Advertisement
ಪರಿಸರ ನಮಗೆ ಸರ್ವಸ್ವವನ್ನೂ ಕೊಟ್ಟಿದೆ. ಉಸಿರಾಡಲು ಗಾಳಿ, ಕುಡಿಯಲು ನೀರು, ಸೇವಿಸಲು ಆಹಾರ, ವಾಸಿಸಲು ಶುಭ್ರ ವಾತಾವರಣ, ಬೆಳೆ ಬೆಳೆಯಲು ಭೂಮಿ, ಅದಕ್ಕೆ ಸಹಕಾರಿಯಾಗುವ ಮಳೆ, ಮನುಕುಲ ಮಾತ್ರವಿದ್ದರೆ ಆತನಿಗೆ ಏಕಾಂಗಿತನ ಕಾಡಬಹುದೆಂದು ಲಕ್ಷಲಕ್ಷ ಜೀವರಾಶಿಗಳು. ಇಷ್ಟೆಲ್ಲವನ್ನು ಕೊಟ್ಟ ಪರಿಸರವನ್ನೊಮ್ಮೆ ನಿಷ್ಕಲ್ಮಶ ಹೃದಯದಿಂದ ಪ್ರೀತಿಸಿ ನೋಡಿ, ಅದೂ ಪ್ರೀತಿಸುತ್ತದೆ! ಅದನ್ನು ರಕ್ಷಿಸಿ ನೋಡಿ, ನಮ್ಮನ್ನು ರಕ್ಷಿಸುತ್ತದೆ! ಒಂದು ವೇಳೆ ಪ್ರೀತಿಸದೆ, ರಕ್ಷಿಸದೆ ನಮ್ಮ ಸ್ವಾರ್ಥವನ್ನು ನೀಗಿಸಲು ಭಕ್ಷಿಸಲು ಮುಂದಾದರೆ, ಪರಿಸರ ಪ್ರಳಯ ರುದ್ರನಾಗಿ ಸೃಷ್ಠಿಯ ನಾಶಕ್ಕೆ ಮುಂದಾಗುವುದರಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಇದಕ್ಕೆ ಅನೇಕ ನಿದರ್ಶನಗಳು ನಮ್ಮ ಕಣ್ಣೆದುರಿಗೇ ಇವೆ.
Related Articles
Advertisement
ಇನ್ನು ಪರಿಸರ ದಿನದ ಪ್ರಯುಕ್ತ ಗಿಡಗಳನ್ನು ನೆಟ್ಟರೆ ಸಾಲದು, ಅವುಗಳನ್ನು ಪೋಷಿಸುವ ಅಗತ್ಯತೆ ಹೆಚ್ಚಿದೆ. ಏಕೆಂದರೆ ಭಾರತದಲ್ಲಿ ವನಮಹೋತ್ಸವದ ಹೆಸರಲ್ಲಿ ನೆಡುವ ಗಿಡಗಳೆಲ್ಲಾ ಬೆಳೆದು ನಿಂತಿದ್ದರೆ ಈಗಿರುವ ಮರಗಳು ದುಪ್ಪಟ್ಟಾಗುತಿತ್ತು! ಭಾರತದಲ್ಲಾಗುವ ಮಳೆ ನೀರನ್ನು ಸಂಗ್ರಹಿಸಲು ನಾವು ಶಕ್ತರಾದರೆ ಮತ್ತು ನೀರಿನ ಮೂಲಗಳಾದ ನದಿ, ಸರೋವರ, ಕೆರೆ, ಬಾವಿಗಳನ್ನು ಉಳಿಸಿಕೊಂಡರೆ ಕುಡಿಯುವ ಮತ್ತು ಬಳಸುವ ನೀರಿಗೆ ಕೊರತೆ ಇರುವುದಿಲ್ಲ! ಕಾಡನ್ನು ಬೆಳೆಸಲಾಗದಿದ್ದರೂ ಅದನ್ನು ತನ್ನಷ್ಟಕ್ಕೆ ಬಿಟ್ಟರೆ ಅದುವೇ ಬೆಳೆಯುತ್ತದೆ ಮತ್ತು ಅಲ್ಲಿರುವ ಜೀವಿಗಳು ನಮಗೆ ತೊಂದರೆ ಕೊಡದೆ ಸುರಕ್ಷಿತವಾಗಿರುತ್ತವೆ. ಕಾರ್ಖಾನೆಗಳು, ವಾಹನಗಳಾದಿಯಾಗಿ ಹೊರಹೊಮ್ಮುವ ವಿಷಾನಿಲಗಳನ್ನು ಪ್ರಕೃತಿಗೆ ಹಾನಿಯಾಗದಂತೆ ತಂತ್ರಜ್ಞಾನಗಳು ತಡೆಯುವ ಸಾಮರ್ಥ್ಯವನ್ನು ಗಳಿಸಿದರೆ ಶುಭ್ರವಾದ ಗಾಳಿಯನ್ನೇ ಉಸಿರಾಡಬಹುದು. ನಾವು ಬಳಸುವ ವಸ್ತುಗಳೆಲ್ಲವೂ ಪರಿಸರಕ್ಕೆ ಹಾನಿ ಮಾಡದಿದ್ದರೆ ನಿಜಕ್ಕೂ ಅದ್ಭುತ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ. ಯೋಚಿಸಿ. ಎಲ್ಲವೂ ನಮ್ಮ ಕೈಯಲ್ಲೇ ಇದೆ.
ಇನ್ನು ಸರ್ಕಾರಗಳು ತರುವ ಯೋಚನೆಗಳು ಪರಿಸರಕ್ಕೆ ಪೂರಕವಾಗಿರಬೇಕು. ಈಗಾಗಲೇ ಚಾಲ್ತಿಯಲ್ಲಿರುವ ‘ನದಿಗಳನ್ನು ಉಳಿಸೋಣ’,’ಕಾವೇರಿಯ ಕೂಗು’,’ವೃಷಭಾವತಿಯ ಕೊನೆಯ ಕಣ್ಣೀರು’ ಮುಂತಾದ ಸಾಮಾಜಿಕ ಕಾರ್ಯಗಳಿಗೆ ಬಲತುಂಬೋಣ. ಈ ನಾಡಿನ ಬಹುದೊಡ್ಡ ಆಸ್ತಿ ಯುವಶಕ್ತಿ. ನಾವುಗಳು ಪರಿಸರ ರಕ್ಷಕರಾಗೋಣ. ಈ ನಾಡಿನಲ್ಲಿರುವ ಲಕ್ಷಾಂತರ ಶಾಲಾ ಕಾಲೇಜುಗಳು ನೀರನ್ನು ಸಂಗ್ರಹಿಸುವ ಮತ್ತು ಗಿಡಗಳನ್ನು ನೆಡುವ ಕೈಂಕಾರ್ಯಕ್ಕೆ ಮುಂದಾಗಿ ವಿದ್ಯಾರ್ಥಿ ಸಮೂಹಕ್ಕೆ ಪ್ರೇರಣೆಯನ್ನೊದಗಿಸಿದರೆ ಅದುವೇ ಪರಿಸರವನ್ನುಳಿಸುವ ಬಹುದೊಡ್ಡ ಚಳುವಳಿಯಾದರೆ ಅಚ್ಚರಿಪಡಬೇಕಾಗಿಲ್ಲ. ಕೊನೆಯದಾಗಿ ಸರ್ಕಾರಗಳು ಪರಿಸರದ ರಕ್ಷಣೆಗಾಗಿ ಕಠಿನ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಮತ್ತದನ್ನು ಪಾಲಿಸುವ ಮೂಲಕ ಪರಿಸರ ಕಂಟಕರಿಗೆ ಬಿಸಿಮುಟ್ಟಿಸುವುದಕ್ಕೆ ಮುಂದಾಗಬೇಕು. ಆಗ ‘ವಂದೆ ಮಾತರಂ’ ನಲ್ಲಿ ವರ್ಣಿಸಲಾದ ‘ಸುಜಲಾಂ, ಸುಫಲಾಂ,ಮಲಯಜ ಶೀತಲಾಂ, ಸಸ್ಯಶ್ಯಾಮಲಾಂ, ಮಾತರಂ’ ಎನ್ನುವ ಭಾರತ ಉಳಿಯಲು ಸಾಧ್ಯವಾಗುತ್ತದೆ.
ಅರುಣ್ ಕಿರಿಮಂಜೇಶ್ವರ, ವಿವೇಕಾನಂದ ಕಾಲೇಜು, ಪುತ್ತೂರು.