Advertisement
ಕನ್ನಡದಲ್ಲಿ ಟೈಪ್ ಮಾಡಲು ಯಾವ ಆ್ಯಪ್ ಒಳ್ಳೆಯದು ಎಂಬ ಗೊಂದಲ ಹಲವರಿಗಿದೆ. ನಾನು ಎಲ್ಲರಿಗೂ ಶಿಫಾರಸು ಮಾಡುವುದು ಜಸ್ಟ್ ಕನ್ನಡ ಆ್ಯಪ್ ಬಳಸಿ ಎಂದು. ಎಲ್ಲ ರೀತಿಯ ಕನ್ನಡ ಆ್ಯಪ್‌ಗ್ಳಿಗೆ ಹೋಲಿಸಿದರೆ ಜಸ್ಟ್ ಕನ್ನಡದಲ್ಲಿ ಕಡಿಮೆ ಸ್ಟ್ರೋಕ್‌ಗಳನ್ನು (ಒತ್ತುವಿಕೆ) ಬಳಸಿ ಕನ್ನಡ ಟೈಪ್ ಮಾಡಬಹುದು.
Related Articles
Advertisement
ಜಸ್ಟ್ ಕನ್ನಡದಲ್ಲಿ ಸಾವಿರಾರು ಪದಗಳನ್ನು ಈಗಾಗಲೇ ಪರಿಚಯಿಸಲಾಗಿದ್ದು, ನೀವು ಒತ್ತುವ ಪದಗಳನ್ನು ಹೋಲುವ ನಾಲ್ಕೈದು ಪದಗಳ ಪ್ರಿಡಿಕ್ಷನ್ ಸಹ ಮೂಡುತ್ತದೆ. ಬೆಂ ಎಂದು ಒತ್ತುತ್ತಿದ್ದಂತೆ ಬೆಂಬಲ, ಬೆಂಗಳೂರು ಇತ್ಯಾದಿ ಮೂಡುತ್ತದೆ. ಇಡೀ ಪದವನ್ನು ಒತ್ತುವ ಶ್ರಮವಿಲ್ಲದೆ ಕೀಲಿಮಣೆಯ ಮೇಲ್ಭಾಗದಲ್ಲಿ ಮೂಡುವ ಈ ಪದದ ಮೇಲೆ ಒತ್ತಿದರೆ ಸಾಕು ಅದು ನಿಮ್ಮ ಬರಹದಲ್ಲಿ ಸೇರಿಕೊಳ್ಳುತ್ತದೆ.
ಇಮೋಜಿಗಳು, ಶುಭಾಶಯಗಳು: ಜಸ್ಟ್ ಕನ್ನಡದಲ್ಲಿ ಇಮೋಜಿಗಳು, ಶುಭಾಶಯ ಸಂದೇಶಗಳು, ಸ್ಟಿಕರ್‌ಗಳನ್ನು ಸಹ ಸೇರಿಸಲಾಗಿದೆ. ವಾಟ್ಸಪ್ ಬಳಸಿದಾಗ ನಿಮಗೆ ವಾಟ್ಸಪ್‌ನದ್ದೇ ಇಮೋಜಿಗಳು ದೊರಕುತ್ತವೆ. ಶುಭೋದಯ, ಶುಭರಾತ್ರಿ, ಹಬ್ಬದ ಶುಭಾಶಯಗಳು, ಜನ್ಮ ದಿನದ ಶುಭಾಶಯಗಳ ಸ್ಟಿಕರ್ ಕೂಡ ಅದರಲ್ಲೇ ಇದೆ. ಕೆಳಗಿನ ಸಾಲಿನಲ್ಲಿ ಅಕ್ಷರಗಳ ಗುಂಡಿಗಳ ಪಕ್ಕ ಇದೆ. ಇದನ್ನು ಒತ್ತಿ ಹಾಗೇ ಹಿಡಿದರೆ ಇಮೋಜಿಗಳು ತೆರೆದುಕೊಳ್ಳುತ್ತವೆ.
ಜಸ್ಟ್ ಕನ್ನಡವನ್ನು ಅಳವಡಿಸಿಕೊಳ್ಳುವ ವಿಧಾನ: ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಜಸ್ಟ್ ಕನ್ನಡ ಕೀ ಬೋರ್ಡ್ ಎಂದು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ. ಜಸ್ಟ್ ಕನ್ನಡ ಆ್ಯಪ್ ಬರುತ್ತದೆ. ಇನ್‌ಸ್ಟಾಲ್ ಕೊಡಿ. ಡೌನ್‌ಲೋಡ್ ಮುಗಿದ ನಂತರ, ಸೆಟಪ್ ಬರುತ್ತದೆ. ನಂತರ ಎನೇಬಲ್ ಇನ್ ಸೆಟಿಂಗ್ ಬರುತ್ತದೆ. ಅಲ್ಲಿ ಜಸ್ಟ್ ಕನ್ನಡವನ್ನು ಎನೇಬಲ್ ಮಾಡಿ. ಓಕೆ ಕೊಡಿ. ಇನ್ನೆಲ್ಲ ಕೀಬೋರ್ಡ್‌ಗಳ ಆಯ್ಕೆ ಡಿಸೇಬಲ್ ಆಗಿರಲಿ. ನಂತರ ಸ್ವಿಚ್ ಇನ್‌ಪುಟ್ ಮೆಥೆಡ್ ಅಂತ ಇರುತ್ತದೆ. ಅದರಲ್ಲಿ ಜಸ್ಟ್ ಕನ್ನಡ ಆಯ್ಕೆ ಮಾಡಿಕೊಳ್ಳಿ. ಬಳಿಕ ಕಾನ್‌ಫಿಗರ್ ಲಾಂಗ್ವೇಜ್ ಅಂತ ಇರುತ್ತದೆ. ಅದಕ್ಕೆ ಹೋದಾಗ ಯೂಸ್ ಸಿಸ್ಟ್‌ಂ ಲಾಂಗ್ವೇಜ್ ಎಂಬುದು ಎನೇಬಲ್ ಆಗಿರುತ್ತದೆ. ಅದನ್ನು ಡಿಸೇಬಲ್ ಮಾಡಿ, ಬಳಿಕ ಇಂಗ್ಲಿಷ್, ಕನ್ನಡ, ಕನ್ನಡ ಮನವಲಸ, ಕನ್ನಡ ಲಿಪ್ಯಂತರಣ ಎಂಬ ಆಯ್ಕೆಗಳಿರುತ್ತವೆ. ಇದರಲ್ಲಿ ಇಂಗ್ಲಿಷ್ ಮತ್ತು ಕನ್ನಡ ಆಯ್ಕೆಗಳನ್ನು ಎನೇಬಲ್ ಮಾಡಿಕೊಳ್ಳಿ.
ನಿಮ್ಮ ಮೊಬೈಲ್‌ನ ಸೆಟ್ಟಿಂಗ್ ಗೆ ಹೋಗಿ. ಅಲ್ಲಿ ಲಾಂಗ್ವೇಜ್ ಅಂಡ್ ಇನ್‌ಪುಟ್ ಆಯ್ಕೆ ಮಾಡಿಕೊಳ್ಳಿ. ಡಿಫಾಲ್ಟ್ ಕೀ ಬೋರ್ಡ್‌ಗೆ ಹೋಗಿ, ಆಗ ಜಸ್ಟ್ ಕನ್ನಡ, ಜಿಬೋರ್ಡ್, ಸ್ವಿಫ್ಟ್ ಕೀ ಬೋರ್ಡ್ ಸೇರಿದಂತೆ ನಿಮ್ಮ ಮೊಬೈಲ್‌ನಲ್ಲಿರುವ ಇತರ ಕೀಬೋರ್ಡ್‌ಗಳ ಆಯ್ಕೆ ಬರುತ್ತದೆ. ಅದರಲ್ಲಿ ಜಸ್ಟ್ ಕನ್ನಡ ಆಯ್ದುಕೊಳ್ಳಿ. ಬೇರೆ ಕೀಬೋರ್ಡ್‌ಗಳನ್ನು ಡಿಸೇಬಲ್ ಮಾಡಿ.
ಗೂಗಲ್ ವಾಯ್ಸ ಟೈಪಿಂಗ್: ಜಸ್ಟ್ ಕನ್ನಡ ಮಾತ್ರವಲ್ಲದೆ ಅದಕ್ಕೆ ಗೂಗಲ್ ವಾಯ್ಸ ಟೈಪಿಂಗ್ ಅನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡರೆ ಕನ್ನಡ ಟೈಪಿಂಗ್ ಇನ್ನೂ ಸರಾಗವಾಗುತ್ತದೆ. ಲಾಂಗ್ವೇಜ್ ಅಂಡ್ ಇನ್‌ಪುಟ್ ಸೆಟಿಂಗ್‌ಗೆ ಹೋದಾಗ ಜಸ್ಟ್ ಕನ್ನಡ ಆಯ್ಕೆ ಮೇಲೆ ಗೂಗಲ್ ವಾಯ್ಸ ಟೈಪಿಂಗ್ ಎಂಬ ಆಯ್ಕೆ ಇರುತ್ತದೆ. ಅದನ್ನು ಸಹ ಎನೇಬಲ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿದರೆ ಲಾಂಗ್ವೇಜಸ್ ಎಂಬ ಆಯ್ಕೆ ಬರುತ್ತದೆ. ಅದರಲ್ಲಿ ಇಂಗ್ಲಿಷ್ ಭಾಷೆಯನ್ನು ಡಿಸೇಬಲ್ ಮಾಡಿ, ಕೆಳಗೆ ಕನ್ನಡ ಭಾಷೆಯ ಆಯ್ಕೆ ಇದೆ ಅದನ್ನು ಸೆಲೆಕ್ಟ್ ಮಾಡಿಕೊಂಡು ಸೇವ್ ಎಂಬ ಆಯ್ಕೆಯನ್ನು ಒತ್ತಿ. ಈಗ ಜಸ್ಟ್ ಕನ್ನಡ ಕೀಲಿಮಣೆಯ ಮೇಲ್ಭಾಗದಲ್ಲಿ ಮೈಕಿನ ಚಿಹ್ನೆ ಬರುತ್ತದೆ. ಮೈಕಿನ ಚಿಹ್ನೆ ಒತ್ತಿದರೆ ಟ್ಯಾಪ್ ಟು ಸ್ಪೀಕ್ ಎಂದು ತೋರಿಸುತ್ತದೆ. ಆಗ ಬರುವ ಮಧ್ಯಭಾಗದ ಮೈಕ್ ಚಿಹ್ನೆ ಒತ್ತಿದರೆ ನಿಮ್ಮ ಧ್ವನಿಯನ್ನು ಅದು ಅಕ್ಷರವಾಗಿಸಲು ಸಿದ್ಧವಾಗುತ್ತದೆ. ಈಗ ಫೋನನ್ನು ಹತ್ತಿರ ಇಟ್ಟುಕೊಂಡು ಮಾತನಾಡಿ, ನೀವು ಕನ್ನಡದಲ್ಲಿ ಮಾತನಾಡಿದ ಶಬ್ದಗಳು ಒಡಮೂಡುತ್ತವೆ!
ಗೂಗಲ್‌ನವರು ಎಷ್ಟು ಚೆನ್ನಾಗಿ ಇದನ್ನು ಸಿದ್ಧಪಡಿಸಿದ್ದಾರೆಂದರೆ ಕನ್ನಡದ ಶೇ. 95 ರಷ್ಟು ಪದಗಳು ನೀವು ಹೇಳಿದಂತೆ ಮೂಡುತ್ತವೆ. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಬೇಕಷ್ಟೆ. ಒಂದು ಸ್ಪಷ್ಟನೆ. ನೀವು ವಾಟ್ಸಪ್‌ನಲ್ಲಿ ಟೈಪ್ ಮಾಡುವಾಗ ಗೂಗಲ್ ವಾಯ್ಸ ಟೈಪಿಂಗ್‌ನ ಮೈಕ್ ಮಾತ್ರವಲ್ಲದೇ, ವಾಟ್ಸಪ್ ಮೈಕ್ ಸಹ ಕಾಣುತ್ತದೆ. ಅದು ವಾಟ್ಸಪ್‌ನ ವಾಯ್ಸ ರೆಕಾರ್ಡಿಂಗ್ ಮೈಕ್ ಎಂಬುದು ನೆನಪಿರಲಿ. ಗೂಗಲ್ ವಾಯ್ಸ ಮೈಕ್ ಚಿಹ್ನೆ ವಾಟ್ಸಪ್ ಮೈಕ್ ಚಿಹ್ನೆಗಿಂತ ಸಣ್ಣದಾಗಿರುತ್ತದೆ.
ಜಸ್ಟ್ ಕನ್ನಡದಲ್ಲಿ ಟೈಪ್ ಮಾಡುವ ಮೂಲಕವೇ ಸಂದೇಶಗಳನ್ನು ಬರೆಯಬಹುದು. ಗೂಗಲ್ ವಾಯ್ಸ ಟೈಪಿಂಗ್ ನಲ್ಲಿ ಟೈಪ್ ಮಾಡದೇ ಕನ್ನಡ ಸಂದೇಶಗಳನ್ನು ಬರೆಯಬಹುದು. ವಾಯ್ಸ ಟೈಪಿಂಗ್ ಮಾಡಿ ಮುಗಿದ ಬಳಿಕ ಒಂದೊಂದು ಪದ ತಪ್ಪಾಗಿದ್ದರೆ ಅದನ್ನು ಜಸ್ಟ್ ಕನ್ನಡದ ಕೀಬೋರ್ಡ್ ಬಳಸಿ ಸರಿ ಮಾಡಿಕೊಳ್ಳಬಹುದು.
ಕೆ.ಎಸ್. ಬನಶಂಕರ ಆರಾಧ್ಯ