Advertisement

ಕ್ವಾರಂಟೈನ್‌ ವ್ಯವಸ್ಥೆಗೆ ಅಡ್ಡಿಪಡಿಸಿದರೆ ಜೈಲು ಖಚಿತ

11:46 PM May 21, 2020 | Sriram |

ಪುತ್ತೂರು: ಹೊರ ರಾಜ್ಯಗಳಿಂದ ಬಂದು ಇಲ್ಲಿ ಕ್ವಾರಂಟೈನ್‌ ವ್ಯವಸ್ಥೆಗೆ ಒಳಗಾದವರಿಗೆ ಆಹಾರ ನೀಡುವವರಿಗೆ ಸ್ಥಳೀಯರು ಬೆದರಿಕೆ ಹಾಕುತ್ತಿರುವುದು ತಾಲೂಕು ಆಡಳಿತದ ಗಮನಕ್ಕೆ ಬಂದಿದ್ದು, ವ್ಯವಸ್ಥೆಗೆ ಅಡ್ಡಿ ಪಡಿಸುವವರ ವಿರುದ್ಧ ವಿಪತ್ತು ನಿರ್ವಹಣೆ ಕಾಯಿದೆಯಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ನೀಡಲಾಗುವುದು ಎಂದು ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು ಎಚ್ಚರಿಕೆ ನೀಡಿದ್ದಾರೆ.

Advertisement

ಹೊರ ರಾಜ್ಯಗಳಲ್ಲಿದ್ದು, ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊರಿಗೆ ಬರಲಾರದೆ ಸಂಕಷ್ಟಪಡುತ್ತಿದ್ದವರಿಗೆ ಸರಕಾರ ಊರಿಗೆ ಬರಲು ಅವಕಾಶ ಕಲ್ಪಿಸಿದೆ. ಹೀಗೆ ಬಂದವರನ್ನು 14 ದಿನಗಳ ಕಾಲ ಕ್ವಾರಂಟೈನ್‌ ವ್ಯವಸ್ಥೆಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ಪುತ್ತೂರು ತಾಲೂಕಿನಲ್ಲಿ 121 ಸರಕಾರಿ ಹಾಗೂ 13 ಖಾಸಗಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಕ್ವಾರಂಟೈನ್‌ ವ್ಯವಸ್ಥೆಯೊಳಗಿರುವ ಜನತೆಗೆ ಸ್ಥಳೀಯರು ಹಾಗೂ ಈ ಕುಟುಂಬದ ಸಂಬಂಧಿಗಳು ಊಟ ನೀಡುವ ಅವಕಾಶವನ್ನೂ ನೀಡಲಾಗಿದೆ. ಆದರೆ ಈ ರೀತಿ ಊಟ ತಂದು ಕೊಡುವ ವ್ಯಕ್ತಿಗಳಿಗೆ ಅಡ್ಡಿಪಡಿಸುವ ಘಟನೆಗಳು ನಡೆಯುತ್ತಿವೆ. ಇಂತಹ ಅಡ್ಡಿಪಡಿಸುವಿಕೆ ಕಾನೂನು ಬಾಹಿರವಾಗಿದ್ದು, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಅವರು ತಿಳಿಸಿದರು.

ಕ್ವಾರಂಟೈನ್‌ ವ್ಯವಸ್ಥೆಯಲ್ಲಿರುವವರು ಕೋವಿಡ್ 19 ಪೀಡಿತರಲ್ಲ. ಅವರು ನಮ್ಮವರೇ ಆಗಿದ್ದಾರೆ. ಅಂಥವರಿಗೆ ಊಟದ ವ್ಯವಸ್ಥೆ ಮಾಡುವುದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.

ನಗರದ ವಸತಿ ಶಾಲೆಯಲ್ಲಿ ಹೊರರಾಜ್ಯದಿಂದ ಬಂದ 15 ಮಂದಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿಗೆ ಊಟ ತಂದು ಕೊಡುವ ವ್ಯಕ್ತಿಗೆ ಸ್ಥಳೀಯ ಕೆಲವರಿಂದ ಬೆದರಿಕೆ ಬಂದಿತ್ತು. ಈ ಕುರಿತು ಪೊಲೀಸ್‌ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Advertisement

ತಾ.ಪಂ.ನಿಂದ ಊಟದ ವ್ಯವಸ್ಥೆ
ಗ್ರಾ.ಪಂ. ಮಟ್ಟದಲ್ಲಿ ಸರಕಾರಿ ಕ್ವಾರಂಟೈನ್‌ನಲ್ಲಿರುವವರಿಗೆ ಗ್ರಾ.ಪಂ. ವತಿಯಿಂದ ಊಟದ ವ್ಯವಸ್ಥೆ ಮಾಡ ಲಾಗಿದೆ. ತಾಲೂಕು ಕೇಂದ್ರಗಳಲ್ಲಿ ತಾ.ಪಂ. ವತಿಯಿಂದ ಈ ವ್ಯವಸ್ಥೆ ಕೈಗೊಳ್ಳ ಲಾಗಿದೆ. ಇದಕ್ಕಾಗಿ ತಾ.ಪಂ.ಗೆ 20 ಸಾವಿರ ರೂ. ಅನುದಾನವನ್ನು ಸರಕಾರ ನೀಡಿದೆ ಎಂದವರು ತಿಳಿಸಿದರು.

ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಹಾರಾಡಿಯ ಕೊಂಬೆಟ್ಟು ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ರಮೇಶ್‌ ಬಾಬು ಕ್ವಾರಂಟೈನ್‌ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರವಿಕುಮಾರ್‌, ತಾ.ಪಂ. ವ್ಯವಸ್ಥಾಪಕ ಶಿವಪ್ರಕಾಶ್‌ , ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್‌ ನಾಯ್ಕ ಉಪಸ್ಥಿತರಿದ್ದರು.

ಸಾವಿರ ಮಂದಿ ನಿರೀಕ್ಷೆ
ಈಗಾಗಲೇ ಪುತ್ತೂರು ತಾಲೂಕಿಗೆ ಹೊರರಾಜ್ಯಗಳಿಂದ 79 ಮಂದಿ ಬಂದಿದ್ದಾರೆ. ಇವರಿಗೆ ಕ್ವಾರಂಟೈನ್‌ ಸರಕಾರಿ, ಖಾಸಗಿ ವ್ಯವಸ್ಥೆ ಮಾಡಲಾಗಿದೆ. 10 ಮಂದಿ ಮಹಿಳೆಯರಿಗೆ ಹೋಂ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಗ್ರಾಮಮಟ್ಟದಲ್ಲಿ ಸರಕಾರಿ ಶಾಲೆಗಳು, ನಗರದಲ್ಲಿ ವಿದ್ಯಾರ್ಥಿ ನಿಲಯಗಳು ಹಾಗೂ ಲಾಡ್ಜ್ ಗಳನ್ನು ಈ ವ್ಯವಸ್ಥೆಗಳನ್ನು ಮಾಡಲಾಗಿದೆ. ತಾಲೂಕಿಗೆ ಸುಮಾರು 1000 ಮಂದಿ ಬರುವ ನಿರೀಕ್ಷೆ ಇದೆ, ಆದರೂ 3,094 ಮಂದಿಗೆ ಬೇಕಾದಷ್ಟು ಕ್ವಾರಂಟೈನ್‌ ವ್ಯವಸ್ಥೆ ಸಿದ್ಧಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next