Advertisement

ಕಾರ್ಯಕರ್ತರು ಪಕ್ಷಕ್ಕೆ ಬದ್ಧರಾದರೆ ಅಧಿಕಾರ ಸಿಗುತ್ತದೆ

04:28 PM Feb 13, 2017 | |

ತುಮಕೂರು: ಯುವ ಕಾರ್ಯಕರ್ತರು ವ್ಯಕ್ತಿಗೆ ಬದ್ಧರಾಗದೇ ಪಕ್ಷಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಆಗ ಅಧಿಕಾರವೇ ತಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಯುವಮೋರ್ಚಾ ಉಸ್ತುವಾರಿ ಹೊತ್ತಿರುವ ಅರವಿಂದ ಲಿಂಬಾವಳಿ ಸಲಹೆ ನೀಡಿದರು. ನಗರದ ಸಿದ್ಧಗಂಗಾ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ  ಜಿಲ್ಲಾ ಬಿಜೆಪಿ ಯುವಮೋರ್ಚಾ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಇಂದಿನ ಯುವಮೋರ್ಚಾ ನಾಳಿನ ಬಿಜೆಪಿ ಆಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಈ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸಬೇಕು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ವೈ ಅವರ 150 ಪ್ಲಸ್‌ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ 2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ 50 ಪ್ಲಸ್‌ ಗುರಿ ಈಡೇರಿಸಲು ಶ್ರಮಿಸುವುದು ನಮ್ಮೆಲ್ಲರ ಧ್ಯೇಯವಾಗಬೇಕು ಎಂದರು.

ಯುವಕಾರ್ಯಕರ್ತರು ಪ್ರಮುಖವಾಗಿ ರಚನಾತ್ಮಕ, ಆಂದೋಲನಾತ್ಮಕ ಮತ್ತು ಸಂಘಟನಾತ್ಮಕ ಕಾರ್ಯಕ್ರಮಗಳಿಗೆ ಸಮನ್ವಯ ಭಾವದಿಂದ ಕೆಲಸ ಮಾಡಬೇಕು. ಹೆಚ್ಚು ಹೊಸಬರನ್ನು ಪಕ್ಷಕ್ಕೆ ಕರೆತರಬೇಕು. ಜೊತೆಗೆ ಬಂದವರು ಮತ್ತೆ ಹೊರ ಹೋಗದಂತೆ ಎಚ್ಚರಿಕೆ ವಹಿಸಬೇಕು. ಮುಂದಿನ ಏಪ್ರಿಲ್‌ 15ರೊಳಗೆ ತಮ್ಮ ಬೂತ್‌ನಲ್ಲಿರುವ ಸಕ್ರಿಯ ಯುವಕರನ್ನು ಗುರುತಿಸಿ ಕೇಂದ್ರ ಸಮಿತಿಗೆ ಶಿಫಾರಸು ಮಾಡಬೇಕು. ಇವರನ್ನೆಲ್ಲಾ ಒಳಗೊಂಡ ಬೃಹತ್‌ ಸಮಾವೇಶ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಮನೆ ಮನೆಗೆ ಬಿಜೆಪಿ: ತುಮಕೂರು ದೊಡ್ಡ ಜಿಲ್ಲೆ. ಪಕ್ಷದಲ್ಲಿ ಗೊಂದಲವಿರುವುದು ಸಹಜ. ಅದಕ್ಕೆ ಯುವಮೋರ್ಚಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹಿರಿಯರು ಕುಳಿತು ಒಂದು ತೀರ್ಮಾನ ಕೈಗೊಳ್ಳಲಿದ್ದೇವೆ. ಈ ವರ್ಷ ಪಂಡಿತ್‌ ದಿನದಯಾಳ್‌ ಉಪಾಧ್ಯಾಯ ಅವರ 100ನೇ ವರ್ಷಾಚರಣೆ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 125 ಜಯಂತಿ ಅಂಗವಾಗಿ “ಮನೆ ಮನೆಗೆ ಬಿಜೆಪಿ’ ಎಂಬ ಕಾರ್ಯಕ್ರಮವನ್ನು ಪಕ್ಷ ಹಾಕಿಕೊಂಡಿದೆ.

ಇದರಲ್ಲಿ ಎಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಸಕ್ರಿಯರಾಗಿ ಭಾಗವಹಿಸಬೇಕೆಂದು ಸೂಚನೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯುವಮೋರ್ಚಾ ರಾಜಾಧ್ಯಕ್ಷ ಹಾಗೂ ಸಂಸದ ಪ್ರತಾಪ ಸಿಂಹ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಇದುವರೆಗೆ ನಡೆದಿರುವ ಎಲ್ಲಾ ವಿಚಾರಗಳಲ್ಲಿ ಯುವ ಮೋರ್ಚಾ ತುಂಬ ಉತ್ಸುಕತೆಯಿಂದ ಪಾಲ್ಗೊಂಡಿದೆ.

Advertisement

ಕಾರ್ಯಕರ್ತರು ಅರ್ಚಕ ಪ್ರವೃತ್ತಿ ಬಿಟ್ಟು, ಪಕ್ಷ ನಿಷ್ಠೆಯಿಂದ ಕೆಲಸ ಮಾಡುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜೋತಿಗಣೇಶ್‌, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ, ತುಮಕೂರು ಉಸ್ತುವಾರಿ ಪ್ರೇಮಾ ಪ್ರಸಾದ್‌ ಶೆಟ್ಟಿ, ಬಸವರಾಜು, ಜಿಲ್ಲಾಧ್ಯಕ್ಷ ಹನುಮಂತರಾಜು, ಮುಖಂಡರಾದ ಡಾ.ಎಂ.ಆರ್‌.ಹುಲಿನಾಯ್ಕರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next