ನಂಜನಗೂಡು: ರಾಜ್ಯ ಸರ್ಕಾರ ಕಬಿನಿ ಹಾಗೂ ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದವತಿಯಿಂದ ನಂಜನಗೂಡಿನ ಕಬಿನಿ ನೀರಾವರಿ ನಿಗಮದ ಮುಂದೆ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕಾವೇರಿ ನೀರಾವರಿ ನಿಗಮದ ನಂಜನಗೂಡು ವಿಭಾಗೀಯ ಕಾರ್ಯಾಲಯದ ಮುಂದೆ ಶನಿವಾರ ಜಮಾಯಿಸಿದ ರಾಜ್ಯ ರೈತ ಸಂಘ, ಹಸಿರು ಸೇನೆ. ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇಂದಿನ ಪ್ರತಿಭಟನೆ ಸಾಂಕೇತಿಕವಾಗಿದ್ದು, ನಾಲೆಯಲ್ಲಿ ನೀರು ಹರಿಯದಿದ್ದರೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಟಿ.ಆರ್ ವಿದ್ಯಾಸಾಗರ್, ರಾಜ್ಯದಲ್ಲಿರುವ ಜಲಾಶಯಗಳು ತುಂಬುವ ಮೊದಲೇ ಕಬಿನಿ ಹಾಗು ಕಾವೇರಿ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಇಲ್ಲಿನ ಅನ್ನದಾತರಿಗೆ ಮಾಡುತ್ತಿರುವ ದ್ರೋಹವಾಗಿದೆ. ಈಗಾಗಲೇ ರೈತರು ಸತತ ಮೂರು ವರ್ಷಗಳ ಬರದಿಂದ ಕಂಗೆಟ್ಟಿದ್ದಾರೆ. ಈ ಕೂಡಲೇ ಜಲಾಶಯಗಳಿಂದ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ ಮಾತನಾಡಿ, ರಾಜ್ಯದ ನಾಲೆಗಳಲ್ಲಿ ಜುಲೈ ತಿಂಗಳಲ್ಲಿ ನೀರು ಹರಿಸಬೇಕು. ತಡವಾದರೆ ಭತ್ತದ ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ ನಮ್ಮ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ನೀರಾವರಿ ಮುಖ್ಯಎಂಜಿನಿಯರ್ ಮರಿಸ್ವಾಮಿ ಮಾತನಾಡಿ, ರೈತರು ಸಲ್ಲಿಸಿರುವ ಮನವಿಯನ್ನು ಮೇಲಧಿಕಾರಿಗಳಿಗೆ ತಲುಪಿಸಲಾಗುವುದು.
ಸೋಮವಾರ ನಡೆಯುವ ಪ್ರತಿಭಟನೆ ವಿಷಯ ಅವರ ಗಮನಕ್ಕೆ ತರಲಾಗುವುದು ಎಂದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಂಬಳೆ ಮಂಜುನಾಥ್, ಸತೀಶ್ ರಾವ್, ಮಹದೇವಸ್ವಾಮಿ, ಸಿಂದುವಳ್ಳಿ ಬಸವಣ್ಣ, ಚಿಕ್ಕಸ್ವಾಮಿ, ಹಲ್ಲರೆ ಬಸವಣ್ಣ , ಶಿವಣ್ಣ ಇತರರು ಉಪಸ್ಥಿತರಿದ್ದರು.