ಕಲಬುರಗಿ: ‘ಸಮೀಕ್ಷೆಯಂತೆಯೇ ಫಲಿತಾಂಶ ಬಂದರೆ ಎಂವಿಎಂಗಳ ಮೇಲೆ ಸಂಶಯ ವ್ಯಕ್ತಪಡಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಕಾರ್ಜುನ ಖರ್ಗೆ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚುನಾವಣೆ ಘೋಷಣೆಯಾದ ದಿನದಿಂದಲೂ ಕಾಂಗ್ರೆಸ್ 40 ಸ್ಥಾನ ದಾಟುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿಕೊಂಡು ಬಂದಿದ್ದಾರೆ. ಅವರು ಯಾವ ಆಧಾರದ ಮೇಲೆ ಹಾಗೆ ಹೇಳಿದ್ದರೋ ಗೊತ್ತಿಲ್ಲ. ಸೋಲು- ಗೆಲುವು ಬೇರೆ ವಿಚಾರ. ಆದರೆ, ಮೋದಿ ಹೇಳುವುದು ಮತ್ತು ಈಗ ಚುನಾವಣೋತ್ತರ ಸಮೀಕ್ಷೆ ನೋಡಿದಾಗ ಅನುಮಾನ ಕಾಡುತ್ತದೆ’ ಎಂದರು. ಚುನಾವಣೋತ್ತರ ಫಲಿತಾಂಶದಲ್ಲಿ ಸತ್ಯಾಂಶವಿಲ್ಲ. ನಮಗೆ ಸಿಕ್ಕಿರುವ ಮಾಹಿತಿಗೂ, ಚುನಾವಣೋತ್ತರ ಫಲಿತಾಂಶಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಸಮೀಕ್ಷೆಗಳು ನಿಜವಾದರೆ ಚುನಾವಣೆ ಪೂರ್ವ ನಿಯೋಜನೆಯಂತೆ ನಡೆದಿದೆ ಎಂಬ ಅನುಮಾನ ಹುಟ್ಟುತ್ತದೆ. ಜತೆಗೆ ಇವಿಎಂನಲ್ಲಿ ಏನೋ ಗಡಿಬಿಡಿ ಅಥವಾ ಗೋಲ್ಮಾಲ್ ಆಗಿದೆ ಎಂದರ್ಥ ಎಂದರು.