ಬೆಂಗಳೂರು: ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ ಕೃಷಿ ಇಲಾಖೆ ಹೊಸ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ನಿರೀಕ್ಷೆಯಂತೆ ಮುಂಗಾರು ಮಳೆ ಎಲ್ಲೆಡೆ ಉತ್ತಮವಾಗಿ ಆಗುತ್ತಿದೆ. ಕೃಷಿ ಚಟುವಟಿಕೆ ಗರಿಗೆದರಿವೆ. ಅದಕ್ಕೆ ಪೂರಕವಾಗಿ ಸಮರ್ಪಕ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಸಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಕೊರತೆ ಇಲ್ಲ. ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಬೇಕು. ಇದೆಲ್ಲದರ ನಡುವೆಯೂ ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಾಗಿ ಹೇಳಿದರು.
ಇದಕ್ಕೂ ಮುನ್ನ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಹೊಸ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಜೂ. 20ರ ಗಡುವು ನೀಡಿದ ಸಚಿವರು, ಘೋಷಣೆಯಾದ 19 ಯೋಜನೆಗಳಲ್ಲಿ 12 ಯೋಜನೆಗಳಿಗೆ ಸರ್ಕಾರಿ ಆದೇಶ ಹೊರಡಿಸಿದೆ. ಬಾಕಿ ಉಳಿದ ಏಳು ಘೋಷಣೆಗಳಿಗೆ ವಾರದ ಒಳಗೆ ಸರ್ಕಾರಿ ಆದೇಶ ಹೊರಡಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸತಕ್ಕದ್ದು ಎಂದು ಸೂಚಿಸಿದರು.
ಅನುದಾನಕ್ಕೆ ಕೊರತೆ ಇಲ್ಲ; ಸಚಿವ
ಸರ್ಕಾರದಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕಗೊಳಿಸಲು ರೈತ ಸಮೃದ್ಧಿ ಯೋಜನೆ ರೂಪಿಸಿದ್ದು, ಇದು ಸಮರ್ಪಕವಾಗಿ ತಲುಪಬೇಕು. ಇದು ಸರ್ಕಾರದ ಆಶಯ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಒಳಗೊಂಡಂತೆ ವಿವಿಧ ಇಲಾಖೆಗಳ ಯೋಜನೆಗಳ ಸಂಯೋಜನೆ ಮೂಲಕ ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ಅನುಷ್ಠಾನದ ವೇಳೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಪೂರ್ವಾನುಲೋಕನ ಆಗಬೇಕಿದೆ. ಈ ಬಗ್ಗೆ ಚರ್ಚಿಸಿ ಅಭಿಪ್ರಾಯ ತಿಳಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.