Advertisement

ಮನಸ್ಸು ಒಂದಾಗದಿದ್ದರೆ ಸಂಸಾರದಲ್ಲಿ ವಿರಸ

06:15 PM Dec 06, 2022 | Team Udayavani |

ಚಿತ್ರದುರ್ಗ: ಸತಿ-ಪತಿಗಳ ಮನಸ್ಸು ಒಂದಾಗದಿದ್ದರೆ ಸಂಸಾರದಲ್ಲಿ ವಿರಸ ಮೂಡುತ್ತದೆ. ದಂಪತಿಗಳ ಮಧ್ಯೆ ಅನುಮಾನ ಬರಬಾರದು. ಆದ್ದರಿಂದ ಪರಸ್ಪರ ನಂಬಿಕೆಯಿಂದ ಜೀವನ ಸಾಗಿಸಬೇಕು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

Advertisement

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ವತಿಯಿಂದ ನಡೆದ ಮೂವತ್ತೆರಡನೇ ವರ್ಷದ ಹನ್ನೆರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಅನುಮಾನ ಒಂದು ದೊಡ್ಡ ರೋಗ. ಇದರಿಂದ ಎಷ್ಟೋ ಸಂಸಾರಗಳು ಹಾಳಾಗಿವೆ. ನಂಬಿಕೆ ಇದ್ದರೆ ಜೀವನ ಸುಸೂತ್ರವಾಗಿ ನಡೆಯುತ್ತದೆ. ಅನುಮಾನ ಮತ್ತು ಅಹಂಕಾರ ಬದುಕನ್ನು ತುಂಡರಿಸುತ್ತದೆ. ಅಹಂಕಾರದಿಂದ ಎಷ್ಟೋ ಜನರು ಅನಾಥಾಶ್ರಮ ಸೇರಿದ್ದಾರೆ ಎಂದರು. ಜನರಲ್ಲಿ ಸೇವಾಭಾವನೆ ಕಡಿಮೆ ಆಗುತ್ತಿದೆ.ಸತಿ-ಪತಿಗಳು ಸ್ನೇಹಿತರಂತೆ ಇರಬೇಕು. ಸುಳ್ಳು ಹೇಳುವುದನ್ನು ಕಡಿಮೆ ಮಾಡಬೇಕು.

ನಂಬಿಕೆ ಎಂಬ ಸೂಜಿಯಿಂದ ಜೀವನವನ್ನು ಜೋಡಿಸಬೇಕು. ನಮಗೆ ಅರಿವು ಜ್ಞಾನ ಪ್ರಜ್ಞೆ ಮುಖ್ಯ. ಬಸವಾದಿ ಶರಣರು ವೈಚಾರಿಕ ತತ್ವದ ಹಿನ್ನೆಲೆಯಲ್ಲಿ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಶ್ರೀಮಠದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ.ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದಾಗಿ ಮನವಿ ಮಾಡಿದರು.

ಶಿಕಾರಿಪುರ ವಿರಕ್ತ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಎಲ್ಲೋ ಹುಟ್ಟಿದ ಗಂಡು-ಹೆಣ್ಣು ಮದುವೆ ಮೂಲಕ ಒಂದಾಗುತ್ತಾರೆ. ಮನಸ್ಸುಗಳು ಒಂದಾಗಬೇಕು. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಬೇಕು. ಸತಿ-ಪತಿಗಳೊಂದಾದ ಭಕ್ತಿ ಶಿವಂಗೆ ಹಿತವಾಗಿರುತ್ತದೆ. ಮನುಷ್ಯ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣಬೇಕು. ಕಷ್ಟಗಳನ್ನು ಸಹಿಸಿಕೊಂಡರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ ಎಂದರು.

Advertisement

ಕಾರ್ಯಕ್ರಮದಲ್ಲಿ ನಾಗಾರ್ಜುನ (ಈಡಿಗ)-ಎನ್‌. ರಂಜಿತಬಾಯಿ (ಲಂಬಾಣಿ) ಅಂತರ್ಜಾತಿ ಸೇರಿದಂತೆ, ಉಪ್ಪಾರ-1, ಕುರುಬ-1, ಆದಿದ್ರಾವಿಡ-1 ನಾಲ್ಕು ಜೋಡಿಗಳ ವಿವಾಹ ನೆರವೇರಿತು. ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಗೋವಿಂದಪ್ಪ ಶ್ರೀಗಳು, ಶ್ರೀ ಬಸವರಾಜ ಸ್ವಾಮಿಗಳು, ಶರಣೆ ಮುಕ್ತಾಯಕ್ಕ, ದಾಸೋಹಿಗಳಾದ ಡಾ| ಸನತ್‌ ಕುಮಾರ್‌, ಪೈಲ್ವಾನ್‌ ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next