ಕಲಬುರಗಿ: ದೇಶದ ಸೇವೆ ಮಾಡುವ ಸನ್ಯಾಸತ್ವ ಸ್ವೀಕರಿಸಿ, ನಾವು ನಿಮ್ಮ ಪಾದಪೂಜೆ ಮಾಡುತ್ತೇವೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಸಚಿವ ಲಕ್ಷ್ಮಣ ಸವದಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ನೀಡಿದರು.
ನಗರದ ಶರಣಬಸವೇಶ್ವರ ವಾಣಿಜ್ಯ ಮಹಾ ವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ರವಿವಾರ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ “ಮೈ ಭೀ ಚೌಕಿದಾರ್ ಅಭಿಯಾನ’ದ ಭಾಗವಾಗಿ ದೇಶದ ಜನತೆಯೊಂದಿಗೆ ನಡೆದ ಸಂವಾದ ಕಾರ್ಯಕ್ರಮ ವೀಕ್ಷಿಸಿ, ನಂತರ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಕುಂಭಮೇಳ ಯಶಸ್ವಿಯಲ್ಲಿ ಶ್ರಮಿಸಿದ್ದ ಸಫಾಯಿ ಕರ್ಮಚಾರಿಗಳ ಪಾದಪೂಜೆ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ಪಾದ ತೊಳೆಯುವುದರಿಂದ ಕರ್ಮಚಾರಿಗಳ ಉದ್ಧಾರ ಆಗುವುದಾದರೆ ನಮ್ಮ ಪಾದವನ್ನು ತೊಳೆಯಿರಿ ಎಂದು ಹೇಳಿದ್ದಾರೆ. ಆದರೆ, 60 ವರ್ಷ ದೇಶ ಆಳಿದ ಕಾಂಗ್ರೆಸ್ ಸಫಾಯಿ ಕರ್ಮಚಾರಿಗಳ ಉದ್ಧಾರಕ್ಕೆ ಏನು ಮಾಡಿದೆ ಎನ್ನುವುದನ್ನು ತಿಳಿಸಲಿ ಎಂದು ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ತಾವು ಹೇಳಿದಂತೆ ದೇಶಕ್ಕೆ ಅಚ್ಛೆ ದಿನ್‌ಗಳನ್ನು ತಂದಿದ್ದಾರೆ. ಭ್ರಷ್ಟಾಚಾರಿಗಳನ್ನು ರಸ್ತೆಗೆ ತಂದು ನಿಲ್ಲಿಸುತ್ತೇನೆಂದು ಮೋದಿ ಹೇಳಿದ್ದರು. ಅದರಂತೆ ನೋಟ್ ಬ್ಯಾನ್ ಮಾಡಿ ಮಾಜಿ ಮುಖ್ಯಮಂತ್ರಿಗಳು, ಸಚಿವರನ್ನು ರಸ್ತೆಗೆ ತಂದು ನಿಲ್ಲಿಸಿದ್ದು ಅಚ್ಛೆ ದಿನ್ ಅಲ್ವೇ? ಈ ಹಿಂದೆ ಭಾರತೀಯ ಸೈನಿಕರ ಶಿರಚ್ಛೇಧ ಮಾಡಿದರೂ ಯಾರೂ ಕೇಳುತ್ತಿರಲಿಲ್ಲ. ಮೋದಿ ಆಡಳಿತದಲ್ಲಿ 44 ಭಾರತೀಯ ಯೋಧರ ಸಾವಿಗೆ ಪ್ರತೀಕಾರವಾಗಿ 350 ಉಗ್ರರ ಸಂಹಾರ ಮಾಡಲಾಯಿತು. ಆಕಸ್ಮಿಕವಾಗಿ ಗಡಿದಾಟಿದ ಯೋಧ ಅಭಿನಂದನ್ ಕೇವಲ ಎರಡೇ ದಿನಗಳಲ್ಲಿ ಜೀವಂತವಾಗಿ ವಾಪಸ್ ಬಂದಿದ್ದು ಅಚ್ಛೆ ದಿನ್ ಅಲ್ವೇ ಎಂದು ಸಭಿಕರನ್ನು ಪ್ರಶ್ನಿಸಿದರು.
ಮೋದಿ ಅವರು ವಿಜಯ್ ಮಲ್ಯ, ನೀರವ್ ಮೋದಿ ಅವರಂತ ಉದ್ಯಮಿಗಳ ಚೌಕಿದಾರಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ದೂರುತ್ತಿದ್ದಾರೆ. ಆದರೆ, ಯುಪಿಎ ಸರ್ಕಾರದ ಅವಧಿಯಲ್ಲೇ ವಿಜಯ ಮಲ್ಯ, ನೀರವ್ ಮೋದಿ ಅಂತವರಿಗೆ ಸಾಲ ನೀಡಿ ಸುಮ್ಮನೆ ಕುಳಿತುಕೊಳ್ಳಲಾಗಿತ್ತು. ಯಾವಾಗ ಮೋದಿ ಅವರು ಸಾಲ ಪಡೆದ ಉದ್ಯಮಿಗಳ ವಿರುದ್ಧ ಬಿಗಿ ಕ್ರಮ ತೆಗೆದುಕೊಂಡರೋ ಆಗ ಅವರು ದೇಶ ತೊರೆದರು. ಈಗ ಅದೇ ಮೋದಿ ಮತ್ತೆ ದೇಶ ತೊರೆದ ಉದ್ಯಮಿಗಳನ್ನು ವಾಪಸ್ ಕರೆತರುವ ಚೌಕಿದಾರಿ ಮಾಡುತ್ತಿದ್ದಾರೆ ಎಂದರು.
ಮೋದಿ ದೇಶಕ್ಕೆ ಶ್ರೇಷ್ಠ ಪ್ರಧಾನಿ. ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡುವ ಸಂಕಲ್ಪವನ್ನು ದೇಶದ ಜನತೆ ಮಾಡಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಡಾ| ಉಮೇಶ ಜಾಧವ್ ಗೆಲ್ಲುವುದು ಖಚಿತ. ನಂತರ ಉಮೇಶ ಜಾಧವ್ ದೆಹಲಿಯಲ್ಲಿ ಇರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ನಗರಾಧ್ಯಕ್ಷ, ಎಂಎಲ್‌ಸಿ ಬಿ.ಜಿ. ಪಾಟೀಲ, ಶಾಸಕರಾದ ಬಸವರಾಜ ಮತ್ತಿಮಡು, ದತ್ತಾತ್ರೇಯ ಪಾಟೀಲ ರೇವೂರ್, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ, ಮಾಜಿ ಜಿಪಂ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಬಿಜೆಪಿ ಕಾರ್ಯಕರ್ತರು, ಸೆಕ್ಯೂರಿಟಿ ಗಾರ್ಡ್‌ಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ನಾನು ಮೂರು ವರ್ಷ ಕಾಲ ಕಲಬುರಗಿಯಲ್ಲಿ ಜಿಲ್ಲಾಉಸ್ತವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಇಲ್ಲಿನ ಜನತೆಯ ನಾಡಿಮಿಡಿತ ಸರಿಯಾಗಿ ಬಲ್ಲೆ. ಎಲ್ಲಿ ಯಾವ ಬಟನ್ ಒತ್ತಿದರೆ, ಕೆಲಸವಾಗುತ್ತದೆ ಎನ್ನುವುದು ಗೊತ್ತಿದೆ. ನಾನು ಬಟನ್‌ಗಳನ್ನು ಒತ್ತುತ್ತೇನೆ. ಡಾ| ಉಮೇಶ ಜಾಧವ್ ಅವರೇ ನೀವು ಧೈರ್ಯವಾಗಿರಿ. ಕಲಬುರಗಿಯಲ್ಲಿ ನಿಮ್ಮ ಗೆಲುವು ನಿಶ್ಚಿತ.
ಲಕ್ಷ್ಮಣ ಸವದಿ, ಅಧ್ಯಕ್ಷ, ಬಿಜೆಪಿ ರೈತ ಮೋರ್ಚಾ
ದೇಶದ ಯುವಕರು ಕಂಡಂತ ಕನಸು ನನಸು ಆಗಲು ಮೋದಿ ಮತ್ತೂಮ್ಮೆ ಪ್ರಧಾನಿ ಆಗಬೇಕು. ಏ.23ರಂದು ಎಲ್ಲರೂ ಮುಂದೆ ಬಂದು ನನಗೆ ಮತ ಹಾಕಿ ಆರ್ಶೀವಾದ ಮಾಡಬೇಕು. ಆ ಮೂಲಕ ಮೋದಿ ಅವರು ಇನ್ನೊಮ್ಮೆ ಪ್ರಧಾನಿಯಾಗಲು ನಾವು-ನೀವು ಕೊಡುಗೆ ನೀಡೋಣ.
ಡಾ| ಉಮೇಶ ಜಾಧವ್, ಬಿಜೆಪಿ ಅಭ್ಯರ್ಥಿ