Advertisement

ಟ್ರಕ್‌ ಟರ್ಮಿನಲ್‌ ನಿರ್ಮಾಣವಾದರೆ ಹತ್ತಾರು ಅನುಕೂಲ

04:01 PM Apr 01, 2018 | Team Udayavani |

ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಕ್‌ಗಳ ನಿಲುಗಡೆಯಿಂದ ಅಪಘಾತಗಳು ಹೆಚ್ಚುತ್ತಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕಂಪಾಡಿ ಹಾಗೂ ಸುರತ್ಕಲ್‌ ಪ್ರದೇಶದಲ್ಲಿ ನಿಲ್ಲಿಸಿದ ಟ್ರಕ್‌ಗೆ ಬೈಕ್‌ ಹಾಗೂ ಕಾರು ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, 8 ಮಂದಿ ಗಾಯಗೊಂಡ ಘಟನೆ ಕಳೆದ ವಾರ ಸಂಭವಿಸಿದೆ. ಒಂದುವೇಳೆ ಸುಸಜ್ಜಿತ ಟ್ರಕ್‌ ಟರ್ಮಿನಲ್‌ ಇದ್ದಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತೇ?

Advertisement

ಅಂಥ ಸಾಧ್ಯತೆಗಳು ಹೆಚ್ಚಿತ್ತು. ಯಾಕೆಂದರೆ ಟ್ರಕ್‌ಗಳ ನಿಲುಗಡೆಗೆ ಸೂಕ್ತ ಟರ್ಮಿನಲ್‌ ಇಲ್ಲದಿರುವುದರಿಂದಲೇ ಹೀಗೆ ರಸ್ತೆಯಲ್ಲಿ ಟ್ರಕ್‌ಗಳನ್ನು ನಿಲ್ಲಿಸಲಾಗುತ್ತಿದೆ. ಅದು ಸದಾ ಅಪಾಯವನ್ನು ಆಹ್ವಾನಿಸುವಂತಿದೆ.

ನಗರ ವ್ಯಾಪ್ತಿಯಲ್ಲಿ ಸುಸಜ್ಜಿತ ಟ್ರಕ್‌ ಟಿರ್ಮಿಲ್‌ ನಿರ್ಮಿಸಿ ಹೆದ್ದಾರಿ ಅಕ್ಕಪಕ್ಕ ಟ್ರಕ್‌ ಗಳ ಅಡ್ಡಾದಿಡ್ಡಿ ನಿಲುಗಡೆ ತಪ್ಪಿಸಬೇಕೆಂಬುದು ಬಹುಕಾಲದ ಬೇಡಿಕೆ. ಈ ಬಗ್ಗೆ ಪ್ರಸ್ತಾವನೆಗಳು ರೂಪುಗೊಂಡರೂ ಸಾಕಾರವಾಗಿಲ್ಲ. ಟ್ರಕ್‌ ಟರ್ಮಿನಲ್‌ ಕೊರತೆಯಿಂದ ನಗರದ ರಸ್ತೆಗಳೇ ಲಾರಿ ನಿಲುಗಡೆ ತಾಣವಾಗಿದೆ.

ಪ್ರಸ್ತಾವನೆಗೆ ದಶಕ
ಟ್ರಕ್‌ ನಿರ್ಮಾಣ ಪ್ರಸ್ತಾವನೆಗೆ ದಶಕಗಳೇ ಕಳೆದಿವೆ. ಜಿಲ್ಲಾಡಳಿತ ರೂಪಿಸಿದ್ದ ಸಮಿತಿಯು 2003ರಲ್ಲಿ ಸುರತ್ಕಲ್‌ ಭಾಗದಲ್ಲಿ ಒಂದು ಬೃಹತ್‌ ಟ್ರಕ್‌ ಟರ್ಮಿನಲ್‌, ತೊಕ್ಕೊಟ್ಟು ಹಾಗೂ ಅಡ್ಯಾರ್‌ನಲ್ಲಿ ಸಣ್ಣ ಮಟ್ಟದ ಟರ್ಮಿನಲ್‌ ಗಳನ್ನು ನಿರ್ಮಿಸಲು ಸಲಹೆ ಮಾಡಿತ್ತು. ಅದರಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕುಳಾಯಿ ಬಳಿ 35 ಎಕ್ರೆ ಜಾಗವನ್ನು ಗುರುತಿಸಿ ಟ್ರಕ್‌ ಟರ್ಮಿನಲ್‌ ಪ್ರಸ್ತಾವನೆ ರೂಪಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಯಾವ ಪ್ರಗತಿಯೂ ಆಗಲಿಲ್ಲ.

ನವಮಂಗಳೂರು ಬಂದರಿಗೆ ಬರುವ ಲಾರಿಗಳ ಅಗತ್ಯಗಳನ್ನು ಪರಿಗಣಿಸಿ ಎನ್‌ ಎಂಪಿಟಿಯು ಬೈಕಂಪಾಡಿಯಲ್ಲಿ ಬಂದರಿಗೆ ಸೇರಿದ ಜಾಗದಲ್ಲಿ ಟ್ರಕ್‌ ಟರ್ಮಿನಲ್‌ನ್ನು ಸ್ಥಾಪಿಸಿದೆ. ಇದರಲ್ಲಿ ಸುಮಾರು 600ಕ್ಕೂ ಅಧಿಕ ಲಾರಿಗಳು ನಿಲ್ಲಿಸಬಹುದಾಗಿದೆ. ಹಾಗೆಂದು ಈ ಪ್ರದೇಶದಲ್ಲಿ ಲಾರಿಗಳ ದಟ್ಟಣೆ ಕಡಿಮೆ ಆಗಿಲ್ಲ.

Advertisement

ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದಾಗ ನಗರದ 2 ಕಡೆ ಹಾಗೂ ಹೊರಪ್ರದೇಶದಲ್ಲಿ ಕನಿಷ್ಠ 2 ಟ್ರಕ್‌ ಟರ್ಮಿನಲ್‌ಗ‌ಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ಮಾಡಲಾಯಿತು. ಇದರಲ್ಲಿ ಹೊರವಲಯದ ಟ್ರಕ್‌ ಟರ್ಮಿನಲ್‌ಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಸಮೀಪ ಗೋಳಿತೊಟ್ಟಿನಲ್ಲಿ ಸ್ಥಳ ಗುರುತಿಸಲಾಗಿತ್ತು.

ಕೊಟ್ಟಾರಚೌಕಿಯಲ್ಲಿ ಕನಿಷ್ಠ 2 ಎಕ್ರೆ ಜಾಗವನ್ನು ಗುರುತಿಸಿ ಲಾರಿಗಳ ನಿಲುಗಡೆಗೆ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿತ್ತು. ಬೈಕಂಪಾಡಿಯ ಎಪಿಎಂಸಿ ಪ್ರಾಂಗಣವನ್ನು ಟ್ರಕ್‌ ಟರ್ಮಿನಲ್‌ ಆಗಿ ಅಭಿವೃದ್ಧಿ ಪಡಿಸಲೂ ಯೋಚಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ದೇವರಾಜ ಟ್ರಕ್‌ ಟರ್ಮಿನಲ್‌ ಪ್ರಾಧಿಕಾರದ ಆಡಳಿತ ನಿರ್ದೇಶಕರ ಉಪಸ್ಥಿತಿಯಲ್ಲಿ ಸಭೆಯನ್ನೂ ನಡೆಸಲಾಗುತ್ತಿತ್ತು. ಆದರೆ ಈ ಪ್ರಸ್ತಾವನೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಟ್ರಕ್‌ಗಳ ದಟ್ಟನೆ
ಮಂಗಳೂರು ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರ. ಜತೆಗೆ ರಾಜ್ಯದ ಏಕೈಕ ಮತ್ತು ದೇಶದ ಪ್ರಮುಖ ನವ ಮಂಗಳೂರು ಬಂದರು ಪ್ರದೇಶ. ನಾಲ್ಕು ಕೈಗಾರಿಕಾ ಪ್ರದೇಶಗಳಿವೆ. ಹಳೆ ಬಂದರು ಜಿಲ್ಲೆಯ ರಖಂ ವ್ಯಾಪಾರ ಕೇಂದ್ರವೂ ಆಗಿದೆ. ಲಭ್ಯ ಅಂಕಿ ಅಂಶದಂತೆ ಜಿಲ್ಲೆಯಲ್ಲಿ ದಿನವೊಂದಕ್ಕೆ ಸುಮಾರು 2,000 ಕ್ಕೂ ಹೆಚ್ಚು ಟ್ಯಾಂಕರ್‌ಗಳು ಸಂಚರಿಸುತ್ತವೆ.

ಎಂಆರ್‌ಪಿಎಲ್‌, ಬಿಎಎಸ್‌ಫ್‌, ಎಚ್‌ಪಿಸಿಎಲ್‌, ಬಿಪಿಸಿಎಲ್‌, ಇಂಡಿಯಲ್‌ ಆಯಿಲ್‌ ಕಾರ್ಪೊರೇಶನ್‌, ಎಸ್‌ಇಝಡ್‌
ಸಹಿತ ಬೃಹತ್‌ ಉದ್ದಿಮೆಗಳಿವೆ. ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಗಳು ಹೆಚ್ಚಿವೆ. ಟ್ಯಾಂಕರ್‌ಗಳಲ್ಲದೆ ದಿನವೊಂದಕ್ಕೆ ಸಾವಿರಾರು ಸರಕು ಸಾಗಣೆ ಲಾರಿಗಳು ನಗರಕ್ಕೆ ಆಗಮಿಸುತ್ತಿವೆ. ಈ ಎಲ್ಲ ಲಾರಿಗಳು ಸರಕು ಖಾಲಿ ಮಾಡಿ ಹೊಸ ಸರಕು ತುಂಬಿಸಿಕೊಳ್ಳಲು ಎರಡು ದಿನ ಕಾಯಬೇಕು. ಆ ವರೆಗೂ ಕಾಯಲು ಸ್ಥಳವಿಲ್ಲದೇ ರಸ್ತೆ ಬದಿಯಲ್ಲೇ ನಿಲ್ಲಿಸಲಾಗುತ್ತದೆ.

ಇದರಿಂದ ಸಂಚಾರದಲ್ಲೂ ವ್ಯತ್ಯಯವಾಗುತ್ತಿದೆ. ರಾತ್ರಿ ಹೊತ್ತು ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸಿದೆ. ಇನ್ನೊಂದೆಡೆ ಚಾಲಕರು, ನಿರ್ವಾಹಕರು ಲಾರಿಯಲ್ಲೇ ವಾಸ್ತವ್ಯ ಹೂಡಿ, ಪಕ್ಕದ ಬಯಲು ಪ್ರದೇಶದಲ್ಲೇ ಅಡುಗೆ ಇತ್ಯಾದಿ ಮಾಡಲಾಗುತ್ತದೆ. ರಸ್ತೆ ಬದಿಯನ್ನೇ ಶೌಚಾಲಯಗಳಾಗಿ ಬಳಸಲಾಗುತ್ತಿದೆ. ಇದರಿಂದ ಸುತ್ತಲಿನ ಪರಿಸರವೂ ಹಾಳಾಗುವುದಲ್ಲದೇ ಆರೋಗ್ಯ ಮತ್ತು ಶುಚಿತ್ವ ಸಮಸ್ಯೆಗಳೂ ತಲೆದೋರುತ್ತಿವೆ.

ಎಲ್ಲಿ ಮಾಡಬಹುದು ?
ಸುರತ್ಕಲ್‌ ಭಾಗದಲ್ಲಿ ಬಹುಪಾಲು ಉದ್ದಿಮೆಗಳಿರುವುದರಿಂದ ಅಲ್ಲಿ ದೊಡ್ಡ ಟರ್ಮಿನಲ್‌ ನಿರ್ಮಿಸಬಹುದು. ಅದೇ ರೀತಿ
ಕೇರಳ ಭಾಗದಿಂದ ಉತ್ತರ ಭಾರತದ ಕಡೆಗೆ ಹೋಗುವ ಲಾರಿಗಳಿಗೆ ತೊಕ್ಕೊಟ್ಟು ಅಥವಾ ತಲಪಾಡಿಯಲ್ಲಿ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಕಡೆಯಿಂದ ಬರುವ ಲಾರಿಗಳಿಗೆ ಅಡ್ಯಾರ್‌ನಲ್ಲಿ ಟರ್ಮಿನಲ್‌ ನಿರ್ಮಿಸಬಹುದು. ಇವುಗಳನ್ನು ಸಾರಿಗೆ ಇಲಾಖೆ ಅಥವಾ ಖಾಸಗಿ ಸಹಭಾಗಿತ್ವದಲ್ಲೂ ಸ್ಥಾಪಿಸಬಹುದಾಗಿದೆ.

ಸೌಲಭ್ಯಗಳು
ಟ್ರಕ್‌ ಟರ್ಮಿನಲ್‌ಗ‌ಳ ನಿರ್ಮಾಣ ಹೆದ್ದಾರಿಗಳಲ್ಲಿ ಅಪಘಾತಗಳನ್ನು ಕಡಿಮೆ ಮಾಡುವುದರ ಜತೆಗೆ ಚಾಲಕರಿಗೂ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಸೂಕ್ತ ಶೌಚಾಲಯ, ವ್ಯವಸ್ಥಿತ ಪಾರ್ಕಿಂಗ್‌ ವ್ಯವಸ್ಥೆ,ಆರಾಮ ಕೊಠಡಿ, ಉಪಾಹಾರ ಗೃಹಗಳು, ದೂರವಾಣಿ ಸೌಲಭ್ಯ, ಗೋದಾಮುಗಳು, ಪೊಲೀಸ್‌ ಚೌಕಿ, ಪೆಟ್ರೋಲ್‌ ಬಂಕ್‌, ಸರ್ವಿಸ್‌ ಸೆಂಟರ್‌, ಫೈರ್‌ ಸ್ಟೇಷನ್‌, ಅಟೋಮೊಬೈಲ್‌ ಬಿಡಿಭಾಗಗಳ ಮಳಿಗೆ, ತೂಕ ಸೌಲಭ್ಯ, ಆರೋಗ್ಯ ಸೌಲಭ್ಯಗಳಿರುತ್ತವೆ.

ಕೇಶವ ಕುಂದರ್‌ 

Advertisement

Udayavani is now on Telegram. Click here to join our channel and stay updated with the latest news.

Next