Advertisement

ನೌಕಾಪಡೆ ಒಪ್ಪಿಕೊಳ್ಳದಿದ್ದರೆ ಸು. ಕೋ.ಗೆ: ಪ್ರಮೋದ್‌

02:47 AM May 05, 2019 | Sriram |

ಉಡುಪಿ: ಸುವರ್ಣ ತ್ರಿಭುಜ ಬೋಟ್‌ಗೆ ಹಾನಿಯಾಗಿ ಅದು ಮುಳುಗಲು ನೌಕಾಪಡೆಯ ಐಎನ್‌ಎಸ್‌ ಕೊಚ್ಚಿ ಹಡಗು ಢಿಕ್ಕಿ ಹೊಡೆದಿರುವುದೇ ಕಾರಣ ಎಂಬ ಬಲವಾದ ಸಂಶಯಕ್ಕೆ ಪೂರಕ ದಾಖಲೆಗಳು ಇವೆ. ಹಾಗಾಗಿ ನೌಕಾಪಡೆ ತಪ್ಪೊಪ್ಪಿಕೊಂಡು ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

Advertisement

ಡಿ. 15ರಿಂದ ಬೋಟ್ ನಾಪತ್ತೆಯಾಗಿತ್ತು. ಡಿ. 22ರಂದು ಪ್ರಕರಣ ದಾಖಲಾಗಿತ್ತು. ಜ. 15ಕ್ಕೆ ಉಡುಪಿ ಪೊಲೀಸರು ನೌಕಾಪಡೆಯ ಕಾರವಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಅದೇ ದಿನ ನೌಕಾದಳ ದವರು ಕೂಡ ಐಎನ್‌ಎಸ್‌ ಕೊಚ್ಚಿ ಹಡಗಿಗೆ ಹಾನಿಯಾಗಿರುವ ಬಗ್ಗೆ ತಿಳಿಸಿದ್ದರು. ಅಲ್ಲದೆ ಮಹಾರಾಷ್ಟ್ರ ಭಾಗದಲ್ಲಿ ಯಾವುದಾದರೂ ಮೀನುಗಾರಿಕೆ ಬೋಟ್ ಅವಘಡ ಸಂಭವಿಸಿದೆಯೇ ಎಂದು ಮಹಾರಾಷ್ಟ್ರದ ಮೀನುಗಾರರನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಉಡುಪಿ ಪೊಲೀಸರಿಗೆ ನೌಕಾಪಡೆ ಅಧಿಕಾರಿಗಳು ನೀಡಿರುವ ಮಾಹಿತಿ ದಾಖಲೆಗಳಲ್ಲಿದೆ. ನೌಕಾಪಡೆಯ ಹಡಗೇ ಢಿಕ್ಕಿ ಹೊಡೆದಿದೆ ಎಂಬುದಕ್ಕೆ ಪುರಾವೆ ಇದೆಯೇ ಎಂದು ಶಾಸಕ ರಘುಪತಿ ಭಟ್ ಅವರು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ಪ್ರಮೋದ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಾಕೆ ಸಂಶಯ ಬರಲಿಲ್ಲ?
ಐಎನ್‌ಎಸ್‌ ಕೊಚ್ಚಿಗೆ ಹಾನಿಯಾಗಿರುವ ಮತ್ತು ಮೀನುಗಾರಿಕೆ ಬೋಟ್ ಅವಘಡವಾಗಿರುವ ಮಾಹಿತಿ ನೌಕಾಪಡೆಯವರಿಗೆ ದೊರೆತಿತ್ತು. ಇದೇವೇಳೆ ಮಲ್ಪೆಯ ಬೋಟ್ ನಾಪತ್ತೆಯಾಗಿರುವ ಸುದ್ದಿ ದೇಶಾದ್ಯಂತ ಚರ್ಚಿಸಲ್ಪಟ್ಟಿದೆ. ಆದರೂ ನೌಕಾಪಡೆಯವರಿಗೆ ಅಪಘಾತಕ್ಕೊಳಗಾದ ಬೋಟ್ ಮಲ್ಪೆಯದ್ದೇ ಆಗಿರಬಹುದು ಎಂಬಸಂಶಯ ಕೂಡ ಯಾಕೆ ಬರಲಿಲ್ಲ? ಈ ಬಗ್ಗೆ ತನಿಖೆ ಕೂಡ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಮುಚ್ಚಿಡಲು ನಾಟಕ
‘ನೌಕಾಪಡೆಯವರು ಹುಡುಕಾಟ ನಡೆಸುತ್ತಿ ದ್ದಾರೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ರಘುಪತಿ ಭಟ್ ಪದೇ ಪದೆ ಹೇಳುತ್ತಿದ್ದರು. ಆದರೆ ನೌಕಾಪಡೆಯವರೇ ಢಿಕ್ಕಿ ಹೊಡೆಸಿ ಅನಂತರ ಇವರೆಲ್ಲರೂ ಹುಡುಕಾಟದ ನಾಟಕ ಮಾಡಿದ್ದಾರೆ. ಚುನಾವಣೆ ಸಂದರ್ಭ ಮೀನುಗಾರರು ತಿರುಗಿ ಬೀಳಬಹುದು ಎಂಬ ಉದ್ದೇಶದಿಂದ ಇದನ್ನು ಮುಚ್ಚಿಟ್ಟು ಮೀನುಗಾರರ ಜೀವದ ಜತೆ ಚೆಲ್ಲಾಟವಾಡಿದ್ದಾರೆ ಎಂದರು.

ನೌಕಾಪಡೆ ಒಪ್ಪಿಕೊಳ್ಳಲಿ
ನೌಕೆ ಉದ್ದೇಶಪೂರ್ವಕ ಢಿಕ್ಕಿ ಹೊಡೆದಿರಲಿಕ್ಕಿಲ್ಲ. ಆದರೆ ಅಪಘಾತವಾಗಿರುವುದನ್ನು ವರದಿ ಮಾಡಬೇಕಿತ್ತು. ನೌಕಾಪಡೆಯ ವರು ತಮ್ಮ ತಪ್ಪು ಒಪ್ಪಿಕೊಂಡರೆ ಅವರುಜವಾಬ್ದಾರಿಯಿಂದ ಇದ್ದಾರೆ ಎಂದು ತಿಳಿದುಕೊಳ್ಳಬಹುದು ಎಂದರು.

Advertisement

4 ತಿಂಗಳಲ್ಲಾಗದ್ದು 4 ದಿನದಲ್ಲಿ ಹೇಗಾಯ್ತು ?
ನೌಕಾಪಡೆಯವರು 4 ತಿಂಗಳುಗಳಿಂದ ಶೋಧ ನಡೆಸುತ್ತಿರುವುದಾಗಿ ಹೇಳಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಆದರೆ ಶಾಸಕ ರಘುಪತಿ ಭಟ್ ಅವರು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ 4 ದಿನಗಳಲ್ಲೇ ಬೋಟ್ ಅವಶೇಷ ಪತ್ತೆಯಾಗಿದೆ. ಮೊದಲೇ ನೌಕಾಪಡೆಯವರಿಗೆ ಅವಶೇಷ ಪತ್ತೆಯಾಗಿದ್ದು, ಅನಂತರ ಶಾಸಕರ ಜತೆಗೆ ಅಲ್ಲಿಗೇ ಹೋಗಿದ್ದಾರೆಯೇ? ಇದು ರಾಜಕೀಯವಲ್ಲವೆ? 4 ತಿಂಗಳುಗಳಲ್ಲಿ ಆಗದ್ದು 4 ದಿನಗಳಲ್ಲಿ ಹೇಗೆ ಸಾಧ್ಯವಾಯಿತು ಎಂದು ಪ್ರಮೋದ್‌ ಪ್ರಶ್ನಿಸಿದರು.

ಇನ್ನೂ ಸಾಕ್ಷಿ ಕೇಳುವವರು ದೇಶದ್ರೋಹಿಗಳು
ಸುವರ್ಣ ತ್ರಿಭುಜ ಅಪಘಾತಕ್ಕೀಡಾಗಿರುವುದು ಹೌದು, ನೌಕಾಪಡೆಯ ಹಡಗಿಗೆ ಹಾನಿಯಾಗಿ ರುವುದು ಹೌದು, ಬೋಟ್ ಮುಳುಗಿದ್ದೂ ಹೌದು. ಸ್ಥಳ ಕೂಡ ಒಂದೇ ಆಗಿದೆ. ಇವೆಲ್ಲವೂ ಸಾಂದರ್ಭಿಕ ಸಾಕ್ಷಿಗಳು. ಇದಕ್ಕಿಂತ ಹೆಚ್ಚು ಸಾಕ್ಷಿ ಕೇಳುವವರು ದೇಶದ್ರೋಹಿಗಳು ಎಂದು ಪ್ರಮೋದ್‌ ಹೇಳಿದರು.

ನಿವೃತ್ತ ನ್ಯಾಯಾಧೀಶರಿಂದ ತನಿಖೆ
ಸುಪ್ರೀಂ ಕೋರ್ಟ್‌ನಲ್ಲಿ ನನ್ನದೇ ವಕೀಲರ ಮೂಲಕ ಹೋರಾಟ ಮಾಡುತ್ತೇನೆ. ನನ್ನಲ್ಲಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ. ಬೋಟ್ ಮೇಲೆತ್ತಲು ಆದೇಶಿಸುವಂತೆಯೂ ಮನವಿ ಮಾಡುತ್ತೇನೆ. ಮೂರು ರಕ್ಷಣಾ ದಳಗಳ ಮಹಾದಂಡನಾಯಕರಾದ ರಾಷ್ಟ್ರಪತಿಯವರಿಗೆ, ರಕ್ಷಣಾ ಸಚಿವೆ, ಮಹಾರಾಷ್ಟ್ರ, ಕರ್ನಾಟಕದ ಮುಖ್ಯಮಂತ್ರಿಯವರಿಗೂ ಪತ್ರ ಬರೆಯುತ್ತೇನೆ ಎಂದು ಪ್ರಮೋದ್‌ ಹೇಳಿದರು.

ಫೋಟೋ ಕೊಟ್ಟದ್ದು ನೌಕಾಪಡೆ
ಮಾಧ್ಯಮಗಳಿಗೆ ನಾನು ನೀಡಿರುವ ಐಎನ್‌ಎಸ್‌ ಹಡಗಿಗೆ ಹಾನಿ ಫೋಟೋವನ್ನು ನಾನು ಸೃಷ್ಟಿಸಿದ್ದಲ್ಲ. ಅದನ್ನು ನೌಕಾಪಡೆಯವರೇ ನೀಡಿದ್ದು ಎಂದು ಪ್ರಮೋದ್‌ ಸ್ಪಷ್ಟಪಡಿಸಿದರು.

ರಾಜ್ಯಸರಕಾರದಿಂದ 10 ಲ.ರೂ.
ಮೀನುಗಾರಿಕೆ ಬೋಟ್ ಅವಘಡ ಸಂದರ್ಭ ಸಾಮಾನ್ಯವಾಗಿ 6 ಲ.ರೂ. ನೀಡಲಾಗುತ್ತದೆ. ಆದರೆ ಇದು ವಿಶೇಷ ಪ್ರಕರಣವೆಂದು ಪರಿಗಣಿಸಿ 10 ಲ.ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಅವರು ಈ ಬಗ್ಗೆ ಮೀನುಗಾರಿಕೆ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಮೋದ್‌ ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ಕಾಂಗ್ರೆಸ್‌ ಮುಖಂಡರಾದ ಜನಾರ್ದನ ಭಂಡಾರ್‌ಕರ್‌, ಗಣೇಶ್‌ ನೇರ್ಗಿ, ಭಾಸ್ಕರ್‌ ರಾವ್‌ ಕಿದಿಯೂರು, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಮೋದ್‌ ಬೇಡಿಕೆಗಳು
 -ಐಎನ್‌ಎಸ್‌ ಕೊಚ್ಚಿ ಢಿಕ್ಕಿ ಹೊಡೆದಿರು ವುದಕ್ಕೆ ದಾಖಲೆಗಳಿರುವುದರಿಂದ ನೌಕಾಪಡೆಯವರು ಜವಾಬ್ದಾರಿ ಹೊತ್ತುಕೊಂಡು ಇನ್ಶೂರೆನ್ಸ್‌ ಹೊರತು ಪಡಿಸಿ ಎಲ್ಲ ಪರಿಹಾರ ಮೊತ್ತ ನೀಡಬೇಕು.
-ನಾಪತ್ತೆಯಾದ 7 ಮೀನುಗಾರರ ಮನೆಯವರಿಗೂ ತಲಾ 25 ಲ.ರೂ.ಗಳನ್ನು ನೌಕಾಪಡೆಯೇ ನೀಡಬೇಕು.
-ಐಎನ್‌ಎಸ್‌ ಕೊಚ್ಚಿಯನ್ನು ಚಲಾಯಿಸುತ್ತಿದ್ದ ಸಿಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next