ದೇವನಹಳ್ಳಿ: ಜಿಲ್ಲೆಯಲ್ಲಿ2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಬೆಳೆಗಳ ಫೋಟೋ ಅಪ್‌ಲೋಡ್ ಮಾಡಿರುವುದರಲ್ಲಿ ಯಾವುದೇ ಲೋಪದೋಷ ಕಂಡು ಬಂದಲ್ಲಿ, ರೈತರು ಬೆಳೆ ದರ್ಶಕ್ 2020 ಆ್ಯಪ್‌ನಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಕೃಷಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ತಿಳಿಸಿದ್ದಾರೆ.
ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ಬೆಳೆ ಸಮೀಕ್ಷೆ ನಡೆಸುತ್ತಿದ್ದು ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಬೆಳೆ ಮಾಹಿತಿ, ಮೇಲ್ವಿಚಾರಕರ ಮೂಲಕ ಅನುಮೋದನೆ ನಂತರ, ಈ ಮಾಹಿತಿಯನ್ನು ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗಾಗಿ, ಬೆಳೆ ವಿಮೆ ಯೋಜನೆಗಾಗಿ, ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ.
ಬೆಳೆ ದರ್ಶಕ್ ಆ್ಯಪ್‌ನ ವೈಶಿಷ್ಯತೆ: ಬೆಳೆ ದರ್ಶಕ್ ಆ್ಯಪ್‌ನಲ್ಲಿ ನಿಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರ, ವಿಸ್ತೀರ್ಣದ ಮಾಹಿತಿ ಪಡೆಯಬಹುದು, ಬೆಳೆ ಸಮೀಕ್ಷೆ ಸಮಯದಲ್ಲಿ ನಿಮ್ಮ ಜಮೀನಿನಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ ಛಾಯಾ ಚಿತ್ರ ವೀಕ್ಷಿಸಬಹುದು, ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು, ಮೊಬೈಲ್ ಸಂಖ್ಯೆ ವಿವರ ಪಡೆಯಬಹುದು, ಅಲ್ಲದೇ, ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ದಾಖಲಾಗಿರುವ ಎಲ್ಲಾ ಆಕ್ಷೇಪಣೆ ಸಂಬಂಧಪಟ್ಟ ಮೇಲ್ವಿಚಾರಕರಿಗೆ ತಂತ್ರಾಂಶದಲ್ಲಿ ಗುರುತಿಸಲಿದ್ದಾರೆ.
ಮೇಲ್ವಿಚಾರಕರು ಆಕ್ಷೇಪಣೆಗಳನ್ನು ಪರಿಶೀಲಿಸಿ, ಅವುಗಳನ್ನು ತುರ್ತಾಗಿ ಇತ್ಯರ್ಥಪಡಿಸುವರು. ಮೇಲ್ವಿಚಾರಕರು ಸ್ವೀಕೃತವಾಗಿರುವ ಪ್ರತಿಯೊಂದು ಆಕ್ಷೇಪಣೆಯನ್ನು ಕೂಲಂಕಶವಾಗಿ ಪರಿಶೀಲಿಸಿ, ಈಗಾಗಲೇ ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯೊಂದಿಗೆ ಹೋಲಿಸಿ ಆಕ್ಷೇಪಣೆ ಇತ್ಯರ್ಥಪಡಿಸುವರು. ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿ ಆಧಾರದ ಮೇರೆಗೆ ಇತ್ಯರ್ಥಪಡಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ ಮೇಲ್ವಿಚಾರಕರೇ ಖುದ್ದಾಗಿ ಮಹಜರು ದಾಖಲಿಸುವ ಮೂಲಕ ಆಕ್ಷೇಪಣೆ ಇತ್ಯರ್ಥಪಡಿಸಲಾಗುವುದು ಎಂದು ಕೃಷಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ತಿಳಿಸಿದ್ದಾರೆ.
ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು ಬೆಳೆ ದರ್ಶಕ 2020 ಎಂಬ ಆ್ಯಪ್‌ನ್ನು ಪ್ಲೇಸ್ಟೋರ್‌ನಲ್ಲಿಡೌನ್‌ಲೋಡ್ ಮಾಡಿಕೊಂಡು ಬೆಳೆಗಳ ಫೋಟೋ ಅಪ್‌ಲೋಡ್ ಮಾಡಿರುವುದರಲ್ಲಿಯಾವುದೇ ಲೋಪದೋಷಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಅ.15 ಕೊನೇ ದಿನವಾಗಿದೆ. –
ಜಯಸ್ವಾಮಿ, ಕೃಷಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿಕೃಷಿ ನಿರ್ದೇಶಕ