Advertisement

ಪತ್ರಕರ್ತರ ಮೇಲೆ ಹಲ್ಲೆ  ನಡೆದರೆ ನಿರ್ದಾಕ್ಷಿಣ್ಯ ಕ್ರಮ:ಜಿಲ್ಲಾಧಿಕಾರಿ

06:45 AM Aug 06, 2017 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಬೆದರಿಕೆ, ಹಲ್ಲೆಯಂತಹ ಪ್ರಕರಣಗಳು ನಡೆದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಕರ್ತರ ಮೇಲಿನ ಹಲ್ಲೆಗಳ ಮೇಲ್ವಿಚಾರಣೆ ಮತ್ತು ಪರಿಶೀಲನೆಗೆ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪತ್ರಕರ್ತರ ವಿರುದ್ಧ ಯಾವುದೇ ದೂರುಗಳಿದ್ದರೂ ಸಮಿತಿಗೆ ಸಲ್ಲಿಸಬಹುದು. ಅದು ಬಿಟ್ಟು ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ನಡೆಯಲಿದೆ. ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿ ಮಾಡಬಾರದು ಎಂದರು. ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಪೊಲೀಸ್‌ ಇಲಾಖೆಗೆ ಸೂಚಿಸಿದರು.

3 ಹಲ್ಲೆ ಪ್ರಕರಣ: ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್‌ ಶಾ ಮಾತನಾಡಿ, 2016ರ ಜನವರಿ 1ರಿಂದ 2017 ಮೇ 31ರ ವರೆಗೆ ಜಿಲ್ಲೆಯಲ್ಲಿ ಪತ್ರಕರ್ತರ ಮೇಲೆ 3 ಹಲ್ಲೆ ಪ್ರಕರಣಗಳು ನಡೆದಿವೆ. ಈ ಪೈಕಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 1 ಹಾಗೂ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳೂ ನ್ಯಾಯಾಲಯದ ವಿಚಾರಣೆಯಲ್ಲಿವೆ. 
1 ಪ್ರಕರಣ ತನಿಖೆಯಲ್ಲಿದೆ ಎಂದು ವಿವರಿಸಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ, ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ವರದಿ ಮಾಡಲು ತೆರಳುವ ಪತ್ರಕರ್ತರೇ ತಾವೇ ಅಪಾಯಕ್ಕೊಳಗಾಗಬೇಕಾದ ಸನ್ನಿವೇಶಗಳು ಎದುರಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಸೂಕ್ತ ರಕ್ಷಣೆ ನೀಡಬೇಕು ಎಂದು ಹೇಳಿದರು.

Advertisement

ಸಮಿತಿ ಸದಸ್ಯ ಮುಹಮ್ಮದ್‌ ಆರಿಫ್‌ ಪಡುಬಿದ್ರಿ, ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಉದಯ ನಾಯಕ್‌, ಎಸ್ಪಿ ಕಚೇರಿಯ ಎಸ್‌ಐ ಎ.ವಿ. ರೊಸಾರಿಯೊ, ಮಂಗಳೂರು ತಹಶೀಲ್ದಾರ್‌ ಸಿ. ಮಹಾದೇವಯ್ಯ, ಸಮಿತಿಯ ಸದಸ್ಯರಾದ ಪತ್ರಕರ್ತ ಭಾಸ್ಕರ ರೈ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಖೇಶ್‌ ಶೆಟ್ಟಿ, ವಾರ್ತಾ ಇಲಾಖೆಯ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next