ಹರಿಹರ: ಜೀವಸೆಲೆಗಳಾಗಿರುವ ಕೆರೆಗಳ ಉಳಿಸದಿದ್ದರೆ ಸಕಲ ಜೀವಿಗಳಿಗೂ ಆಪತ್ತು ಎದುರಾಗಲಿದೆ ಎಂದು ನೀರಾವರಿ ತಜ್ಞ ನಿವೃತ್ತ ಇಂಜಿನಿಯರ್ ಬಸವರಾಜ್ ಕುಂಚೂರು ಹೇಳಿದರು. ನಗರದ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿಮಹಿಳಾ ಕಾಲೇಜಿನಲ್ಲಿ ಪರಸ್ಪರ ಬಳಗ ಏರ್ಪಡಿಸಿದ್ದ ನೀರಿನ ನಿರ್ವಹಣೆ ಕುರಿತ ಸಂವಾದದಲ್ಲಿ ಮಾತನಾಡಿದರು.
ಕೆರೆಗಳು ನಮ್ಮ ಜೀವಸೆಲೆಗಳಾಗಿವೆ. ನಮ್ಮ ಸ್ವಾರ್ಥದಿಂದ ಕೆರೆಗಳನ್ನು ನುಂಗಿ ನೀರು ಕುಡಿದಿದ್ದೇವೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ ಎಂದರು. ಇಂದು ದೇಶದಲ್ಲಿ ನೀರಿಗಾಗಿಹೊಡೆದಾಟ, ಬಡಿದಾಟ, ಪ್ರಾಣಹಾನಿಯೂ ಆಗುತ್ತಿವೆ. ಹಿಂದೆಯೂ ಬರಗಾಲ ಬರುತ್ತಿದ್ದವು ಆದರೆ ಕೆರೆ ಕಟ್ಟೆಗಳಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರಲಿಲ್ಲ.
ಆದರೆ ಇಂದುಮನುಷ್ಯನ ದುರಾಸೆಗೆ ಕೆರೆಗಳು ಕಣ್ಮರೆಯಾಗಿವೆ. ಕೆರೆಗಳಿರುವ ಜಾಗದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಅಂತರ್ಜಲ ಬತ್ತಿ ನೀರಿಗೆ ಬರ ಬಂದಿದೆ ಎಂದರು. ವಿಜ್ಞಾನ ತಂತ್ರಜ್ಞಾನ ಇರುವುದು ಮಾನವನ ಒಳಿತಿಗೆ. ಆದರೆ ಸ್ವಾರ್ಥಕ್ಕಾಗಿ ದುರ್ಬಳಕೆಯಾಗುತ್ತಿದೆ. ನೀರನ್ನು ಉತ್ಪತ್ತಿ ಮಾಡಲು ನಮಗೆ ಸಾಧ್ಯವಿಲ್ಲ, ಅದು ಪ್ರಕೃತಿಯ ಕೊಡುಗೆ.
ಆದ್ದರಿಂದ ನಾವು ನೀರನ್ನು ಅತಿ ಜಾಗರೂಕತೆಯಿಂದ ಉಪಯೋಗಿಸಬೇಕೆಂದರು. ಈಗ ಭೂಮಿಯ ಅಂತರಾಳದಲ್ಲಿರುವ ಜಲರಾಶಿ ಬರಿದಾಗಿದೆ. ನಮಗೆ ನೀರಿನ ಬಗ್ಗೆ ಕಾಳಜಿವಹಿಸುವುದು ಅಗತ್ಯವಾಗಿದೆ ಎಂದರು. ಹಿಂದೆ ಕೆರೆಗಳು ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದವು. ಚಾಲುಕ್ಯ, ವಿಜಯನಗರ ಅರಸರ ಕಾಲದಲ್ಲಿ ಅತಿ ಹೆಚ್ಚು ಕೆರೆಗಳು ನಿರ್ಮಾಣಗೊಂಡವು.
ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ 72 ಕೆರೆಗಳು, 12 ಅಣೆಕಟ್ಟೆಗಳು ನಿರ್ಮಾಣಗೊಂಡಿದ್ದವು. ಹಿಂದೆ ಗೌಡ, ಪಟೇಲ, ತಳವಾರರ ಅಧೀನದಲ್ಲಿ ಸುರಕ್ಷಿತವಾಗಿದ್ದ ಕೆರೆಗಳು ಸರಕಾರದ ಅಧಿಧೀನಕ್ಕೊಳಪಟ್ಟ ನಂತರ ಒತ್ತುವರಿಯಾಗಿ ನಾಪತ್ತೆಯಾಗಿರುವುದು ದುರಂತ ಎಂದರು.
ಬೃಹತ್ ಅಣೆಕಟ್ಟೆಗಳ ನಿರ್ಮಾಣಕ್ಕಿಂತ ಸಣ್ಣ, ಪುಟ್ಟ ಬ್ಯಾರೇಜ್ ನಿರ್ಮಾಣ ತುಂಬಾ ಒಳ್ಳೆಯದು. ಕೆರೆಗಳಲ್ಲಿ ಸ್ವಾಭಾವಿಕವಾಗಿ ನೀರು ತುಂಬಿಕೊಳ್ಳಬೇಕು, ಕೃತಕವಾಗಿ ನದಿಗಳಿಂದ ನೀರು ತುಂಬಿಸುವುದು ಸೂಕ್ತವಲ್ಲ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಈ ರೀತಿ ನೀರು ತುಂಬಿಸಬಹುದಾಗಿದೆ ಎಂದರು.
ನಗರದ ನೀರಿನ ಅಭಾವ ನಿವಾರಿಸಲು ಅಗಸನಕಟ್ಟೆ ಕೆರೆ ಅಭಿವೃದ್ಧಿಪಡಿಸಲು ಮತ್ತು ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸಲು ಸರಕಾರದ ಮೇಲೆ ಒತ್ತಡ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು. ನಗರದ ಎಲ್ಲಾ ಸಂಘ-ಸಂಸ್ಥೆಗಳ ಸದಸ್ಯರ ಸಭೆ ಸೇರಿಸಿ ಚರ್ಚಿಸಿ ಹಂತ ಹಂತವಾಗಿ ಹೋರಾಟ ಕೈಗೊಳ್ಳಲು ನಿರ್ಧರಿಸಲಾಯಿತು. ಜೆ.ಕಲೀಂಭಾಷಾ, ದಿನೇಶ್, ಸುಬ್ರಹ್ಮಣ್ಯ ನಾಡಿಗೇರ್ ಮತ್ತಿತರರಿದ್ದರು.