Advertisement

ಮನಸ್ಸು ಶುದ್ಧವಿದ್ದರೆ ನೆಮ್ಮದಿ ಪ್ರಾಪ್ತಿ

10:44 AM May 23, 2019 | Suhan S |

ರಾಣಿಬೆನ್ನೂರ: ಮನುಜ ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ ಶುದ್ಧವಾಗಿಡುವುದಿಲ್ಲವೋ ಅಲ್ಲಿಯವರೆಗೂ ಶಾಂತಿ, ನೆಮ್ಮದಿ, ಸಂತೃಪ್ತಿ ಹಾಗೂ ಮುಕ್ತಿ ಸಿಗುವುದಿಲ್ಲ ಎಂದು ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ| ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

Advertisement

ಬುಧವಾರ ಸುಕ್ಷೇತ್ರ ಖಂಡೇರಾಯನಹಳ್ಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಸದ್ಗುರು ಸಿದ್ಧಾರೂಢ ಸ್ವಾಮಿಯವರ ಜಯಂತಿ ಅಂಗವಾಗಿ ನಡೆಸುವ 23ನೇ ವೇದಾಂತ ಪರಿಷತ್‌, ಡಾ| ಶಿವಾನಂದ ಭಾರತಿ ಸ್ವಾಮೀಜಿಗಳವರ 79ನೇ ಜಯಂತ್ಯುತ್ಸವ ಹಾಗೂ ಶಿಲಾ ಮಂಟಪದಲ್ಲಿ ಶಿವಲಿಂಗ ಮೂರ್ತಿ ಸ್ಥಾಪನೆ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮನುಷ್ಯನ ಮನಸ್ಸು, ಬುದ್ದಿ, ಚಿತ್ತಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸದ್ಗುರುವಿನ ಉಪದೇಶ ಆಲಿಸಿದಾಗಲೇ ಮನುಜ ಸದ್ಗತಿ ಪಡೆಯಲು ಸಾಧ್ಯ. ಸತ್ಸಂಗ ಮನುಷ್ಯನನ್ನು ಒತ್ತಡ ಜೀವನದಿಂದ ಮುಕ್ತಿಯ ಕಡೆಗೆ ಕೊಂಡೊಯ್ಯುವ ಸನ್ಮಾರ್ಗವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಶಿವಾವತಾರಿ ಭೂಲೋಕವಾಸಿ ಸಿದ್ಧಾರೂಢರು ಸರ್ವ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಲೆಂಬ ಸಂಕಲ್ಪದಿಂದ ಜಾತಿ, ಮತ, ಪಂಥಗಳ ಭೇದವಿಲ್ಲದೆ ಶಾಂತಿ ಮಂತ್ರವನ್ನು ಬೋಧಿಸಿದ ಮಹಾತ್ಮರು. ಅಂತವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ. ಅಲ್ಲದೆ ಸತ್ಸಂಗವು ಜನ್ಮಜನ್ಮಾಂತರ ಪಾಪಕರ್ಮವೆಲ್ಲ ನಾಶವಾಗಿ ಮುಕ್ತಿ ಪಡೆಯಲು ಸಾಧ್ಯ ಎಂದು ನುಡಿದರು.

ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲಿ ಮನೆ ಮಾಡಿಕೊಂಡಿರುವ ದುಷ್ಟ ಗುಣಗಳನ್ನು ಸಂಹರಿಸಿ ಸುಗುಣವಂತರನ್ನಾಗಿಸುವ ಮಾರ್ಗವೆ ಸತ್ಸಂಗ. ಭಕ್ತಿ, ಜ್ಞಾನ, ವೈರಾಗ್ಯ ಮೋಕ್ಷ ಸಂಪಾದನೆಯ ಮಾರ್ಗಗಳಾದರೆ, ದೀನ ದಲಿತರ, ಅನಾಥರ ಕಲ್ಯಾಣಕ್ಕಾಗಿ ಸಲ್ಲಿಸುವ ನಿಸ್ವಾರ್ಥ ಸೇವೆ ನಿಜವಾದ ಧರ್ಮ ಕಾರ್ಯವಾಗಿದೆ ಎಂದು ಹೇಳಿದರು.

Advertisement

ಹುಬ್ಬಳ್ಳಿಯ ಸಚ್ಚಿದಾನಂದ ಶ್ರೀಗಳು ಮಾತನಾಡಿ, ಹಲವು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ‘ಪರೋಪಕಾರಂ ಇದಂ ಶರೀರಂ’ ಎಂಬಂತೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಪುಣ್ಯದ ಕಾರ್ಯಗಳನ್ನು ಮಾಡುವುದರೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

ದಾವಣಗೆರೆ ಜಡಿಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು ಮಾತನಾಡಿ, ಭಕ್ತನು ದೇವರಿಗೆ ಸಲ್ಲಿಸುವ ಭಕ್ತಿಯಲ್ಲಿ ಯಾವುದೇ ರೀತಿಯ ಸ್ವಾರ್ಥದ ಫಲಾಪೇಕ್ಷೆ ಇರಬಾರದು. ಮೂಢನಂಬಿಕೆ ಬರಬಾರದು. ಭಕ್ತಿ ನಿಧಾನವಾದರೂ ಪ್ರಧಾನವಾಗಿರಬೇಕು. ಅಂತಹ ಭಕ್ತನಿಗೆ ಮಾತ್ರ ದೇವರು ಒಲಿಯುವನು ಎಂದರು.

ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಸ್ವಾಮೀಜಿ, ಚಳಗೇರಿಯ ಕಟಗಿಹಳ್ಳಿ ಮಠದ ಡಾ| ಮಹಾಂತೇಶ್ವರ ಶ್ರೀಗಳು, ಹದಡಿ ಚಂದ್ರಗಿರಿ ಮಠದ ಮುರಳಿಧರ ಮಠದ ಶ್ರೀಗಳು, ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಯ ಒಂದು ‘ಚರಣದ ಮತಿಗೆ ಮಂಗಲವಿವುದಾವದುತ್ತಮರ ಸಂಗ’ ವಿಷಯ ಕುರಿತು ಉಪದೇಶಾಮೃತ ನೀಡಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷ ಚೋಳಪ್ಪ ಕಚ್ಚರಬಿ, ಎಪಿಎಂಸಿ ಸದಸ್ಯ ಸುರೇಶ ಬೀರಾಳ, ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪಗೌಡ್ರ, ಜನಾರ್ಧನ ಕಡೂರ, ಡಾ| ಎಂ.ಸುನಿತಾ, ಅರುಣಸ್ವಾಮಿ ಹಿರೇಮಠ, ನ್ಯಾಯವಾದಿ ಎಂ.ಬಿ.ಚಿನ್ನಪ್ಪನವರ, ಜಗದೇವಪ್ಪ ಮಾಕನೂರ, ಜಟ್ಟೆಪ್ಪ ಕರೆಗೌಡ್ರ, ಗುಡ್ಡಪ್ಪ ಗೌಡ್ರ, ಸಿ.ಎನ್‌.ನಾಗರಾಜ, ಗೋಪಾಲ ಕೊಡ್ಲೇರ, ದಾನೇಶ ಲಮಾಣಿ, ಡಾಕೇಶ ಲಮಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next