ಕಾಪು: ಕಾಪು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ನೆಟ್ವರ್ಕ್ ಸಮಸ್ಯೆ ಜನರನ್ನು ಅತಿಯಾಗಿ ಕಾಡುತ್ತಿದೆ. ಬಹುತೇಕ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಳಿದ್ದರೂ ಅಗತ್ಯದ ಸಂದರ್ಭಗಳಲ್ಲಿ ನೆಟ್ವರ್ಕ್ ಸಿಗದೆ ಸಂಪರ್ಕ ವಂಚಿತರಾಗಿ ಜನರು ಪರದಾಡುವಂತಾಗಿದೆ.
ತಾಲೂಕಿನಲ್ಲಿ 14 ಕಡೆ ಬಿಎಸ್‌ಎನ್‌ಎಲ್ ಟವರ್‌ಗಳು ಇವೆ. ಟವರ್‌ಗಳೆಷ್ಟು ಇದ್ದರೂ ಪ್ರಯೋಜನವೇನು? ಕರೆಂಟ್ ಹೋದ ಕೂಡಲೇ ಟವರ್ ಆಫ್ ಆಗಿ ಹೆಚ್ಚಿನ ಕಡೆಗಳಲ್ಲಿ ಸಿಗ್ನಲ್ ಮಾಯವಾಗುತ್ತದೆ. ಗ್ರಾಹಕ ಸ್ನೇಹಿಯಾಗುವ ಉದ್ದೇಶದೊಂದಿಗೆ ಅಲ್ಲಲ್ಲಿ ಟವರ್ ನಿರ್ಮಿಸಿ ಸಿಗ್ನಲ್ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದರೂ, ಟವರ್‌ನಡಿಯಲ್ಲಿ ಇದ್ದರೂ ಸಿಗ್ನಲ್ ದೊರಕುತ್ತಿಲ್ಲ.
3 ಜಿ, 4ಜಿ ಯುಗದಲ್ಲಿ ಎಲ್ಲ ಕಡೆಗಳಲೂ ನೆಟ್ವರ್ಕ್ ಸಿಗುತ್ತದೆ ಎಂದು ನಂಬಿಕೊಂಡು ಜನ ತಮ್ಮ ಮನೆ, ಕಚೇರಿ ಗಳಲ್ಲಿದ್ದ ಸ್ಥಿರ ದೂರವಾಣಿ ಸಹಿತ ಖಾಸಗಿ ಮೊಬೈಲ್ ಸಿಮ್ ಗಳಿಗೆ ಬದಲಾಗಿ ಬಿಎಸ್‌ಎನ್‌ಎಲ್ ಸಿಮ್‌ಗಳನ್ನು ಹಾಕಿಸಿಕೊಂಡಿದ್ದರು. ಕೆಲವು ವರ್ಷಗಳ ಕಾಲ ನೆಟ್ವರ್ಕ್ ಉತ್ತಮ ರೀತಿಯಲ್ಲಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ನೆಟ್ವರ್ಕ್‌ಗೆ ಗ್ರಹಣ ಬಡಿದಂತಾಗಿದೆ.
ಸಮಸ್ಯೆಯೇನು? ತಾಲೂಕಿನ 11 ಎಕ್ಸ್‌ಚೇಂಜ್‌ಗಳನ್ನು ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿ ಅಧಿಕಾರಿಗಳು ಮತ್ತು ಸಿಬಂದಿಗಳ ಕೊರತೆಯಿದೆ. ಒಬ್ಬರೇ ಮೇಲ್ವಿಚಾರಕರಿದ್ದು, ಅವರೊಂದಿಗೆ ಮೂರು ಮಂದಿ ಟೆಕ್ನಿಶಿಯನ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ನೆಟ್ವರ್ಕ್ ಸಮಸ್ಯೆಗೆ ತುರ್ತು ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಟವರ್‌ಗಳಿದ್ದು ಟವರ್‌ಗಳಲ್ಲಿ ಬ್ಯಾಟರಿ ಬ್ಯಾಕಪ್ ಕಡಿಮೆಯಿದೆ. ಜನರೇಟರ್‌ಗಳು ಇರುವಲ್ಲಿ ನಿರ್ವಹಣೆಯಿಲ್ಲದೆ ಸೊರಗಿ ಹೋಗಿವೆ. ಕರೆಂಟ್ ಹೋದಾಗ ಎಂಜಿನ್ ಆಫ್ ಆಗುತ್ತದೆ, ಅದನ್ನು ಆನ್ ಮಾಡಲು ಸೂಕ್ತ ಸಿಬಂದಿಗಳ ಕೊರತೆಯಿದೆ. ಬ್ಯಾಟರಿ ಬ್ಯಾಕ್ ಅಪ್ ಇಲ್ಲದ ಪರಿಣಾಮ ರಿಸ್ಟಾರ್ಟ್ ಆಗಲು ಸಮಯ ತೆಗೆದುಕೊಳ್ಳುತ್ತಿದೆ.
ಸಿಬಂದಿ ಕೊರತೆ: ಕಾಪು, ಕಟಪಾಡಿ, ಪಡುಬಿದ್ರಿ, ಪಿಲಾರು, ಶಂಕರಪುರ, ಶಿರ್ವ, ಹೆಜಮಾಡಿ ದೂರವಾಣಿ ಸಂಪರ್ಕ ಕೇಂದ್ರಗಳಿದ್ದು ಪಣಿಯೂರು ಮತ್ತು ಉಚ್ಚಿಲ, ಪಲಿಮಾರು, ಅಜ್ಜರಕಾಡು ಸಬ್ ಎಕ್ಸ್‌ಚೇಂಜ್‌ಗಳಿವೆ. ಇಲ್ಲಿ ಎಸ್‌ಡಿಇ, ಜೆಟಿಒ, ಜೆಇ, ಟೆಕ್ನಿಶಿಯನ್, ಕಚೇರಿ ನಿರ್ವಹಣೆ ಹೀಗೆ ಅಧಿಕಾರಿಗಳು ಸೇರಿ 3-5 ಮಂದಿ ಸಿಬಂದಿ ಕರ್ತವ್ಯದಲ್ಲಿರಬೇಕಿತ್ತು. ಆದರೆ ವಿಆರ್‌ಎಸ್ ನಿಯಮದಿಂದಾಗಿ ಹೆಚ್ಚಿನವರೆಲ್ಲ ರಾಜೀನಾಮೆ ಕೊಟ್ಟು ಮನೆ ಹೋಗಿದ್ದು, ಪ್ರಸ್ತುತ 11 ಎಕ್ಸ್‌ಚೇಂಜ್‌ಗಳಲ್ಲಿ ಒಬ್ಬರೇ ಜೆಟಿಒ ಮತ್ತು 3 ಮಂದಿ ಟೆಕ್ನಿಶಿಯನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೇವೆ ವಿಳಂಬ: ನೆಟ್ವರ್ಕ್ ಸಮಸ್ಯೆಯಿಂದಾಗಿ ಗ್ರಾ.ಪಂ. ಸಹಿತವಾಗಿ ಸರಕಾರಿ ಕಚೇರಿಗಳಿಗೆ ಬರುವ ಜನರು ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಾಗಿದೆ. ಬ್ಯಾಂಕ್ ಗಳು, ಅಂಚೆ ಕಚೇರಿ, ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಪಡಿತರ ಅಂಗಡಿ, ಶಾಲೆ, ಗ್ರಾ.ಪಂ. ಕಚೇರಿಗಳು, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ನಾಡ ಕಚೇರಿ ಹೀಗೆ ಎಲ್ಲ ಕಡೆಗಳಲ್ಲೂ ಬಿಎಸ್‌ಎನ್‌ಎಲ್ ನೆಟ್ವರ್ಕ್‌ನ್ನೇ ಅವಲಂಬಿಸಿದ್ದಾರೆ. ಸರಕಾರಿ ಕಚೇರಿಗಳಲ್ಲಂತೂ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಆನ್‌ಲೈನ್ ಮೂಲಕವೇ ನಡೆಸಬೇಕಾಗಿದ್ದು ಬಹುತೇಕ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸೌಲಭ್ಯವನ್ನೇ ಹೊಂದಿರುವುದರಿಂದ ಕೆಲಸ ನಿರ್ವಹಣೆಗೆ ತೊಂದರೆಯಾಗುತ್ತಿದೆ. ನೆಟ್ವರ್ಕ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆ ಮತ್ತು ಜನರ ಶಾಪದಿಂದ ತಪ್ಪಿಸಿಕೊಳ್ಳಲು ಸಿಬಂದಿ ವೈಯಕ್ತಿಕ ನೆಲೆಯಲ್ಲಿ ಅನ್ಯ ನೆಟ್‌ವರ್ಕ್‌ನ ಡೋಂಗಲ್ ಬಳಸಿ ಕಚೇರಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಸರಕಾರಿ ಕಚೇರಿಗಳಲ್ಲಿ, ಬ್ಯಾಂಕ್ ಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ಸಕಾಲಕ್ಕೆ ದೊರೆಯುತ್ತಿಲ್ಲ