Advertisement

ಸಂಗೀತ ಇದ್ದಲ್ಲಿ ಹಿಂಸೆ, ಯುದ್ಧದ ಮಾತೇ ಇಲ್ಲ

05:07 PM Apr 16, 2018 | |

ದಾವಣಗೆರೆ: ಶ್ರದ್ಧೆ, ಶಿಸ್ತು, ತಾದ್ಯಾತ್ಮತೆಯಿಂದ ಸಂಗೀತ ಅಭ್ಯಾಸ ಮಾಡುವ ಮೂಲಕ ದೊಡ್ಡ ಮಟ್ಟದ ಗಾಯಕರಾಗುವತ್ತ ಗಮನ ನೀಡಬೇಕು ಎಂದು ನಾಡಿನ ಹಿರಿಯ ಸಾಹಿತಿ ಡಾ| ದೊಡ್ಡರಂಗೇಗೌಡ ತಿಳಿಸಿದ್ದಾರೆ.

Advertisement

ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಸುಶ್ರಾವ್ಯ ಸಂಗೀತ ವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಗೀತ ಗಾಯನ ತರಬೇತಿ ಶಿಬಿರ ನಿನಾದ-6 ಸಮಾರೋಪದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶ್ರದ್ಧೆ ಎನ್ನುವುದು ಬದುಕಿನ ಗದ್ದೆ… ಶ್ರದ್ಧೆಯಿಂದ ಬದುಕನ್ನು ಗೆದ್ದೆ… ಎನ್ನುವ ಮಾತಿನಂತೆ ಶ್ರದ್ಧೆ ಮತ್ತು ಶಿಸ್ತಿನಿಂದ ಏನನ್ನಾದರೂ ಸಾಧಿಸಬಹುದು. ಮಕ್ಕಳು ಶ್ರದ್ಧೆ ಮತ್ತು ಶಿಸ್ತಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ದಾವಣಗೆರೆಯ ಸುಶ್ರಾವ್ಯ ಸಂಗೀತ ವಿದ್ಯಾಲಯದ 6 ನೇ ಗೀತ ಗಾಯನ ತರಬೇತಿ ಶಿಬಿರದಲ್ಲಿ ನನ್ನ ಕವಿತೆಗಳನ್ನು ಆಯ್ಕೆ ಮಾಡಿಕೊಂಡಿರುವುದು ಏಕೆ ಎಂಬುದು ನನಗೆ ಗೊತ್ತಿಲ್ಲ. ನನಗೆ ಪದ್ಮಶ್ರೀ ಸಿಕ್ಕ ಕಾರಣಕ್ಕೆ ಆಯ್ಕೆ ಮಾಡಿಕೊಂಡಿರಬಹುದು. ನಾನು ಈ ಕ್ಷಣಕ್ಕೂ ಏನನ್ನೂ ಕಾಟಾಚಾರಕ್ಕೆ ಬರೆಯುವುದೇ ಇಲ್ಲ. ಒಂದೇ ಒಂದು ಸಾಲು ಬರೆದರೂ ಶ್ರದ್ಧೆಯಿಂದಲೇ ಬರೆಯುತ್ತೇನೆ. ಮಕ್ಕಳು ಅಂತಹ ಶ್ರದ್ಧೆಯನ್ನ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಬದುಕಿನ ಬಾಳ ಮತ್ತು ಭಾವಯಾನ ಪ್ರಾರಂಭಿಸುವ ಮುನ್ನ ನಾವು ಏನಾಗಬೇಕು ಎಂಬ ಗುರಿ ಇಟ್ಟುಕೊಳ್ಳಬೇಕು. ನಾನು ಏನಾಗಬೇಕು ಎಂಬ ಗುರಿ ಇಟ್ಟುಕೊಂಡರೆ ನೀನು ಏನಾದರೂ ಆಗುವೆ… ಎನ್ನುವ ಕವಿವಾಣಿಯಂತೆ ಗುರಿ ಮತ್ತು ಅದನ್ನು ಸಾಧಿಸುವ ಛಲ ಅತೀ ಮಖ್ಯ. ಜೀವನದ ಯಶಸ್ಸು ಪ್ರಾರಂಭವಾಗುವುದೇ ಒಂದು ಪುಟ್ಟ ಹೆಜ್ಜೆಯಿಂದ. ಮುಂದೆ ಆ ಹೆಜ್ಜೆ ದೊಡ್ಡ ಹೆಜ್ಜೆಯಾಗುತ್ತದೆ. ಆ ಪುಟ್ಟ ಹೆಜ್ಜೆ ಆತ್ಮವಿಶ್ವಾಸದಿಂದ ಕೂಡಿರಬೇಕು ಎಂದು ತಿಳಿಸಿದರು. 

ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಗೀತದ ಸಂಸ್ಪರ್ಶ ಮಾಡಿದಲ್ಲಿ ಮುಂದೆ ಅವರು ಒಳ್ಳೆಯವರಾಗುತ್ತಾರೆ. ಯಾವುದೇ ಕಾರಣಕ್ಕೂ ಕೆಟ್ಟ ವಿಚಾರದತ್ತ ಯೋಚನೆಯೂ ಮಾಡುವುದಿಲ್ಲ. ಸಂಗೀತ ಇದ್ದಲ್ಲಿ ಯುದ್ಧದ ಮಾತೇ ಇರುವುದಿಲ್ಲ. ಸಂಗೀತಕ್ಕೆ ಎಂತಹವರನ್ನೂ ಪರಿವರ್ತಿಸುವ ಮಹತ್ತರ ಶಕ್ತಿ ಇದೆ. ಸಂಗೀತದ ಸಂಸ್ಪರ್ಶವಾದವರು ಭವ್ಯ, ದಿವ್ಯ ಮನುಷ್ಯರಾಗುತ್ತಾರೆ ಎಂದು ತಿಳಿಸಿದರು.

Advertisement

ಸಂಗೀತದ ಭವ್ಯಯಾನ ಪ್ರಾರಂಭಿಸಲು ಜಾನಪದಕ್ಕೆ ಒತ್ತು ನೀಡಬೇಕು. ಜಾನಪದ ಕಲಿತಲ್ಲಿ ಸಂಗೀತದ ಎಲ್ಲ ಪದಗಳನ್ನು ಅತ್ಯಂತ ಸುಲಲಿತವಾಗಿ ಹೊರ ಹೊಮ್ಮಿಸಬಹುದು. ಧ್ವನಿ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಧ್ವನಿಯ ಮೇಲೆ ಹಿಡಿತ ಸಿಕ್ಕಲ್ಲಿ
ಶಾರೀರ ಇಂಪಾಗಿ ಹೊರ ಹೊಮ್ಮುತ್ತದೆ ಎಂದು ತಿಳಿಸಿದರು.

ಪಿ. ಕಾಳಿಂಗರಾವ್‌ರಿಂದ ಕರ್ನಾಟಕದಲ್ಲಿ ಪ್ರಾರಂಭವಾದ ಸುಗಮ ಸಂಗೀತ ಭಾವಯಾನಕ್ಕೆ ಈಗ ಎಲ್ಲಿಲ್ಲದ ಮಹತ್ವ ಇದೆ. ಸಂಗೀತದಿಂದಲೇ ಜೀವನ ಕಟ್ಟಿಕೊಂಡವರು ಇದ್ದಾರೆ. ಹಾಗಾಗಿ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಶ್ರದ್ಧೆ, ಶಿಸ್ತು ಮತ್ತು ಬದ್ಧತೆಯಿಂದ ಸಂಗೀತದ ತಾಳ, ಲಯ, ಪಟ್ಟು ಕಲಿತಲ್ಲಿ ಮುಂದೆ ಅವರಲ್ಲೇ ಲತಾ ಮಂಗೇಶ್ಕರ್‌, ಬಾಲಸುಬ್ರಹ್ಮಣ್ಯಂ , ಜೇಸುದಾಸ್‌ರಂತಹವರು ಹೊರ ಹೊಮ್ಮಬಹುದು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ, ಸುಶ್ರಾವ್ಯ ಸಂಗೀತ ವಿದ್ಯಾಲಯದ ಯಶಾ ದಿನೇಶ್‌, ಸಿ.ಜಿ. ದಿನೇಶ್‌, ಸುಮ, ಸುಧಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next