Advertisement

ಕಲ್ಯಾಣ ಕಾರ್ಯಕ್ರಮ ಅನುಷ್ಠಾನಗೊಳಿಸದಿದ್ದರೆ ಜೈಲಿಗೆ!

11:34 AM Dec 28, 2018 | |

ಬೆಂಗಳೂರು: ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫ‌ಲಾನುಭವಿಗಳಿಗೆ ತಲುಪಿಸುವಲ್ಲಿ ವಿಫ‌ಲವಾಗುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಕಲ್ಯಾಣ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಫ‌ಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಪಾಲಿಕೆಯ ಮಾಸಿಕ ಸಭೆಯಲ್ಲಿ ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅದರಂತೆ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ಎಷ್ಟು ಖರ್ಚಾಗಿದೆ ಎಂಬ ಮಾಹಿತಿ ನೀಡುವಂತೆ ಒತ್ತಾಯಿಸಿದರು. 

ಅದಕ್ಕೆ ಉತ್ತರಿಸಿದ ಆಯುಕ್ತರು, ಬಜೆಟ್‌ನಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ 750 ಕೋಟಿ ರೂ. ಮೀಸಲಿಡಲಾಗಿದ್ದು, ಆ ಪೈಕಿ ಈಗಾಗಲೇ 232 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬಾಕಿಯಿದ್ದು, ಆ ವೇಳೆಗೆ ಶೇ.90ರಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟ ಅನುದಾನ ಆಯಾ ವರ್ಷದಲ್ಲಿಯೇ ಬಳಕೆಯಾಗಬೇಕು. ಅನುದಾನ ಬಳಕೆಗೆ ಮುಂದಾಗದಂತಹ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು 2013ರಲ್ಲಿ ಜಾರಿಗೆ ತಂದಿರುವ ಕಾಯ್ದೆಯಲ್ಲಿ ಅವಕಾಶವಿದ್ದು, ಉದ್ದೇಶ ಪೂರ್ವಕವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್‌ ಆಗಿ ಹೇಳಿದರು. 

ಇದಕ್ಕೂ ಮೊದಲು ಒಂಟಿ ಮನೆಗಳಿಗೆ ಅನುದಾನ ಪಾವತಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ನರಸಿಂಹ ನಾಯಕ್‌, ಪಾಲಿಕೆಯ ಒಂಟಿ ಮನೆ ಯೋಜನೆಗೆ ಆಯ್ಕೆಯಾಗಿರುವ ಅನೇಕ ಬಡವರು ಮನೆಗಳನ್ನು ತೊರೆದು ಬಾಡಿಗೆ ಮನೆಗಳಲ್ಲಿ ಇದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಅನುದಾನ ಬಿಡುಗಡೆಗೆ ಮುಂದಾಗುತ್ತಿಲ್ಲ. ಅಧಿಕಾರಿಗಳು ಇದೇ ರೀತಿಯ ಧೋರಣೆ ಮುಂದುವರಿಸಿದರೆ ಅವರ ವಿರುದ್ಧ ಎಸಿಬಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

Advertisement

ಸರ್ಕಾರದಿಂದ ಅಗತ್ಯ ಅನುದಾನ ಲಭ್ಯ: ರಾಜ್ಯ ಸರ್ಕಾರದಿಂದ ಪಾಲಿಕೆಗೆ 2016-17 ಹಾಗೂ 2017-18ನೇ ಸಾಲಿಗೆ ಘೋಷಣೆಯಾಗಿದ್ದ 7,300 ಕೋಟಿ ರೂ. ಪೈಕಿ ಈಗಾಗಲೇ 6,870 ಕೋಟಿ ರೂ. ಬಿಡುಗಡೆಯಾಗಿದ್ದು, ವಿವಿಧ ಯೋಜನೆಗಳಿಗೆ 5,628 ಕೋಟಿ ರೂ. ವ್ಯಯಿಸಲಾಗಿದೆ. ಉಳಿದಂತೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ ಕೂಡಲೇ ಉಳಿದ ಅನುದಾನವೂ ಲಭ್ಯವಾಗಲಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. 

ಸರ್ಕಾರ 2017-18ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 2,491 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುದಾನ ನೀಡಲು ಒಪ್ಪಿದ್ದು, ಈಗಾಗಲೇ ಹಲವು ಯೋಜನೆಗಳಿಗೆ ಟೆಂಡರ್‌ ಆಹ್ವಾನಿಸಲಾಗಿದೆ. ಇದೀಗ ಸರ್ಕಾರ ಮುಂದಿನ ಎರಡು ವರ್ಷಗಳಿಗೆ 8,030 ಕೋಟಿ ರೂ. ನೀಡಲು ಅನುಮೋದನೆ ನೀಡಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 

ಚರಾಸ್ತಿ ಜಪ್ತಿಗೆ ಆದೇಶ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಾಖಲೆಯ 2,185 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಉಳಿದ ಮೂರು ತಿಂಗಳಲ್ಲಿ 500 ಕೋಟಿ ರೂ. ತೆರಿಗೆ ಸಂಗ್ರಹಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು. 

ಪಾಲಿಕೆಗೆ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್‌ ಜಾರಿಗೊಳಿಸುವಂತೆ ಹಾಗೂ ವಾರೆಂಟ್‌ ಜಾರಿಗೊಳಿಸಿ ಆಸ್ತಿಗಳಲ್ಲಿನ ಚರಾಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದ್ದು, ಟೋಟಲ್‌ ಸ್ಪೇಷ್ಟನ್‌ ಸರ್ವೆಯಿಂದ ಜನವರಿ ವೇಳೆಗೆ 250 ಕೋಟಿ ರೂ. ಸಂಗ್ರಹಿಸಲಾಗುವುದು ಎಂದು ಹೇಳಿದರು. 

ಜಾಹೀರಾತಿನಲ್ಲಿ ಪ್ರಾಣಿಗಳು: ಲಗ್ಗೆರೆ ವಾರ್ಡ್‌ನ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಅವರು ತಮ್ಮ ವಾರ್ಡ್‌ನಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೆಲ ಪ್ರಾಣಿಗಳ ಫೋಟೋಗಳನ್ನು ಹಾಕಿಕೊಳ್ಳಲಾಗಿದೆ ಎಂದು ಪರೋಕ್ಷವಾಗಿ ಶಾಸಕ ಮುನಿರತ್ನ ವಿರುದ್ಧ ಹರಿಹಾಯ್ದರು. 

ಅದಕ್ಕೆ ಉತ್ತರಿಸಿದ ಆಯುಕ್ತರು, ಸರ್ಕಾರ ಹಣದಲ್ಲಿ ಕೈಗೊಳ್ಳುವ ಯೋಜನೆಯಲ್ಲಿ ಮುಖ್ಯ ನಾಯಮೂರ್ತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಚಿವರ  ಭಾವಚಿತ್ರಗಳನ್ನು ಹಾಕಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ಅದರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. 

ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಪ್ರತಿಕ್ರಿಯಿಸಿ, ನಾವು ಸಹ ಜನಪ್ರತಿನಿಧಿಗಳಾಗಿದ್ದು, ತಳಮಟ್ಟದಲ್ಲಿ ನಾವು ಜನರೊಂದಿಗೆ ಕೆಲಸ ಮಾಡುತ್ತೇವೆ. ಹೀಗಾಗಿ ಪಾಲಿಕೆ ಸದಸ್ಯರ ಫೋಟೋಗಳನ್ನು ಅಳವಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುವಂತೆ ಕೋರಿದರು. 

ಕಣ್ಣೀರಿಟ್ಟ ಪಾಲಿಕೆ ಸದಸ್ಯೆ: ಪಾಲಿಕೆ ಸದಸ್ಯರ ಪ್ರಶ್ನೆಗಳಿಗೆ ಆಯುಕ್ತರು ಉತ್ತರಿಸಲು ಮುಂದಾದಾಗ ಲಗ್ಗೆರೆ ವಾರ್ಡ್‌ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಮಾತನಾಡಲು ಅವಕಾಶ ನೀಡಬೇಕೆಂದು ಧರಣಿ ನಡೆಸಿ ಕಣ್ಣೀರಿಟ್ಟ ಘಟನೆ ನಡೆಯಿತು. ಅವರನ್ನು ಸಮಾಧಾನ ಪಡೆಯಲು ಮುಂದಾದ ಆಡಳಿತ ಪಕ್ಷ ನಾಯಕರ ಕಾಲಿಗೆ ಬೀಳಲು ಮುಂದಾದರು. ಕೊನೆಗೆ ಆಯುಕ್ತರು ಉತ್ತರ ನೀಡಿದ ನಂತರ ಅವಕಾಶ ನೀಡುವುದಾಗಿ ಮೇಯರ್‌ ಭರವಸೆ ನೀಡಿದ ನಂತರ ಅವರು ಧರಣಿ ವಾಪಸ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next