Advertisement

ನಾವು ಅಧಿಕಾರಕ್ಕೆ ಬಂದರೆ ದೇಶಕ್ಕೆ ಒಂದೇ ಜಿಎಸ್‌ಟಿ

01:55 PM Nov 12, 2017 | Team Udayavani |

ಅಹಮದಾಬಾದ್‌/ಹೊಸದಿಲ್ಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ 2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೊಂದಿರುವಂತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಪ್ರಮಾಣ ಒಂದೇ ತೆರಿಗೆ ಹಂತದಲ್ಲಿ ಇರಲಿದ್ದು, ಶೇ.18ರಲ್ಲಿಯೇ ನಿಗದಿ ಮಾಡಲಾಗುತ್ತದೆ ಎಂದಿದ್ದಾರೆ. ಹೀಗಾಗಿ, ಗುಜರಾತ್‌ ಚುನಾವಣಾ ಪ್ರಚಾರದಲ್ಲಿಯೂ ಜಿಎಸ್‌ಟಿ ವಾಗ್ವಾದ‌ ಪರಿವರ್ತನೆಯಾಗಿದೆ.

Advertisement

2019ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ದೇಶಾದ್ಯಂತ ಒಂದೇ ವಿಧದ ತೆರಿಗೆ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಶೇ. 18 ಕ್ಕೆ ತೆರಿಗೆ ದರ ಇಳಿಸಲು ಬಿಜೆಪಿಯಿಂದ ಸಾಧ್ಯವಾಗಿಲ್ಲ. ಅದನ್ನು ನಾವು ಮಾಡುತ್ತೇವೆ. ಶುಕ್ರವಾರ 200ಕ್ಕೂ ಹೆಚ್ಚು ಸಾಮಗ್ರಿಗಳ ತೆರಿಗೆ ದರವನ್ನು ಶೇ.28ರಿಂದ ಶೇ. 18ಕ್ಕೆ ಕೇಂದ್ರ ಸರಕಾರ ಇಳಿಸಿತ್ತಾದರೂ, ಇದು ತೃಪ್ತಿ ತಂದಿಲ್ಲ. ದೇಶಕ್ಕೆ ಐದು ವಿವಿಧ ಹಂತದ ತೆರಿಗೆ ಪದ್ಧತಿ ಅಗತ್ಯವಿಲ್ಲ ಎಂದು ರಾಹುಲ್‌ ಹೇಳಿದ್ದಾರೆ.

ಸರಕು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಎಂದು ಟೀಕಿಸಿರುವ ರಾಹುಲ್‌, ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಅನ್ನು ಜಿಎಸ್‌ಟಿಯನ್ನಾಗಿ ಪರಿವರ್ತಿಸುವವರೆಗೂ ವಿರಮಿಸುವುದಿಲ್ಲ. ಈ ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ ಎಂದು ದೂರಿದರು.

ಮಾತಾಡಿ ಮೋದಿ ಜಿ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪುತ್ರನ ಕಂಪೆನಿಯ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಏನಾದರೂ ಪ್ರತಿಕ್ರಿಯೆ ನೀಡಿ ಮೋದಿಜಿ ಎಂದು ರಾಹುಲ್‌ ವ್ಯಂಗ್ಯವಾಡಿದರು. ಕೇಂದ್ರ ಮತ್ತು ಇತರ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಬಿಜೆಪಿಯವರಿಗೆ ಎಲ್ಲವೂ ಇದೆ ಎಂದು ಅವರು ಕಟಕಿಯಾಡಿದರು.

ಶ್ರೇಯಸ್ಸು ರಾಹುಲ್‌ಗೆ: ಈ ನಡುವೆ 178 ವಸ್ತುಗಳ ತೆರಿಗೆ ಪ್ರಮಾಣವನ್ನು ಕೇಂದ್ರ ಸರಕಾರ ಇಳಿಕೆ ಮಾಡಿದ್ದಕ್ಕೆ ರಾಹುಲ್‌ ಗಾಂಧಿಯೇ ಕಾರಣ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಗುಜರಾತ್‌ನಲ್ಲಿ ರಾಹುಲ್‌ ಹಮ್ಮಿಕೊಂಡಿರುವ ಪ್ರಚಾರಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿಂತೆಗೊಳಗಾದ ಕೇಂದ್ರ ಈ ನಿರ್ಧಾರ ಪ್ರಕಟಿಸಿದೆ ಎಂದು ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹೊÉàಟ್‌ ಹೇಳಿದ್ದಾರೆ.

Advertisement

ಅಕ್ಷರಧಾಮ ದೇಗುಲಕ್ಕೆ ಭೇಟಿ
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡುವ ಮೂಲಕ ಉತ್ತರ ಗುಜರಾತ್‌ನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಪಟೇಲ್‌ ಸಮುದಾಯದಲ್ಲಿಯೇ ಇರುವ ಸ್ವಾಮಿ ನಾರಾಯಣ ಪಂಗಡಕ್ಕೆ ಸೇರಿರುವ ದೇಗಲವಾಗಿದೆ. ಆರು ಜಿಲ್ಲೆಗಳಲ್ಲಿ ರಾಹುಲ್‌ ಪ್ರಚಾರ ನಡೆಸಲಿದ್ದಾರೆ. ಅಷ್ಟೇ ಅಲ್ಲ ಮೂರು ದಿನಗಳಲ್ಲಿ ಅವರು ಇತರ ಪ್ರಮುಖ ದೇಗುಲಗಳಿಗೂ ಭೇಟಿ ನೀಡಲಿದ್ದಾರೆ. ಬನಸ್‌ಕಂತಾ ಜಿಲ್ಲೆಯಲ್ಲಿನ ಅಂಬಾಜಿ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.

ಕೇಂದ್ರಕ್ಕೆ ಚಿದಂಬರಂ ಲೇವಡಿಯ ಅಭಿನಂದನೆ
ಜಿಎಸ್‌ಟಿ ದರವನ್ನು ಕೇಂದ್ರ ಸರಕಾರ ಇಳಿಸಿದ್ದಕ್ಕಾಗಿ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ “ಥ್ಯಾಂಕ್ಯೂ ಗುಜರಾತ್‌’ ಎಂದು ಟ್ವೀಟ್‌ ಮಾಡಿದ್ದಾರೆ. ಸಂಸತ್ತು ಮತ್ತು ಕಾಮನ್‌ ಸೆನ್ಸ್‌ ಮಾಡದ ಕೆಲಸವನ್ನು ಗುಜರಾತ್‌ ಚುನಾವಣೆ ಮಾಡಿದೆ. ಗುಜರಾತ್‌ನಲ್ಲಿನ ಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಸಂಕಷ್ಟದಿಂದಾಗಿ ಸರಕಾರ ದರ ಇಳಿಕೆ ಮಾಡಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ನಾಲ್ಕು ತಿಂಗಳು 10 ದಿನಗಳಲ್ಲಿ ಅರ್ಥ ವ್ಯವಸ್ಥೆಯನ್ನು ಚೇತರಿಕೆ ಕಾಣುವಂತೆ ಮಾಡಿದ ಹಣ ಕಾಸು ಇಲಾಖೆಯನ್ನು ಅಭಿನಂದಿಸ ಬೇಕು ಎಂದು ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next