Advertisement

ಕೆರೆ ಕಾಮಗಾರಿ ಮುಗಿಸದಿದ್ದರೆ ಪ್ರಕರಣ ದಾಖಲು

03:13 PM Apr 28, 2022 | Team Udayavani |

ರೋಣ: ಮುಂದಿನ ಎರಡು ತಿಂಗಳ ಅವಧಿಯಲ್ಲಿ ಜಿಗಳೂರ ಕೆರೆಯ ಕಾಮಗಾರಿ ಮುಗಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿ ಜೈಲ್‌ಗೆ ಕಳುಹಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ ಎಚ್ಚರಿಕೆ ನೀಡಿದರು.

Advertisement

ತಾಲೂಕಿನ ಜಿಗಳೂರ ಕೆರೆಯ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಮುಗಿಸಬೇಕು. ಈ ಭಾಗದ ಜನರಿಗೆ ಕುಡಿಯುವ ನೀರನ್ನು ಕೊಡುವ ಬದ್ಧತೆ ನಮಗಿದೆ. ಆದ್ದರಿಂದ ಅಧಿಕಾರಿಗಳು ಕಾರ್ಯಪ್ರವರ್ತರಾಗಿ ಕೆಲಸ ಮಾಡಬೇಕು. ಮಳೆಗಾಲ ಪ್ರಾರಂಭವಾದರೆ ಇಲ್ಲಿ ಕಪ್ಪು ಮಣ್ಣು ಇರುವುದರಿಂದ ಕೆಲಸ ಮಾಡಲು ಸಾಧ್ಯವಾಗಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರನ್ನು, ಯಂತ್ರಗಳನ್ನು ಬಳಕೆ ಮಾಡಿಕೊಂಡು ಕಾಮಗಾರಿ ತ್ವರಿತವಾಗಿ ಮುಗಿಸಬೇಕು. ಇಲ್ಲವಾದರೆ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದರು.

ಮೇ 27ರಂದು ಮತ್ತೆ ಗದಗ ಜಿಲ್ಲೆಯ ಪ್ರವಾಸ ಕೈಗೊಂಡು ಕೆರೆಯ ಕಾಮಗಾರಿ ವೀಕ್ಷಣೆಗೆ ಬರುತ್ತೇನೆ. ಅಂದು ಬೈಕ್‌ ಮೇಲೆ ಸಂಪೂರ್ಣ ಕೆರೆ ಸುತ್ತಿ ಪರಿಶೀಲನೆ ಮಾಡುತ್ತೇನೆ. ಸುತ್ತ ಬೆಳೆದಿರುವ ಜಾಲಿಕಂಟಿ ಸ್ವತ್ಛಗೊಳಿಸಬೇಕು. ಜೊತೆಗೆ ಒಳಭಾಗವನ್ನು ಸಮಾನಾಂತರ ಮಾಡಬೇಕು. ಅಲ್ಲದೆ ಸಂಪೂರ್ಣ ಕಾಮಗಾರಿ ಮುಗಿಸಲು ಬೇಕಾದಷ್ಟು ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಂಡು ಕೆಲಸ ಮುಗಿಸಬೇಕು ಎಂದರು.

ರೋಣ ಮತಕ್ಷೇತ್ರದ ರೋಣ, ನರೇಗಲ್‌, ಗಜೇಂದ್ರಗಡ ಸೇರಿದಂತೆ ಮೂರು ಪಟ್ಟಣಗಳಿಗೆ ಈ ಅವಧಿಯಲ್ಲಿ ಮುಗಿಯುವ ಮುನ್ನವೇ ನೀರನ್ನು ಪೂರೈಸುವ ಕೆಲಸ ನಮ್ಮ ಸರ್ಕಾರದಿಂದ ನಡೆಯಲಿದೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಿತ್ಯವೂ ಹತ್ತಾರು ತಂಡಗಳನ್ನು ಕಟ್ಟಿಕೊಂಡು ಆದಷ್ಟು ಬೇಗನೆ ಕೆಲಸ ಮುಗಿಸಬೇಕು. ಒಂದೊಮ್ಮೆ ಮುಗಿಸದಿದ್ದರೆ ಗುತ್ತಿಗೆದಾರರ ಕಂಪನಿಯನ್ನು ಕಪ್ಪು ಪಟ್ಟಿಗೆ ಹಾಕಿಸುವುದರ ಜೊತೆಗೆ ಅಧಿಕಾರಗಳ ಮೇಲೆ ವಿಶೇಷ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸಲಾಗುವುದು ಎಂದರು.

ಇದಕ್ಕೂ ಮೊದಲು ಅಧಿಕಾರಿಗಳ ತಂಡದೊಂದಿಗೆ ಕೆರೆಯನ್ನು ಸುತ್ತಿ ಮಾಹಿತಿ ಪಡೆದು ಕಾಮಗಾರಿ ಪರಿಶೀಲನೆ ಮಾಡಿದರು.

Advertisement

ರೋಣ ಶಾಸಕ ಕಳಕಪ್ಪ ಬಂಡಿ, ಯೋಜನಾ ವ್ಯವಸ್ಥಾಪಕ ಕೆ.ಪಿ. ಮೋಹನರಾಜ್‌, ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು, ಚೀಫ್‌ ಇಂಜಿನಿಯರ್‌ ಶ್ರೀ ಕೇಶವ, ಕಾರ್ಯಪಾಲಕ ಜೆ.ಎಚ್‌. ಕೆಂಗಾಳಿ, ಸಹಾಯಕ ಕಾರ್ಯಪಾಲಕ ಜಗದೀಶ ಹೊಸಮನಿ, ಸಹಾಯಕ ಅಭಿಯಂತರ ಕರಿಸಿದ್ದಪ್ಪ ಸೇರಿದಂತೆ ಮತ್ತಿತರರು ಇದ್ದರು.

ಇನ್ನು ಮುಂದೆ ಇಲಾಖೆಯಿಂದ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಯನ್ನು ಹೊರರಾಜ್ಯದವರಿಗೆ ನೀಡದಂತೆ ಸುತ್ತೋಲೆ ಹೊರಡಿಸಬೇಕು. ನಮ್ಮ ರಾಜ್ಯದವರಾದರೆ ಹೆದರಿಸಿ, ಬೆದರಿಸಿ, ಇಲ್ಲವೆಂದರೆ ಅವರಿದ್ದ ಕಡೆಗೆ ಪೊಲೀಸರನ್ನು ಕಳುಹಿಸಿ ಕರೆತಂದು ಕೆಲಸ ಮಾಡಿಸಬಹುದು. ಆದರೆ ದಿಕ್ಕೂ ದೆಸೆ ಇಲ್ಲದವರ ಗುತ್ತಿಗೆ ಪಡೆದ ಅವರ ರಾಜ್ಯದಲ್ಲಿಯೇ ಕುಳಿತರೆ ನಾವೇನು ಮಾಡಬೇಕು. ಶೀಘ್ರ ಈ ಆದೇಶ ಹೊರಡಿಸಬೇಕು ಎಂದು ಯೋಜನಾ ವ್ಯವಸ್ಥಾಪಕ ಕೆ.ಪಿ. ಮೋಹನರಾಜ್‌ಗೆ ಸಚಿವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next