Advertisement

ಟಿಕೆಟ್‌ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿ ಕಣಕ್ಕೆ

04:22 PM Jan 10, 2018 | Team Udayavani |

ಮಂಡ್ಯ: ಯಾವುದೇ ರಾಜಕೀಯ ಪಕ್ಷಗಳು ಕೊತ್ತತ್ತಿ ಹೋಬಳಿಯವರಿಗೆ ಟಿಕೆಟ್‌ ನೀಡಿದಲ್ಲಿ ಎಲ್ಲರೂ ಆ ಪಕ್ಷದ ಅಭ್ಯರ್ಥಿಗೆ ಮತ ನೀಡುವುದು. ಇಲ್ಲದಿದ್ದರೆ ಪಕ್ಷೇತರವಾಗಿ ಹೋಬಳಿಯ ಅಭ್ಯರ್ಥಿಯನ್ನು ಕಣಕ್ಕಿಸಲು ಕೊತ್ತತ್ತಿ ಹೋಬಳಿ ಮಟ್ಟದ ಮುಖಂಡರ ಸಭೆಯಲ್ಲಿ ಸರ್ವಸಮ್ಮತ ನಿರ್ಣಯ ಕೈಗೊಳ್ಳಲಾಯಿತು.

Advertisement

 ತಾಲೂಕಿನ ಸಂತೆಕಸಲಗೆರೆ ಶ್ರೀ ಭೂಮಿ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕೊತ್ತತ್ತಿ ಹೋಬಳಿ ಜನಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಮುಖಂಡರ ನಿರ್ಣಯಕ್ಕೆ ಜನರು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಜವರೇಗೌಡ, ಹಿಂದಿನಿಂದಲೂ ನಮ್ಮ ಹೋಬಳಿಯನ್ನು ರಾಜಕೀಯ ಪಕ್ಷಗಳು ಕಡೆಗಣಿಸುತ್ತಲೇ ಬಂದಿವೆ. ಇದೇ ಕಾರಣದಿಂದ ಹಿಂದೆ ಯತ್ತಗದಹಳ್ಳಿ ದೊಡ್ಡಬೋರೇಗೌಡರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿದ್ದೆವು.

ಈಗ ಮತ್ತೆ ಅಂತಹದ್ದೇ ಪರಿಸ್ಥಿತಿ ಎದುರಾಗಿದೆ. ಒಂದು ಲಕ್ಷ ಮತದಾರರಿರುವ ನಾವು ಈಗ ಒಗ್ಗೂಡಿ ಆ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು. ಕಾಂಗ್ರೆಸ್‌ ಮುಖಂಡ ಪಾಲಹಳ್ಳಿ ಚಂದ್ರಶೇಖರ್‌ ಮಾತನಾಡಿ, ಸ್ಪರ್ಧೆಗೆ ತಾವು ಸಿದ್ಧ ಅಥವಾ ನಿಮ್ಮಲ್ಲಿ ಅಭ್ಯರ್ಥಿಯಾಗುವವರಿಗೆ ಬೆಳಗೊಳ ಹೋಬಳಿ ಜನರೂ ಕೂಡ ಸಾಥ್‌ ನೀಡಲಿದ್ದೇವೆ.

ನಾನು, ಸಚ್ಚಿದಾನಂದ, ನಂಜುಂಡೇಗೌಡರನ್ನು ಜೆಡಿಎಸ್‌ ವರಿಷ್ಠರು ಕರೆದು ನಿಮ್ಮಲ್ಲಿ ಒಬ್ಬರು ಅಭ್ಯರ್ಥಿಯಾಗಿ ಎಂದರು. ನಾವು ಸಿದ್ಧರಾಗುತ್ತಿದ್ದಂತೆ ಅರಕೆರೆ ನಾಯಕರ ಮನೆಗೆ ಹೋದರು. ಅವರು ದೊಡ್ಡವರು ಹೋಗಲಿ, 7 ಬಾರಿ ಶಾಸಕರಾಗಿದ್ದಾರೆ, ಮತ್ತೆ ಅವರೇ ಆಗಬೇಕೆ? ಬೇರೆಯವರಿಗೆ ಅರ್ಹತೆ ಇಲ್ಲವೆ ಎಂದು ಪ್ರಶ್ನಿಸಿದರು.

Advertisement

ತಗ್ಗಹಳ್ಳಿ ಕೃಷ್ಣ ಮಾತನಾಡಿ, ಹಣ ಇಲ್ಲದೆ ಚುನಾವಣೆ ಕಷ್ಟ ಎಂಬುದು ಸುಳ್ಳು. ಒಂದು ಎಕರೆ ಜಮೀನಿಲ್ಲದ ಮೋದಿಯವರು ದೇಶದ ಪ್ರಧಾನಿಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತಗಳನ್ನು  ಕ್ವಾಟ್ರಾ, ಬಾಡು, 2 ಸಾವಿರ ರೂ. ಮಾರಾಟ ಮಾಡಿಕೊಳ್ಳದೆ, ಸ್ವಾಭಿಮಾನದಿಂದ ರಾಜಕೀಯ ಮಾಡೋಣ ಎಂದರು.

ಇಂಡುವಾಳು ಸಚ್ಚಿದಾನಂದ ಮಾತನಾಡಿ, ಶಾಸಕ ರಮೇಶ್‌ ಬಂಡಿಸಿದ್ದೇಗೌಡರು ತಾವು ಅಂಬರೀಶ್‌ ವಿರುದ್ಧ ಗೆದ್ದಿರುವುದೇ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಂಬರೀಶ್‌ ಯಾವತ್ತಿಗೂ ರಾಜ್ಯ ನಾಯಕರೇ. ಲಕ್ಷಾಂತರ ಮತಗಳ ಅಂತರದಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿರುವವರ ಪೈಕಿ ಅವರೂ ಒಬ್ಬರು. 7 ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಅವರ ಕುಟುಂಬದ ಸಾಧನೆಯನ್ನು ಹೇಳಲಿ ಎಂದು ಸವಾಲೆಸೆದರು.

ಸಿದ್ದರಾಮೇಗೌಡ ಮಾತನಾಡಿ, ಕೊತ್ತತ್ತಿ ಹೋಬಳಿಯ ಯಾರಾದರೂ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯಿಂದ ಟಿಕೆಟ್‌ ತಂದಲ್ಲಿ ಅವರ ಪರ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುತ್ತೇವೆ. ಇದಕ್ಕೆ ಹೋಬಳಿಯ ಎಲ್ಲ ಮತದಾರರು ಸಹಕರಿಸಬೇಕೆಂದು ಕೋರಿದರು.

ಸಮಾವೇಶದಲ್ಲಿ ಕೊತ್ತತ್ತಿ ಗ್ರಾಪಂ ಮಾಜಿ ಅಧ್ಯಕ್ಷೆ ಶಕುಂತಲಾ, ಜಿಪಂ ಸದಸ್ಯ ರಾಮಲಿಂಗಯ್ಯ, ಮುಖಂಡರಾದ ಸೋಮಶಂಕರೇಗೌಡ, ಮಂಜೇಗೌಡ, ಎಪಿಎಂಸಿ ನಿರ್ದೇಶಕಿ ಪಲ್ಲವಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next