ನವದೆಹಲಿ:ಹುಷಾರ್…ಒಂದು ವೇಳೆ ಈ ರಾಜ್ಯದ ಜನರು ಆನ್ ಲೈನ್ ನಲ್ಲಿ ಚೂರಿ ಅಥವಾ ಇನ್ಯಾವುದೇ ಆಯುಧ ಖರೀದಿಸಿದರೆ ಅವರ ಸಂಪೂರ್ಣ ವಿವರ ಪೊಲೀಸ್ ಇಲಾಖೆಯ ಕೈಸೇರಲಿದೆ ಎಂದು ವರದಿಯೊಂದು ತಿಳಿಸಿದೆ.
ಇಂತಹದ್ದೊಂದು ಆದೇಶ ಹೊರಡಿಸಿದ್ದು ಮಹಾರಾಷ್ಟ್ರದ ನಾಗ್ಪುರ್ ಪೊಲೀಸ್ ಇಲಾಖೆ. ಹೌದು ಇತ್ತೀಚೆಗೆ ಹೆಚ್ಚಳವಾಗುತ್ತಿರುವ ಅಪರಾಧದಿಂದಾಗಿ ಯಾರು ಆನ್ ಲೈನ್ ನಲ್ಲಿ ಚೂರಿ ಅಥವಾ ಇಲಾಖೆ ಪಟ್ಟಿ ಮಾಡಿದ ವಸ್ತುಗಳನ್ನು ಖರೀದಿಸುತ್ತಾರೋ ಅಂತಹ ವ್ಯಕ್ತಿಗಳ ವಿವರ ಇಲಾಖೆಗೆ ನೀಡಬೇಕೆಂದು ಆನ್ ಲೈನ್ ಮಾರ್ಕೆಟಿಂಗ್ ಕಂಪನಿಗಳಿಗೆ ನಾಗ್ಪುರ್ ಪೊಲೀಸ್ ಆದೇಶ ನೀಡಿದೆ.
ನಾಗ್ಪುರ್ ಪೊಲೀಸ್ ಕಮಿಷನರ್ ಈ ಆದೇಶ ಹೊರಡಿಸಿದ್ದು, ಇದರನ್ವಯ ಆನ್ ಲೈನ್ ಕಂಪನಿಗಳು ನಾಗ್ಪುರದಲ್ಲಿ ಚೂರಿ ಅಥವಾ ಇನ್ನಿತರ ಮಾರಕ ವಸ್ತುಗಳ ಖರೀದಿಸಿದವರ ಪೂರ್ಣ ಮಾಹಿತಿಯನ್ನು ಕ್ರೈಂ ಬ್ರ್ಯಾಂಚ್ ನ ಅಧಿಕೃತ ಇ ಮೇಲ್ ವಿಳಾಸಕ್ಕೆ ಕಳುಹಿಸುವಂತೆ ಸೂಚಿಸಿದೆ.
ಇದನ್ನೂ ಓದಿ:ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: LDF ಗೆ ಗೆಲುವು, ಬಿಜೆಪಿಗೆ ಈ ಬಾರಿ ಹೆಚ್ಚು ಸ್ಥಾನ
ನಾಗ್ಪುರದಲ್ಲಿ ಇತ್ತೀಚೆಗೆ ನಡೆದ ಎರಡು ಕೊಲೆ ಪ್ರಕರಣಗಳಲ್ಲಿ ಹರಿತವಾದ ಆಯುಧ ಬಳಸಿರುವುದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ನಾಗ್ಪುರ ಪೊಲೀಸರು ಸುಳಿವು ಪತ್ತೆಹಚ್ಚಲು ಈ ಮಾರ್ಗ ಅನುಸರಿಸಿರುವುದಾಗಿ ವರದಿ ತಿಳಿಸಿದೆ.