Advertisement

ಮಳೆಯಾಗದಿದ್ದರೆ ಇನ್ನಷ್ಟು ಆತಂಕ: ನೀರು ರೇಷನಿಂಗ್‌ ಯಥಾಪ್ರಕಾರ ಜಾರಿ

02:55 PM May 07, 2023 | Team Udayavani |

ಮಹಾನಗರ: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿತ ವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 5ರಿಂದ ನಗರದಲ್ಲಿ ಜಾರಿಯಲ್ಲಿರುವ ನೀರು ರೇಷನಿಂಗ್‌ ಯಥಾಪ್ರಕಾರ ಮುಂದುವರಿದಿದೆ.

Advertisement

ಮೇ 7ರಂದು ಮಂಗಳೂರು ನಗರ ಉತ್ತರ (ಸುರತ್ಕಲ್‌) ಭಾಗಕ್ಕೆ ನೀರು ಸರಬರಾಜು ಇರಲಿದ್ದು, ಮಂಗಳೂರು ದಕ್ಷಿಣ (ನಗರ ಭಾಗ)ದಲ್ಲಿ ನೀರು ಕಡಿತವಿರಲಿದೆ.

ಸಾಮಾನ್ಯವಾಗಿ ನೀರು ರೇಷನಿಂಗ್‌ ಸಮಯದಲ್ಲಿ ಬಹುತೇಕ ಭಾಗಗಳಲ್ಲಿ ಒಂದೆರಡು ದಿನ ನೀರಿಲ್ಲ ಎಂಬ ಸಮಸ್ಯೆ ಉದ್ಭವಿಸುತ್ತದೆ. ಆದರೆ ಈ ಬಾರಿ ದಿನ ಬಿಟ್ಟು ದಿನ ನೀರು ನೀಡಿದರೂ ನಗರದ ಯಾವುದೇ ಭಾಗಕ್ಕೆ ನೀರು ಲಭ್ಯತೆಯ ಬಗ್ಗೆ ದೂರುಗಳು ವರದಿಯಾಗಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

4.09 ಮೀ.ನಷ್ಟು ನೀರು ಸಂಗ್ರಹ
ತುಂಬೆ ಅಣೆಕಟ್ಟಿನಲ್ಲಿ ಮೇ 6ರಂದು 4.09 ಮೀ.ನಷ್ಟು ನೀರು ಸಂಗ್ರಹವಿದೆ. ರೇಷನಿಂಗ್‌ ಜಾರಿ ಮಾಡುವ ಮುನ್ನ ಪ್ರತಿ ದಿನ ಸುಮಾರು 10 ಸೆಂ.ಮೀ. ನೀರು ಕಡಿಮೆಯಾಗುತ್ತಿತ್ತು. ಆದರೆ ರೇಷನಿಂಗ್‌ ಆರಂಭವಾದ ಬಳಿಕ ಇದು 6 ಸೆಂ.ಮೀ.ಗೆ ಇಳಿಕೆಯಾಗಿದೆ.

ತುಂಬೆ ಡ್ಯಾಂನ ಕೆಳ ಭಾಗದಿಂದ ನೀರು ಪಂಪಿಂಗ್‌ ಮಾಡಿ ತುಂಬೆ ಡ್ಯಾಂಗೆ ಸಂಗ್ರಹ ಮಾಡುವ ಕಾರ್ಯ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಬೃಹತ್‌ ಪಂಪ್‌ ಸಹಾಯದಿಂದ ನೀರು ಮೇಲಕ್ಕೆತ್ತಲಾಗುತ್ತಿದೆ.

Advertisement

ಪ್ರತೀದಿನ 50ರಿಂದ 60 ಎಂಎಲ್‌ಡಿ ನೀರು ಈ ರೀತಿ ಡ್ಯಾಂಗೆ ಪಂಪ್‌ ಮಾಡಲಾಗುತ್ತಿದೆ.
ಮಂಗಳೂರಿಗೆ ನಿತ್ಯ 160 ಎಂಎಲ್‌ಡಿ ನೀರು ಸರಬರಾಜು ಮಾಡುವ ಕಾರಣದಿಂದ ಶೇ.40ರಷ್ಟು ನೀರು ಡ್ಯಾಂನ ಕೆಳಭಾಗದಿಂದ ಪಡೆಯ ಲಾಗುತ್ತಿದೆ. ಪಾಲಿಕೆ ಅಧಿಕಾರಿಗಳ ತಂಡ, ಸಿಬಂದಿ ಇದಕ್ಕಾಗಿ ಹಗಲೂ- ರಾತ್ರಿ ಶ್ರಮಿಸುತ್ತಿದ್ದಾರೆ. ಎಂಆರ್‌ಪಿಎಲ್‌ ಸಂಸ್ಥೆ ಕೂಡ ಇದಕ್ಕಾಗಿ ನೆರವು ನೀಡಿದೆ.

ಅಕ್ರಮ ಸಂಪರ್ಕದ ವಿರುದ್ಧ ಕ್ರಮ
ನೇತ್ರಾವತಿ ನದಿ ಪಾತ್ರದ ಎಎಂಆರ್‌ ಡ್ಯಾಂ ಮತ್ತು ನದಿಯ ಇಕ್ಕೆಲಗಳಲ್ಲಿ ಕೃಷಿ ಉದ್ದೇಶಕ್ಕೆ ಅನಧಿಕೃತವಾಗಿ /ಅಕ್ರಮವಾಗಿ ಖಾಸಗಿ ಪಂಪ್‌ ಮೂಲಕ ನೀರು ಎತ್ತುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿದ್ಯುತ್‌ ಸಂಪರ್ಕ ಕಡಿತ ಗೊಳಿಸಲು ಹಾಗೂ ಅನುಮತಿ ಇಲ್ಲದೆ ವಿದ್ಯುತ್‌ ಸಂಪರ್ಕ ಪಡೆಯಲು ಯತ್ನಿಸಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿಗಳು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಕುರಿತ ಕಾರ್ಯಾಚರಣೆ ನಡೆಯುತ್ತಿದೆ. ಅಧಿಕೃತ / ಅನಧಿಕೃತವಾಗಿ ನಡೆಯುತ್ತಿ ರುವ ಕಾರು /ದ್ವಿಚಕ್ರ/ಬಸ್‌/ರಿಕ್ಷಾ/ಲಾರಿ ಸರ್ವಿಸ್‌ ಸ್ಟೇಶನ್‌/ವಾಶಿಂಗ್‌ ಶೋರೂಂಗಳಿಗೆ ನೀರು ಸರಬರಾಜು ಕೂಡ ಸ್ಥಗಿತಗೊಳಿಸಲಾಗಿದ್ದರೂ ಕೆಲವು ಕಡೆ ಸರಬರಾಜು ಎಂದಿನಂತೆ ಇದೆ!

ಸದ್ಯವೇ “ರೇಷನಿಂಗ್‌’ ನಿಯಮ ಬದಲು?
ಸದ್ಯ ಮಂಗಳೂರಿನಲ್ಲಿ ದಿನ ಬಿಟ್ಟು ದಿನ ನೀರು ಪೂರೈಕೆಯಾಗುತ್ತಿದೆ. ಕೊಂಚ ದಿನ ಇದೇ ಮಾನದಂಡದ ಪ್ರಕಾರ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಮಳೆ ಬಾರದಿದ್ದರೆ ಕೊಂಚ ದಿನದಲ್ಲಿಯೇ ರೇಷನಿಂಗ್‌ ನಿಯಮಾವಳಿಯಲ್ಲಿ ಬದಲಾವಣೆ ಮಾಡುವ ಬಗ್ಗೆಯೂ ಪಾಲಿಕೆ ಚಿಂತನೆ ನಡೆಸಿದೆ. ನೀರಿನ ಕೊರತೆ ಬಹುವಾಗಿ ಎದುರಾದರೆ, ದಿನ ಬಿಟ್ಟು ದಿನ ನೀರು ಕೊಡುವ ಬದಲು 2 ಅಥವಾ 3 ದಿನಕ್ಕೊಮ್ಮೆ ನೀರು ಕೊಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಎಲ್ಲ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next