ಉಡುಪಿ: ಗುಣಮಟ್ಟದ ಶಿಕ್ಷಣಕ್ಕೆ ಎಂಜಿಎಂ ಕಾಲೇಜು ಖ್ಯಾತಿ ಪಡೆದಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂಬ ಆಶಯದಲ್ಲಿ ಆರಂಭಗೊಂಡ ಎಂಜಿಎಂ ಸಂಧ್ಯಾ ಕಾಲೇಜು ಉನ್ನತ ಶಿಕ್ಷಣ ಪಡೆಯುವ ಹಂಬಲವಿರುವ ವಿದ್ಯಾರ್ಥಿಗಳ ಆಶಾಕಿರಣವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಹೇಳಿದರು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಜರಗಿದ ಎಂಜಿಎಂ ಸಂಧ್ಯಾ ಕಾಲೇಜು ದ್ವಿತೀಯ ಸ್ಥಾಪನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಶಿಕ್ಷಣವು ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತದೆ. ಸಂಧ್ಯಾ ಕಾಲೇಜಿನ ಶಿಕ್ಷಣವು ಸಮಾಜಕ್ಕೆ ಸಾಕಷ್ಟು ಅನುಕೂಲಗಳಾಗಿವೆ. ಬೆಳಗ್ಗೆ ಉದ್ಯೋಗ ಮಾಡಿಕೊಂಡು ಸಂಜೆ ಶಿಕ್ಷಣ ಪಡೆಯುವ ಬಹುತೇಕ ಮಂದಿಯ ಶೈಕ್ಷಣಿಕ ಕನಸು ಸಾಕಾರಗೊಳ್ಳುತ್ತದೆ. ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷರಾದ ಟಿ. ಸತೀಶ್ ಯು. ಪೈ ಅವರು ವಿದ್ಯಾರ್ಥಿಗಳ ಉನ್ನತಿಗಾಗಿ, ತಮ್ಮ ದೂರದೃಷ್ಟಿಯೊಂದಿಗೆ ರೂಪಿಸಿದ ಈ ಸಂಸ್ಥೆ ಸಮಾಜಕ್ಕೆ ಅತ್ಯುತ್ತಮ ಕೊಡುಗೆಯಾಗಿದೆ ಎಂದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಬಿ. ಪಿ. ವರದರಾಯ ಪೈ ಮಾತನಾಡಿ, ಶ್ರಮ ಮತ್ತು ಬದ್ಧತೆಯಿಂದ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ಎಂಜಿಎಂ ಸಂಧ್ಯಾ ಕಾಲೇಜು ಎಲ್ಲ ಪೂರಕ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಜೀವನದಲ್ಲಿ ವಿಶೇಷ ಸಾಧನೆಗಳನ್ನು ಮಾಡಬೇಕು. ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಭವಿಷ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯ ಕೌಶಲಗಳ ತರಬೇತಿ ನೀಡಲಾಗುತ್ತಿದೆ ಎಂದರು.
ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಊಟ ನೀಡುವ ಯೋಜನೆಗೆ ವರದರಾಯ ಪೈ ಅವರು 25 ಸಾವಿರ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.
ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷರಾದ ಟಿ.ಸತೀಶ್ ಯು. ಪೈ ಅವರು ಅಧ್ಯಕ್ಷತೆವಹಿಸಿ, ಹಾರೈಸಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಎಂಜಿಎಂ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಕಾಲೇಜಿನ ಮುಖ ವಾಣಿ, “ದ ಹೊರಿಝೊàನ್’ (ದ್ವಿತೀಯ ಸಂಚಿಕೆ) ಅನಾವರಣ ಗೊಳಿಸಲಾಯಿತು. ಎಪ್ಪತ್ತೇಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 5.50 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ ಎಸ್.ನಾಯ್ಕ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ಎಂ. ವಿಶ್ವನಾಥ್ ಪೈ ವಂದಿಸಿ, ಬಿಕಾಂ-ಬಿಬಿಎ ಸಹ ಸಂಯೋಜಕಿ ಡಾ| ಮಲ್ಲಿಕಾ ಶೆಟ್ಟಿ ನಿರೂಪಿಸಿದರು.