Advertisement

ಕಮಿಷನ್‌ ಕೊಡದಿದ್ದರೆ ಕೆಲಸವೇ ಆಗಲ್ಲ

03:29 PM Jun 02, 2022 | Team Udayavani |

ಹರಿಹರ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಕಮಿಷನ್‌ ಕೊಡದಿದ್ದರೆ ಯಾವ ಕೆಲಸ ಕಾರ್ಯಗಳೂ ನಡೆಯುವುದಿಲ್ಲ ಎಂದು ಶಾಸಕ ಎಸ್‌. ರಾಮಪ್ಪ ಆರೋಪಿಸಿದರು. ನಗರದ ರಾಘವೇಂದ್ರಸ್ವಾಮಿ ಮಠದ ಸಭಾಭವನದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಮಿಕ ಘಟಕದಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಜೆಪಿಯವರ ಮಾತಿಗೂ, ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ. ತಮ್ಮದು ಭ್ರಷ್ಟಾಚಾರ ರಹಿತ ಆಡಳಿತ ಎನ್ನುತ್ತಾರೆ. ಆದರೆ ಭ್ರಷ್ಟಾಚಾರವನ್ನೇ ಕಾನೂನುಬದ್ಧವಾಗಿಸಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

Advertisement

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರದಿಂದ ಗುತ್ತಿಗೆದಾರರು ಮಾತ್ರವದಲ್ಲದೆ ಜನಸಾಮಾನ್ಯರೂ ರೋಸಿ ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಇಡೀ ದೇಶವನ್ನು ಕೋಮು ದಳ್ಳುರಿಗೆ ನೂಕಿವೆ ಎಂದು ಕಿಡಿ ಕಾರಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ್ದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್‌ನಂತಹ ಯೋಜನೆಗಳಿಂದ ಹಸಿದ ಬಡವರ ಹೊಟ್ಟೆಗೆ ಅನ್ನ ಸಿಗುತ್ತಿದೆ. ಈಗಿನ ಬಿಜೆಪಿ ಸರ್ಕಾರ ಇಂತಹ ಒಂದೇ ಒಂದು ಜನಪರ ಯೋಜನೆಯನ್ನೂ ಜಾರಿಗೊಳಿಸಿಲ್ಲ ಎಂದರು.

ಕೇಂದ್ರದ ಮೋದಿ ಸರ್ಕಾರ ಸುಳ್ಳುಗಳನ್ನು ಪದೇ ಪದೇ ಹೇಳಿ ಜನರನ್ನು ಮರುಳು ಮಾಡಲು ಹೊರಟಿದೆ. ಕಾರ್ಮಿಕರ ಹಿತರಕ್ಷಣೆಗೆ ಜಾರಿಗೊಳಿಸಿದ್ದ 48 ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಮೋದಿ ಸರ್ಕಾರ ಉದ್ಯಮಿಗಳಿಗೆ ಸಹಾಯ ಮಾಡಿದೆ. ಆದರೆ ಕಾರ್ಮಿಕರು ತಮ್ಮ ಹಕ್ಕುಗಳಿಗೆ ಹೋರಾಟ ಮಾಡದಂತೆ ದಮನಗೊಳಿಸಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್‌ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಕೆ. ಪುಟ್ಟಸ್ವಾಮಿ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಅದಾನಿ, ಅಂಬಾನಿಯಂತಹ ಉದ್ಯಮಿಗಳ ರಕ್ಷಣೆಯೇ ಬಿಜೆಪಿ ಸರ್ಕಾರದ ಧ್ಯೇಯವಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಕಾರ್ಮಿಕರ, ರೈತರ ಹಿತರಕ್ಷಣೆ ಸಾಧ್ಯ ಎಂದರು.

Advertisement

ಪಕ್ಷದ ಕಾರ್ಮಿಕ ವಿಭಾಗದಿಂದ ತಲಾ ಹತ್ತು ಪ್ಲಂಬರ್‌ ಹಾಗೂ ಬಡಿಗೆ ಕಾರ್ಮಿಕರಿಗೆ ಟೂಲ್‌ ಕಿಟ್‌ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಜಿಲ್ಲಾದ್ಯಕ್ಷ ಎಚ್‌.ಬಿ. ಮಂಜಪ್ಪ, ರಾಜ್ಯ ವಕ್ತಾರ ಡಿ. ಬಸವರಾಜ್‌, ಜಿಲ್ಲಾ ವಕ್ತಾರ ಎಂ. ನಾಗೇಂದ್ರಪ್ಪ, ಇಂಟಕ್‌ ಜಿಲ್ಲಾಧ್ಯಕ್ಷ ಮಂಜುನಾಥ್‌, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಹುಸೇನ್‌ ಸಾಬ್‌, ತಾಲೂಕು ಅಧ್ಯಕ್ಷ ಎಂ.ಎಸ್. ಹಾಲೇಶ್‌ ಕಮಲಾಪುರ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ನಿಖೀಲ್‌ ಕೊಂಡಜ್ಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಲ್‌.ಬಿ. ಹನುಮಂತಪ್ಪ, ಎಂ.ಬಿ. ಆಬಿದ್‌ ಅಲಿ, ನಗರಸಭೆ ಅಧ್ಯಕ್ಷೆ ಶಾಹಿನಾ ದಾದಾಪೀರ್‌, ಸದಸ್ಯರಾದ ಶಂಕರ್‌ ಖಟಾವ್‌ಕರ್‌, ಮುಖಂಡರಾದ ಬಿ. ರೇವಣಸಿದ್ದಪ್ಪ, ನಂದಿಗಾವಿ ಶ್ರೀನಿವಾಸ್‌, ಬಿ. ಮೊಹಮ್ಮದ್‌ ಸಿಗ್ಬತ್‌ ಉಲ್ಲಾ, ಸುಜಾತಾ, ಕೆ. ಜಡಿಯಪ್ಪ, ಕೆ.ಪಿ. ಗಂಗಾಧರ, ಜಿ.ಎಚ್. ಮರಿಯೋಜಿ ರಾವ್‌, ಶಿವಾಜಿ, ನೇತ್ರಾವತಿ, ನಾಗಮ್ಮ, ಸವಿತಾ ನಾಯ್ಕ, ಎ. ಹನುಮಂತಪ್ಪ, ಜಿ. ಬೀರಪ್ಪ, ಜೆ. ರಾಮಪ್ಪ, ಜೆ. ನಾರಾಯಣಪ್ಪ ಭಾನುವಳ್ಳಿ, ಬಿ.ಆರ್. ವೀರಾಚಾರಿ ಭಾನುವಳ್ಳಿ, ಆಸಿಫ್‌ ಭಾಗವಹಿಸಿದ್ದರು.

ನರೇಂದ್ರ ಮೋದಿಯಿಂದ ಯುವಕರ ಭವಿಷ್ಯಕ್ಕೆ ಕೊಳ್ಳಿ

ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ದೇಶದ ರೈತರು ಐತಿಹಾಸಿಕ ಹೋರಾಟ ನಡೆಸಿದರು. ಕೊನೆಗೂ ಬಗ್ಗಿದ ಸರ್ಕಾರ ರೈತರಿಗೆ ವಿರುದ್ಧವಾಗಿದ್ದ ಕಾಯ್ದೆ ತಿದ್ದುಪಡಿಯಿಂದ ಹಿಂದೆ ಸರಿಯಿತು. ಈ ಮೂಲಕ ಕಾರ್ಮಿಕ ಮತ್ತು ರೈತ ವಿರೋಧಿ ಎಂಬುದನ್ನು ಕೇಂದ್ರ ಸಾಬೀತು ಮಾಡಿದೆ. ಎರಡು ಕೋಟಿ ಉದ್ಯೋಗ ಕೊಡುವ ಭರವಸೆ ನೀಡಿದ್ದ ಮೋದಿ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ಡೀಸೆಲ್‌, ಪೆಟ್ರೋಲ್‌, ಅಡುಗೆ ಅನಿಲದ ಬೆಲೆ ಏರಿಸಿ ಅವೈಜ್ಞಾನಿಕ ಜಿಎಸ್‌ಟಿ ತಂದು ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದ್ದಾರೆ. 10-15 ಸಾವಿರ ರೂ. ಆದಾಯ ಪಡೆಯುವ ಮಧ್ಯಮ ವರ್ಗದ ಕುಟುಂಬಗಳು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಶಾಸಕ ರಾಮಪ್ಪ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next