ವಿಜಯಪುರ : ಸಿಂದಗಿ ಕ್ಷೇತ್ರ ನನ್ನ ತಾಯಿಯ ತವರು ಮನೆ, ಬಾಲ್ಯ ಕಳೆದಿದ್ದು, ಓದಿದ್ದೆಲ್ಲ ಅಲ್ಲೇ. ನಮ್ಮ ತಂದೆ ನಿಧನದ ನಂತರ ನಾನು ವಿಜಯಪುರ ನಗರಕ್ಕೆ ಬಂದು ಸಹೋದರರೊಂದಿಗೆ ಸೇರಿಕೊಂಡೆ. ಹೀಗಾಗಿ ಅಲ್ಲಿನ ಜನರೂ ಆಗ್ರಹಿಸುತ್ತಿದ್ದಾರೆ, ಹೈಕಮಾಂಡ ಬಯಸಿದರೆ ಸಿಂದಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಬೀಜ ಹಾಗು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಸಿಂದಗಿ ಕ್ಷೇತ್ರ ಜನ ಆಹ್ವಾನ ನೀಡಿದ್ದಾರೆ. ಹಂಪೈರ್ ಸೀಟಿ ಹೊಡೆಯೋ ವರೆಗೆ ನಾವು ಕಣಕ್ಕೆ ಇಳಿಯುತ್ತೇವೆ. ಅಲ್ಲಿಯ ವರೆಗೆ ಬಿಜೆಪಿ ಯಾವೊಬ್ಬ ಆಟಗಾರ ಕೂಡ ನಾನು ಸ್ಪರ್ಧಿ ಎನ್ನುಂವತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ನಾನು ಬಿಜೆಪಿ ಹೊರತಾಗಿ ಪಕ್ಷಾಂತರ ಮಾಡುವುದಿಲ್ಲ, ಬಬಲೇಶ್ವರ ಕ್ಷೇತ್ರವನ್ನೂ ತೊರೆಯುವುದಿಲ್ಲ. ಆದರೆ ಪಕ್ಷದ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗಬೇಕಾಗುತ್ತದೆ. ಈ ಮಧ್ಯೆ ಜೆಡಿಎಸ್ ಪಕ್ಷದಲ್ಲಿ ದಶಕಗಳ ಕಾಲ ದುಡಿದರೂ ಅಧಿಕಾರ ಬಂದಾಗ ನನ್ನನ್ನು ಕಡೆಗಣಿಸಲಾಯಿತು. ಇದರಿಂದಾಗಿ ಬಿಜೆಪಿ ಸೇರಿದ ನನ್ನನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯುಮಂತ್ರಿ ಯಡಿಯೂರಪ್ಪ ಅವರು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿ ನನಗೆ ಅಧಿಕಾರ ನೀಡಿದ್ದಾರೆ. ಹೀಗಾಗಿ ಇನ್ನು ಪಕ್ಷಾಂತರ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಸಹೋದರ ಮಾಡಿದ ಒಂದು ತಪ್ಪು ನಿರ್ಧಾರದಿಂದ ರಾಜಕೀಯವಾಗಿ ನಾನು ಸಂಕಷ್ಟ ಅನುಭವಿಸುವಂತಾಗಿದೆ. ಆದರೂ ಬಬಲೇಶ್ವರ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸೋತರೂ, ಜನರ ಪ್ರೀತಿ ಮಾತ್ರ ಇನ್ನೂ ನನ್ನ ಮೇಲೆಯೇ ಇದೆ. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಜನರಿಗೇ ಶಾಲು ಹಾಕಿ ಬಿಜೆಪಿ ತೊರೆದು ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ ಪಕ್ಷಾಂತರ ಆಗಿಲ್ಲ. ಸ್ವಾರ್ಥ ಸಾಧನೆಗಾಗಿ ರಾಜಕೀಯ ಲಾಭಕ್ಕಾಗಿ ಕೆಲವರು ಎಲ್ಲ ಪಕ್ಷಗಳ ನಾಯಕರ ಬಳಿ ಓಡಾಡುತ್ತಿದ್ದಾರೆ ಎಂದರು.