ಕುಕನೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾನೂನಿನ ಅರಿವು ಹಾಗೂ ಪ್ರಧಾನಿ ಎಂಬ ಜವಾಬ್ದಾರಿ ಇದ್ದರೆ ರಾಜ್ಯ ಸರ್ಕಾರ ಕಮಿಷನ್ ಪಡೆದಿದೆ ಎಂದಾದಲ್ಲಿ ತನಿಖಾ ದಳದ ಮೂಲಕ ತನಿಖೆ ಮಾಡಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಒಬ್ಬ ಪ್ರಧಾನಿ ಆಗಿ ಜಿಪಂ ಸದಸ್ಯ, ಗ್ರಾಪಂ ಸದಸ್ಯರಂತೆ ಹಗುರವಾಗಿ ಮಾತನಾಡಿ, ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯುವ ಹುನ್ನಾರ ಬಿಡಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಪ್ರಧಾನಿ ಆರೋಪಕ್ಕೆ ತಿರುಗೇಟು ನೀಡಿದರು.
ತಾಲೂಕಿನ ಇಟಗಿಯಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರ ಮಾತು ಪ್ರಧಾನಿ ಹುದ್ದೆಯ ಘನತೆಗೆ ತಕ್ಕ ಮಾತಲ್ಲ. ರಾಷ್ಟ್ರದ ಅಭಿವೃದ್ಧಿ ದೃಷ್ಟಿಕೋನ ಬಿಜೆಪಿಗಿಲ್ಲ. ಬಿಜೆಪಿಯವರಿಗೆ ಅಪಪ್ರಚಾರ ಮಾಡುವುದಷ್ಟೇ ಗೊತ್ತು. ಒಂದು ಸುಳ್ಳನ್ನು ಐವತ್ತು ಸಾರಿ ಹೇಳಿ ನಿಜ ಮಾಡುವ ತಂತ್ರ ಅವರದ್ದಾಗಿದೆ. ಚಹಾ ಮಾರುತ್ತಿದ್ದ ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಸರ್ಕಾರ ಶ್ರೀಸಾಮಾನ್ಯನು ಪ್ರಧಾನಿ ಆಗಬಹುದೆಂದು ನೀಡಿದ ಸಂವಿಧಾನದಿಂದ. ನೆಹರು ಪ್ರಧಾನಿ ಆಗಿದ್ದಾಗ ಕಾನೂನು ಸಚಿವರಾಗಿದ್ದ ಡಾ| ಅಂಬೇಡ್ಕರ್ ಅವರು ಪ್ರಧಾನಿ ಹುದ್ದೆಗೆ ಸಾಮಾನ್ಯರು ಸ್ಥಾನ ಅಲಂಕರಿಸಬಹುದೆಂಬ ಕಾನೂನು ನೀಡಿದ್ದರಿಂದ ಇಂದು ಮೋದಿ ಪ್ರಧಾನಿಯಾಗಿದ್ದಾರೆ. ಕಾಂಗ್ರೆಸ್ ಸರ್ವರನ್ನು ಸಮಾನ ದೃಷ್ಟಿಯಿಂದ ನೋಡಿದ ಸರ್ಕಾರ. ಆದರೆ ಪಿಎಂ ನರೇಂದ್ರ ಮೋದಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ರಾಷ್ಟ್ರ ಆರ್ಥಿಕ ಸ್ಥಿತಿಯಿಂದ ಕುಗ್ಗತೊಡಗಿದೆ. ದೇಶದ ಸಾಮಾನ್ಯ ಜನತೆ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಿದೆ.
ನೋಟು ಅಮಾನ್ಯದಿಂದ 26 ಸಾವಿರ ಕೋಟಿ ನಷ್ಟ ಸಂಭವಿಸಿದೆ. ರೈತರ, ಬಡವರ ಒಂದು ರೂ. ಸಾಲದ ಬಡ್ಡಿ ಸಹ ಬಿಜೆಪಿ ಮನ್ನಾ ಮಾಡಿಲ್ಲ. ಮಾಜಿ ಪಿಎಂ ಮನಮೋಹನ್ ಸಿಂಗ್ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ದೇಶದ ಆರ್ಥಿಕ ಸ್ಥಿತಿ ಕಾಂಗ್ರೆಸ್ ಸರ್ಕಾರದಲ್ಲಿ ಭದ್ರವಾಗಿತ್ತು. ನೀರಾವರಿ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.
1947ರಲ್ಲಿ ಹಸಿರು ಕ್ರಾಂತಿ ಮೂಲಕ ಪ್ರಧಾನಿ ಆಗಿದ್ದ ನೆಹರು ಹಲವಾರು ಅಣೆಕಟ್ಟು, ನೀರಾವರಿ ಯೋಜನೆ ಜಾರಿಗೆ ತಂದರು. ಹಾಗೆ ರಾಷ್ಟ್ರದಲ್ಲಿ ಶಿಕ್ಷಣಕ್ಕೆ, ಆರ್ಥಿಕ ಸುಧಾರಣೆಗೆ ಶ್ರಮಿಸಿದರು. ಕಾಂಗ್ರೆಸ್ ನೆಟ್ಟ ಮಾವಿನ ಮರ ಹೆಮ್ಮರವಾಗಿ ಬೆಳೆದಿದ್ದು, ಅದರಲ್ಲಿ ಬೆಳೆದ ಮಾವಿನ ಹಣ್ಣನ್ನು ಹರಿದು ಬಿಜೆಪಿ ಕೊಡುವ ಮೂಲಕ ಬಿಜೆಪಿ ತಮ್ಮ ಸಾಧನೆ ಎಂದು ಬೆನ್ನು
ತಟ್ಟಿಕೊಳ್ಳುತ್ತಿದೆ ಎಂದರು.
ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಮುಗ್ಗಟ್ಟಿಗೆ ಬಿಜೆಪಿ ಸರ್ಕಾರ ನೇರ ಕಾರಣ. ಕಾಂಗ್ರೆಸ್‌ನ ನಿರ್ಮಲ ಭಾರತ ಯೋಜನೆಯನ್ನು ಬಿಜೆಪಿ ಸ್ವತ್ಛ ಭಾರತ ಮಾಡಿ ಕಸ ಗುಡಿಸುವ ಫೋಟೋಗೆ ಫೋಸು ನೀಡುತ್ತಾ ಕಾಲಹರಣ ಮಾಡಿದೆ. ಬೇಕಿದ್ದರೆ ಪ್ರತಿ ಹಳ್ಳಿಯಲ್ಲಿ ಎಲ್ಲಾ ಸಂಸದರು, ಶಾಸಕರು ನಿತ್ಯ ಎರಡು ತಾಸು ಕಸ ಗೂಡಿಸಬೇಕೆಂಬ ಕಾನೂನು ತಂದಿದ್ದರೆ
ಯೋಜನೆಗೆ ಬೆಲೆ ಬರುತ್ತಿತ್ತು ಎಂದರು.
ಪ್ರಮುಖರಾದ ನಾರಾಯಣಪ್ಪ, ಹನುಮಂತಗೌಡ ಪಾಟೀಲ್, ಯಂಕಣ್ಣ ಯರಾಶಿ, ಬಸವಪ್ರಭು ಪಾಟೀಲ, ಕಳಕಪ್ಪ ಕಂಬಳಿ, ಮಂಜುನಾಥ ಕಡೆಮನಿ, ಗವಿಸಿದ್ದಪ್ಪ, ದೇವಪ್ಪ ಅರಕೇರಿ, ಅಪ್ಪಣ್ಣ ಜೋಶಿ, ಸುಭಾಷ ಮಾದಿನೂರು, ಶಿವಕುಮಾರ ಆದಾಪುರ, ಹನುಮರೆಡ್ಡಪ್ಪ ದೇಸಾಯಿ, ಮಲ್ಲಿಕಾರ್ಜುನ ಉಜ್ಜಮ್ಮನವರ್, ಮಹೇಶ ದೊಡ್ಮನಿ, ಮಹೇಶ ಗಾವರಾಳ ಇತರರಿದ್ದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಎಂದು ಕಾರ್ಯಕರ್ತರು, ನಾಯಕರು ಸೂಚಿಸಿದ್ದರು. ಆದರೆ ಶಾಸಕನಾಗಿ
ಯಲಬುರ್ಗಾ ಕ್ಷೇತ್ರದಲ್ಲಿ ಮಾಡಿದ ಹಲವಾರು ಕಾರ್ಯಗಳನ್ನು ಇನ್ನೂ ಪೂರ್ಣಗೊಳಿಸಬೇಕಿದೆ. ಕಳೆದ ವಿಧಾನಸಭಾ
ಚುನಾವಣೆಯಲ್ಲಿ ಜನ ನನಗೆ ವಿಶ್ರಾಂತಿ ಮಾಡಲು ಸೂಚಿಸಿದ್ದಾರೆ. ಈಗಿನ ಶಾಸಕ ಹಾಲಪ್ಪ ಆಚಾರ್ ಯ್ನಾವ್ಯಾವ ಕಾರ್ಯ ಮಾಡುತ್ತಾರೆಂದು ಜನ ಗಮನಿಸಲಿ. ಮುಂದಿನ ಸಲ ಮತ್ತೆ ಶಾಸಕನಾಗಿ ನನ್ನ ಕ್ಷೇತ್ರದ ಬಹುತೇಕ ಜನಪರ ಕಾರ್ಯ
ಪೂರ್ಣಗೊಳಿಸಿವೆ.
ಬಸವರಾಜ ರಾಯರಡ್ಡಿ, ಮಾಜಿ ಸಚಿವ
ಯಲಬುರ್ಗಾ ಕ್ಷೇತ್ರದಲ್ಲಿ ಮಾಡಿದ ಹಲವಾರು ಕಾರ್ಯಗಳನ್ನು ಇನ್ನೂ ಪೂರ್ಣಗೊಳಿಸಬೇಕಿದೆ. ಕಳೆದ ವಿಧಾನಸಭಾ
ಚುನಾವಣೆಯಲ್ಲಿ ಜನ ನನಗೆ ವಿಶ್ರಾಂತಿ ಮಾಡಲು ಸೂಚಿಸಿದ್ದಾರೆ. ಈಗಿನ ಶಾಸಕ ಹಾಲಪ್ಪ ಆಚಾರ್ ಯ್ನಾವ್ಯಾವ ಕಾರ್ಯ ಮಾಡುತ್ತಾರೆಂದು ಜನ ಗಮನಿಸಲಿ. ಮುಂದಿನ ಸಲ ಮತ್ತೆ ಶಾಸಕನಾಗಿ ನನ್ನ ಕ್ಷೇತ್ರದ ಬಹುತೇಕ ಜನಪರ ಕಾರ್ಯ
ಪೂರ್ಣಗೊಳಿಸಿವೆ.
ಬಸವರಾಜ ರಾಯರಡ್ಡಿ, ಮಾಜಿ ಸಚಿವ