ಮೈಸೂರು: ಕಾಂಗ್ರೆಸ್ಸಿಗರ ವರ್ತನೆ ಯಿಂದ ಬೇಸತ್ತು ಈಗಾಗಲೇ ಹಲವು ಬಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಸ್ವಾಭಿಮಾನ ವಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಬದಲು ಸ್ವಾಭಿಮಾನ, ಧೈರ್ಯವಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದರು.
ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿ ಅಧಿಕಾರ ಹಿಡಿದವರು, ಅದನ್ನು ಪೂರೈಸಲಾಗದೇ, ಸಮ್ಮಿಶ್ರ ಸರ್ಕಾರದ ಗೊಂದಲದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿ 20 ತಿಂಗಳು ಉತ್ತಮ ಆಡಳಿತ ನೀಡಿದ್ದ ಕುಮಾರಸ್ವಾಮಿ ಅವರ ಮೇಲೆ ಈ ಬಾರಿ ಅಪಾರ ನಿರೀಕ್ಷೆ ಇತ್ತು. ಆದರೆ, ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿಯಾಗಿ ವಿಫಲರಾಗಿದ್ದು, ಅಧಿಕಾರಕ್ಕೆ ಬಂದಾಗ ರಾಹುಲ್ ಗಾಂಧಿಯವರ ಮುಲಾಜಿನಲ್ಲಿ ರುವ ಸಾಂದರ್ಭಿಕ ಶಿಶು ನಾನು ಎಂದು ಬೇಸರದ ನುಡಿಗಳನ್ನಾಡಿದರು.
ಆದರೆ, ಇವರ ಅಧಿಕಾರದ ದಾಹದಿಂದ ರಾಜ್ಯ ಬಡವಾಗಿದೆ ಎಂದು ದೂರಿದರು. ವರುಣಾ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಮಹಿಳೆಯೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆದುಕೊಂಡಿರುವ ಅನುಚಿತ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದರೆ ಆ ಆರೋಪ ತಮ್ಮ ಮೇಲೆ ಬರುವುದೆಂಬ ಒತ್ತಡದಲ್ಲಿರುವ ಸಿದ್ದರಾಮಯ್ಯ, ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ವರ್ತಿಸಿದ್ದು, ಶೋಭೆ ತರುವುದಿಲ್ಲ ಎಂದರು. ಮುಖಂಡರಾದ ಬಿ.ಪಿ.ಬೋರೇಗೌಡ, ತೋಟದಪ್ಪ ಬಸವರಾಜು ಇತರರಿದ್ದರು.