Advertisement

ಪರ್ಯಾಯ ಇಲ್ಲದಿದ್ದರೆ ಸೂಪರ್‌ಗೆ ಅಸಹಕಾರ

12:47 PM Nov 18, 2017 | Team Udayavani |

ಧಾರವಾಡ: ಸೂಪರ್‌ ಮಾರುಕಟ್ಟೆ ಸೂಪರ್‌ ಮಾಡುವ ಮೊದಲು ಮೂಲ ಸೌಕರ್ಯ ಕಲ್ಪಿಸಿ…ಸ್ಮಾರ್ಟ್‌ ಸಿಟಿ ನಿರ್ಮಿಸಲು ಅಭ್ಯಂತರವಿಲ್ಲ. ಆದರೆ ನಮಗೆ ಕಾನೂನು ಭದ್ರತೆಯೊಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ನಮಗೆ ಭದ್ರತೆ ಕಲ್ಪಿಸಿದರೆ ಮಾತ್ರವೇ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸೂಪರ್‌ ಮಾರುಕಟ್ಟೆ ಅಭಿವೃದ್ದಿಗೆ ನಮ್ಮ ಸಹಕಾರ…! ಇಲ್ಲದಿದ್ದರೇ ಅಸಹಕಾರ…! 

Advertisement

ಹೀಗೆ ಕಡ್ಡಿ ತುಂಡರಿಸಿದಂತೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದು ಇಲ್ಲಿನ ಸೂಪರ್‌ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು. ಶುಕ್ರವಾರ ಹು-ಧಾ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ಸಿಟಿ ಲಿಮಿಟೆಡ್‌ ಸಹಯೋಗದಲ್ಲಿ ಸೂಪರ್‌ ಮಾರುಕಟ್ಟೆಯಲ್ಲಿಯೇ ಹಮ್ಮಿಕೊಂಡಿದ್ದ ಸ್ಮಾರ್ಟ್ಸಿಟಿ ಯೋಜನೆಗಳ ನಾಗರಿಕ ಸಮಾಲೋಚನಾ ಸಭೆಯಲ್ಲಿ ಸೂಪರ್‌ ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ವ್ಯಾಪಾರಸ್ಥರು, ಸಾರ್ವಜನಿಕರು ತಮ್ಮ ಅಭಿಪ್ರಾಯ  ವ್ಯಕ್ತಪಡಿಸಿದರು.

ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಕಟ್ಟಡ ನಿರ್ಮಾಣದ ವಿಚಾರದಲ್ಲಿ ಯಾವುದೇ ಮಾರ್ಗಸೂಚಿಗಳನ್ನು ನಿಗದಿಪಡಿಸದೇ ಎಲ್ಲರಿಗೂ ಅಂಗಡಿಗಳನ್ನು ನೀಡಬೇಕು. ಮುಂದಿನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಪಾಲಿಕೆ  ಸದಸ್ಯರ ಸಮ್ಮುಖದಲ್ಲೇ ಸಭೆ ನಡೆಸಬೇಕು. ಅವರು ನಮಗೆ ಎಲ್ಲ ರೀತಿಯ ಭರವಸೆ ನೀಡಬೇಕು. ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿಸಬೇಕು ಎಂದು ವ್ಯಾಪಾರಸ್ಥರು ಮನವಿ ಮಾಡಿದರು. 

ಸಹಕಾರಕ್ಕೆ ಮಾತ್ರ ಸಹಕಾರ: ಈ ವೇಳೆ ಮಾತನಾಡಿದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸತೀಶ ತುರುಮರಿ, ಸೂಪರ್‌ ಮಾರುಕಟ್ಟೆ ಅಭಿವೃದ್ಧಿಗೆ ನಾವು ಅಸಹಕಾರ ನೀಡುವುದಿಲ್ಲ. ಆದರೆ ನಮಗೂ ಕೆಲ ಸಮಯ ನೀಡಿ. ಹಿರಿಯ ವ್ಯಾಪಾರಸ್ಥರ ಜೊತೆಗೆ ಚರ್ಚಿ ನಡೆಸುತ್ತೇವೆ. ಇದಕ್ಕೂ ಪೂರ್ವದಲ್ಲಿ ವ್ಯಾಪಾರ ನಡೆಸಲು ಅನುಕೂಲಕರ ಪರ್ಯಾಯ ವ್ಯವಸ್ಥೆ ಕಲ್ಪಿಸಿ.

ಕಟ್ಟಡಲ್ಲಿ ಯಾವ ರೀತಿಯ ಸೌಲಭ್ಯ,ಬಾಡಿಗೆ ಸೇರಿದಂತೆ ಇತರ ಮಾಹಿತಿಗಳನ್ನು ಲಿಖೀತ ರೂಪದಲ್ಲಿ ನೀಡಬೇಕು ಎಂದರು. ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ, ಹಲವು ವರ್ಷಗಳಿಂದ ಸೂಪರ್‌ ಮಾರುಕಟ್ಟೆ ಅಭಿವೃದ್ಧಿ ಮಾಡುವ ಚಿಂತನೆ ನಡೆದಿತ್ತು. 

Advertisement

ಆದರೆ ಇಷ್ಟು ದೊಡ್ಡ ಪ್ರದೇಶದ ಅಭಿವೃದ್ಧಿಗೆ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಆದರೆ ಇದೀಗ ಸ್ಮಾರ್ಟ್‌ ಯೋಜನೆಯಲ್ಲಿ ಮಾರುಕಟ್ಟೆ ಸಂಪೂರ್ಣ ಅಭಿವೃದ್ಧಿ ಹೊಂದಲಿದೆ. ಈ ಅಭಿವೃದ್ಧಿಗೆ 2-3 ವರ್ಷ ಸಮಯ ಬೇಕು. ಈ ವೇಳೆ ಕೆಲ ಏರು-ಪೇರುಗಳಾಗುವುದು ಸ್ವಾಭಾವಿಕ. ಅದಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. 

ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಡಿ.ಕೆ. ಚವ್ಹಾಣ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ಸೂಪರ್‌ ಮಾರುಕಟ್ಟೆ ಅಭಿವೃದ್ಧಿಯಾದರೆ ಮೂಲ ಸೌಲಭ್ಯಗಳು ಲಭ್ಯವಾಗಲಿವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು. ಪಾಲಿಕೆ ಸದಸ್ಯರಾದ ಸುಭಾಷ ಶಿಂಧೆ, ಸಂಜಯ ಕಪಟಕರ ಮಾತನಾಡಿದರು. ಶಂಕರ ಶೆಳಕೆ, ಪ್ರಕಾಶ ಗೋಡಬೋಲೆ, ದತ್ತಾ ಡೋರ್ಲೆ, ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಇದ್ದರು. 

ಮೇಯರ್‌ಗೆ ಸಭೆ ಮಾಹಿತಿ ಇಲ್ಲ: ಸೂಪರ್‌ ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸಭೆಯ ಬಗ್ಗೆ ಅಧಿಕಾರಿಗಳು ಮೇಯರ್‌ ಸೇರಿದಂತೆ ಪಾಲಿಕೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಸಭೆ ಸಮಯ ಮೀರಿದರೂ ಮೇಯರ್‌ ಬರದ ಕಾರಣ ಕೆಲ ಸದಸ್ಯರು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದಾಗ ಸಭೆ ಇದ್ದ ಮಾಹಿತಿಯೇ ಇಲ್ಲ ಎಂಬುದಾಗಿ ತಿಳಿಸಿದರು. ಸ್ಮಾರ್ಟ್‌ ಸಿಟಿ ಯೋಜನೆ ಬಿಆರ್‌ಟಿಎಸ್‌ ರೀತಿ ಆಗದಿರಲಿ ಎಂಬ ಮಾತುಗಳು ಕೇಳಿ ಬಂದವು.  

Advertisement

Udayavani is now on Telegram. Click here to join our channel and stay updated with the latest news.

Next