Advertisement

‘ಜಲಮೂಲಗಳ ನಿರ್ವಹಣೆ ಮಾಡದಿದ್ದಲ್ಲಿ ಅಪಾಯ’

02:20 PM Mar 22, 2018 | Team Udayavani |

ಸುರತ್ಕಲ್‌ : ಮುಂಜಾಗ್ರತಾ ಕ್ರಮವನ್ನು ತತ್‌ಕ್ಷಣದಿಂದಲೇ ಆರಂಭಿಸದಿದ್ದಲ್ಲಿ ಸರಸ್ವತಿ ನದಿಯಂತೆ ಗಂಗಾ ನದಿಯೂ ಮಾಯವಾಗುವುದರಲ್ಲಿ ಸಂಶಯವಿಲ್ಲ ಎಂದು ಮಂಗಳೂರು ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಪ್ರೊ| ಜಗದೀಶ್‌ ಬಾಳ ಹೇಳಿದರು. ಸುರತ್ಕಲ್‌ ಗೋವಿಂದ ದಾಸ ಕಾಲೇಜಿನ ಸ್ನಾತಕೋತ್ತರ ವಿಭಾಗ ವಿಶ್ವ ಜಲ ದಿನದ ಪ್ರಯುಕ್ತ ಆಯೋಜಿಸಿದ್ದ ಜಲ ಸಂರಕ್ಷಣೆ ಹಾಗೂ ಪೂರಕ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

Advertisement

ಜನರ ಸಹಭಾಗಿತ್ವ ಅಗತ್ಯ
ಗಂಗೆಯ ಶುದ್ಧೀಕರಣಕ್ಕೆ ಕೋಟ್ಯಂತರ ವೆಚ್ಚ ಮಾಡಲಾಗುತ್ತಿದೆ. ಆದರೆ ಜನರ ಸಹಭಾಗಿತ್ವ ದೊರಕದೇ ಹೋದಲ್ಲಿ ಕಾರ್ಯಕ್ರಮ ವಿಫಲವಾಗುತ್ತದೆ. ಜಿಲ್ಲೆಯ ನೇತ್ರಾವತಿ ನದಿಯ ಮೂಲಕ್ಕೆ ಅಣೆಕಟ್ಟು ಕಟ್ಟಲಾಗುತ್ತದೆ. ಇದರಿಂದ ಕೆಳಭಾಗದಲ್ಲಿ ಇರುವ ಅಂತರ್ಜಲ ಉಳಿಸುವ ಬಾವಿ, ಕೆರೆಗಳ ನೀರಿನ ಸಂಗ್ರಹಕ್ಕೆ ಧಕ್ಕೆಯಾಗುತ್ತದೆ. ನೇತ್ರಾವತಿ ಸಮುದ್ರಕ್ಕೆ ಸರಾಗವಾಗಿ ಹರಿಯಲು ಅಡೆ ತಡೆಗಳು ಉಂಟಾದಲ್ಲಿ ಉಪ್ಪು ನೀರು ತುಂಬೆ ಕಿಂಡಿ ಅಣೆಕಟ್ಟು ವರೆಗೂ ಬರಲು ಸಾಧ್ಯತೆಯಿದೆ ಎಂದರು.

ನದಿ ನೀರಿನ ಸಮಸ್ಯೆಯಲ್ಲೂ ರಾಜಕೀಯ
ನಮ್ಮ ದೇಶದಲ್ಲಿ ನದಿ ನೀರಿನ ಸಮಸ್ಯೆ ರಾಜಕೀಯ ವಿಚಾರವಾಗಿರುವುದು ದುರದೃಷ್ಟಕರ. ಹೀಗಾಗಿ ಈ ಹೋರಾಟ, ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳು ಇಂದಿಗೂ ಬಗೆ ಹರಿದಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಅಂತರ್ಜಲ ವೃದ್ಧಿಗೆ ಪಣತೊಡಿ
ಭಾರತ ಇದೀಗ ನೀರಿನ ಸಂಗ್ರಹದಲ್ಲಿ ಅಪಾಯದ ಸ್ಥಿತಿಯನ್ನು ಹೊಂದಿದೆ ಎಂದು ಸಂಶೋಧನ ವರದಿಗಳು ಹೇಳುತ್ತಿವೆಯಾದುದರಿಂದ ಶುದ್ಧ ಕುಡಿಯುವ ನೀರಿನ ಸಂಗ್ರಹ ಕೇಂದ್ರಗಳಾದ ಬಾವಿ, ಕೆರೆ, ಬೃಹತ್‌ ನದಿಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ, ಇದಕ್ಕೆ ಜನರ ಸಹಭಾಗಿತ್ವ ಮುಖ್ಯ. ನಮ್ಮ ನಮ್ಮ ಮನೆಯ ಹಾಗೂ ಸುತ್ತಮುತ್ತ ಸಮುದ್ರಕ್ಕೆ ಹರಿಯುವ ಮಳೆ ನೀರನ್ನು ತಡೆದು ಅಂತರ್ಜಲ ಸೇರಲು ನಾವೆಲ್ಲ ಕಟಿ ಬದ್ಧರಾಗಿ ಕೆಲಸ ಮಡಬೇಕಿದೆ ಎಂದರು.

ಪ್ರಾಂಶುಪಾಲ ಡಾ| ಮುರಳೀಧರ ರಾವ್‌, ಪ್ರೊ| ರಮೇಶ್‌ ಕುಳಾಯಿ, ಡಾ| ಸುರೇಶ್‌ ರಮಣ್‌ ಮಯ್ಯ, ಪ್ರೊ| ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next