನೆ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ವೇಳೆ ಉದಯವಾಣಿ ಜೊತೆಗೆ ಮಾತನಾಡಿದ ಅವರು, ಒಂದು ತಿಂಗಳ ತೀರ್ಥಯಾತ್ರೆಯ ನಿಮಿತ್ತ ಕಾಶಿ, ಕುರುಕ್ಷೇತ್ರ, ಋಷಿಕೇಶ, ಹರಿದ್ವಾರ, ಪ್ರಯಾಗ, ವೈಷ್ಣೋದೇವಿ, ಮಹಾಕಾಳಿ, ಕೇರಳ, ತಮಿಳುನಾಡಿನ ತೀರ್ಥ ಕ್ಷೇತ್ರಗಳಿಗೆಲ್ಲಾ ಹೋಗಿಬಂದಿದ್ದೇನೆ. ಮೂರು ದಿನಗಳ ಹಿಂದೆ ಬೆಂಗಳೂರಿನ ಓಂಕಾರ ಆಶ್ರಮಕ್ಕೆ ಬಂದು ವಾಸ್ತವ್ಯ ಹೂಡಿದ್ದಾಗ,

ಆಶ್ರಮದಲ್ಲಿ ಪತ್ರಿಕೆ ಓದುವಾಗ ಕುಂಭಮೇಳದ ಸುದ್ದಿ ತಿಳಿದು ಇದೇ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಶನಿವಾರ ಸಂಜೆಯೇ ತಿ.ನರಸೀಪುರಕ್ಕೆ ಬಂದಿದ್ದು, ಭಕ್ತಾದಿಗಳಿಗೆ ವಸತಿ, ಊಟದ ವ್ಯವಸ್ಥೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ. ಇಲ್ಲಿ ನದಿಗಿಳಿದು ಪುಣ್ಯಸ್ನಾನ ಮಾಡುವಾಗ ಧಾರ್ಮಿಕ ಭಾವನೆ ಜಾಗೃತವಾಗುತ್ತೆ. ಇದುವೇ ಕಾಶಿ ಎಂಬ ಭಾವನೆ ನನಗೆ ಬರುತ್ತಿದೆ ಎಂದು ತಿಳಿಸಿದರು.

ತಿ.ನರಸೀಪುರ ತಾಲೂಕಿನ ಕೆಬ್ಬೆಹುಂಡಿಯವರೇ ಆದ ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶೀಲಾ ಎನ್‌. ಅವರು ಕುಂಭಮೇಳಕ್ಕಾಗಿಯೇ ಕುಟುಂಬ ಸಮೇತ ಬಂದು ಮುಂಜಾನೆಯೇ ನದಿಗಿಳಿದು ಪುಣ್ಯ ಸ್ನಾನ ಮಾಡಿದರು.

Advertisement

ಮನಸ್ಸಿಗೆ ನೆಮ್ಮದಿ: ಇಲ್ಲಿನವರೇ ಆಗಿರುವುದರಿಂದ ಚಿಕ್ಕಂದಿನಿಂದ ನಾವು ಕಂಡಂತೆ ಕುಂಭಮೇಳದ ಸಿದ್ಧತೆಯೂ ಅಷ್ಟೇನು ಇರುತ್ತಿರಲಿಲ್ಲ. ಭಕ್ತರೂ ಹೆಚ್ಚು ಬರುತ್ತಿರಲಿಲ್ಲ. ಆದರೆ, ಈ ಬಾರಿ ಕುಂಭಮೇಳದ ಸಿದ್ಧತೆ ಚೆನ್ನಾಗಿದೆ. ಜನರ ಸುರಕ್ಷತೆ ದೃಷ್ಟಿಯಿಂದ ಭದ್ರತೆ ಹೆಚ್ಚಿಸಿ, ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಜನರಲ್ಲಿ ಧಾರ್ಮಿಕ ಭಾವನೆ ಹೆಚ್ಚುತ್ತಿರುವುದರಿಂದ ಹೆಚ್ಚು ಹೆಚ್ಚು ಜನ ಪುಣ್ಯಸ್ನಾನಕ್ಕೆ ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದರಿಂದ ನಾವು ಮಾಡಿರುವ ಪಾಪ ಕಳೆದು ಒಳ್ಳೆಯದಾಗುತ್ತೆ ಎಂಬ ಭಾವನೆ ಜೊತೆಗೆ ಮನಸ್ಸಿಗೆ ನೆಮ್ಮದಿಯೂ ಸಿಗುತ್ತೆ.

ನದಿ ಮಲಿನ ಮಾಡಬಾರದು – ಫ‌ಲ ತಗೊಂಡು ಹೋಗಿ: ಆದರೆ, ಇತ್ತೀಚೆಗೆ ಕೆಲವರಲ್ಲಿ ತೀರ್ಥ ಕ್ಷೇತ್ರಗಳಿಗೆ ಹೋದರೆ ಅಲ್ಲಿ ಬಟ್ಟೆ ಬಿಟ್ಟು ಬರಬೇಕು ಎಂದು ಯಾರು ಹೇಳಿಕೊಟ್ಟರೋ, ತಮ್ಮ ಮನೆಯಲ್ಲಿರುವ ಹಳೇಯ ಬಟ್ಟೆಯನ್ನೆಲ್ಲಾ ತಂದು ನದಿಯಲ್ಲಿ ಬಿಟ್ಟು ಮಲಿನ ಮಾಡಿ ಹೋಗುತ್ತಾರೆ. ಪುಣ್ಯನದಿಯಲ್ಲಿ ಪವಿತ್ರ ಸ್ನಾನ ಮಾಡಿ ಫ‌ಲ ತಗೊಂಡು ಹೋಗಬೇಕು ಎಂದು ಇದೇ ಮೊದಲ ಬಾರಿಗೆ ತಮ್ಮ 25 ಜನ ಶಿಷ್ಯರೊಂದಿಗೆ ಕುಂಭಮೇಳಕ್ಕೆ ಬಂದಿರುವ ಶಿವಮೊಗ್ಗದ ಅವಧೂತ ವಿಶ್ವನಾಥ ಶಾಸ್ತ್ರಿಗಳು ಉದಯವಾಣಿಗೆ ತಿಳಿಸಿದರು.

ಸಿದ್ಧತೆ ಚೆನ್ನಾಗಿದೆ: ಉತ್ತರ ಭಾರತದಲ್ಲಿ ಜರುಗುವ ಕುಂಭಮೇಳ, ಶ್ರೀರಂಗಂ, ಗಾಣಗಾಪುರ ಸೇರಿದಂತೆ ಎಲ್ಲ ತೀರ್ಥಕ್ಷೇತ್ರಗಳಿಗೂ ಹೋಗಿ ಬರುತ್ತಲೇ ಇರುತ್ತೇನೆ. 2017ರಲ್ಲಿ ಶ್ರೀರಂಗಪಟ್ಟಣದಲ್ಲಿ ಏರ್ಪಡಿಸಿದ್ದ ಕಾವೇರಿ ಪುಷ್ಕರದಲ್ಲೂ ಭಾಗವಹಿಸಿದ್ದೆ. ಆದರೆ, ಸರ್ಕಾರ ಕಾವೇರಿ ಪುಷ್ಕರಕ್ಕೆ ಏನೇನೂ ಸೌಲಭ್ಯ ಒದಗಿಸಿರಲಿಲ್ಲ.

ಆದರೆ, ಇಲ್ಲಿನ ಕುಂಭಮೇಳಕ್ಕೆ ಸಿದ್ಧತೆ ತುಂಬಾ ಚೆನ್ನಾಗಿದೆ. ಭಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸೋಪು-ಶ್ಯಾಂಪು ಬಳಸದೆ, ನದಿಯಲ್ಲಿ ಹಳೆ ಬಟ್ಟೆ ಬಿಟ್ಟು ಮಲಿನ ಮಾಡಬಾರದು ಎಂಬ ಜಾಗೃತಿ ಜನರಲ್ಲಿ ಮೂಡಬೇಕು ಎನ್ನುತ್ತಾರೆ ಮಂತ್ರಾಲಯದಿಂದ ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮದಲ್ಲಿ ಕುಂಭಸ್ನಾನಕ್ಕೆ ಆಗಮಿಸಿದ್ದ ಜೆ.ಪಿ.ವೀರೇಶ್‌.

Advertisement

Udayavani is now on Telegram. Click here to join our channel and stay updated with the latest news.

Next