ಯಾವಾಗ ಶ್ರುತಿ ಹರಿಹರನ್ ಕೆಲವು ತಿಂಗಳುಗಳ ಹಿಂದೆ ಕ್ಯಾಸ್ಟಿಂಗ್ ಕೌಚ್ (ಲೈಂಗಿಕ ತೃಷೆ ಬಳಸಿಕೊಳ್ಳಲು ಯತ್ನಿಸುವುದು) ಬಗ್ಗೆ ಮಾತನಾಡಿದರೋ, ಅಲ್ಲಿಂದ ಈ ವಿಷಯ ಸಾಕಷ್ಟು ಚರ್ಚೆಯಾಗುತ್ತಿದೆ. ಶ್ರುತಿ ನಂತರ ಹರಿಪ್ರಿಯಾ ಈ ಬಗ್ಗೆ ಒಮ್ಮೆ ಮಾತನಾಡಿ, “ಇಲ್ಲಿ ಸಂಪೂರ್ಣ ಪುರುಷರದ್ದೇ ತಪ್ಪು ಎನ್ನುವುದು ಕಷ್ಟ, ನಾವು ಹೇಗಿರುತ್ತೀವೋ ಅದು ಬಹಳ ಮುಖ್ಯ’ ಎಂದು ಹೇಳಿದ್ದರು. ಈ ವಿಷಯವಾಗಿ ಕೃತಿ ಖರಬಂದ ಸಹ ಮಾತನಾಡಿದ್ದಾರೆ. ತಮ್ಮನ್ನೇನಾದರೂ ಆ ದೃಷ್ಟಿಯಲ್ಲಿ ನೋಡಿದರೆ, ಆ ವ್ಯಕ್ತಿಯನ್ನು ಕೊಂದೇಬಿಡುವುದಾಗಿ ಹೇಳಿದ್ದಾರೆ.
ಗುರುವಾರ ಸಂಜೆ ನಡೆದ “ದಳಪತಿ’ ಚಿತ್ರದ ಪತ್ರಿಕಾಗೋಷ್ಠಿಯ ನಂತರ ಕೆಲವು ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ತಮ್ಮೆದುರು ಯಾರಾದರೂ ಕೆಟ್ಟದಾಗಿ ವರ್ತಿಸಿದರೆ, ಅಂತಹ ವ್ಯಕ್ತಿಯನ್ನು ಕೊಂದೇಬಿಡ್ತೀನಿ’ ಅಂತ ಅವರು ಹೇಳಿಕೊಂಡಿದ್ದಾರೆ.
“ನಾನು ಇಂತಹ ವಿಷಯದಲ್ಲಿ ಸುಮ್ಮನಿರುವುದಿಲ್ಲ. ನನ್ನ ಜೊತೆಗೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ ನಾನು ಸುಮ್ಮನಿರೋಲ್ಲ. ಕ್ಯಾಸ್ಟಿಂಗ್ ಕೌಚ್ ಎನ್ನುವುದು ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ, ಕಾರ್ಪೋರೇಟ್ ಕ್ಷೇತ್ರದಲ್ಲೂ ತುಂಬಾ ಇದೆ. ನಂಗೆ ಯಾವತ್ತೂ ಕೆಟ್ಟ ಅನುಭವ ಆಗಿಲ್ಲ. ಯಾರೂ ನನ್ನನ್ನು ಆ ತರಹ ಕೆಟ್ಟದಾಗಿ ನಡೆಸಿಕೊಂಡಿಲ್ಲ. ಇಲ್ಲಿ ಬರೀ ಪುರುಷರದ್ದೇ ಸಮಸ್ಯೆ ಅನ್ನೋದು ಕಷ್ಟ. ಮಹಿಳೆಯರು ಸಹ ಈ ವಿಷಯದಲ್ಲಿ ಸಾಕಷ್ಟು ದುರಪಯೋಗ ಮಾಡಿಕೊಳ್ಳುತ್ತಾರೆ. ಹೆಣ್ಣು ಎನ್ನುವ ಕಾರಣಕ್ಕೆ ನಂಬುವುದು ಕಷ್ಟ’ ಎನ್ನುತ್ತಾರೆ ಅವರು.
ಸಮಾನವಾಗಿ ನೋಡಿಕೊಳ್ಳಿ: ಇನ್ನು ನಾಯಕ ಮತ್ತು ನಾಯಕಿಯನ್ನು ಸಮಾನವಾಗಿ ನೋಡಿಕೊಳ್ಳಬೇಕು ಎನ್ನುವ ಅವರು, “ನಾವು ಹೀರೋ ತರಹ ಸಂಭಾವನೆ ಡಿಮ್ಯಾಂಡ್ ಮಾಡುವುದಕ್ಕೆ ಆಗಲ್ಲ. ಏಕೆಂದರೆ, ಅವರು ತರಹ ಓಪನಿಂಗ್ ಕೊಡಿಸುವುದಕ್ಕೆ ಸಾಧ್ಯವಿಲ್ಲ. ಆ ವಿಷಯದಲ್ಲಿ ಸಮಾನತೆ ಇಲ್ಲದಿದ್ದರೂ, ನಮ್ಮನ್ನು ನೋಡಿಕೊಳ್ಳುವ ರೀತಿಯಲ್ಲಾದರೂ ಸಮಾನತೆ ಇರಬೇಕು. ಅಷ್ಟೇ ನಾವು ಕೇಳ್ಳೋದು’ ಎನ್ನುತ್ತಾರೆ ಕೃತಿ.