ಹೊಸದಿಲ್ಲಿ: ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ರದ್ದಾದರೆ ಹೆಚ್ಚು ಕಡಿಮೆ 4,000 ಕೋಟಿ ರೂ.ಗಿಂತಲೂ ಅಧಿಕ ನಷ್ಟವಾಗಲಿದೆ’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಖಜಾಂಚಿ ಅರುಣ್ ಸಿಂಗ್ ಧುಮಾಲ್ ತಿಳಿಸಿದ್ದಾರೆ.
13ನೇ ಆವೃತ್ತಿಗೆ ಮಾ. 29ರಂದು ಚಾಲನೆ ನೀಡ ಬೇಕಿತ್ತು. ಆದರೆ ಕೋವಿಡ್-19 ಕಾರಣ ದೇಶದಲ್ಲಿ ಲಾಕ್‌ಡೌನ್ ನಿರ್ಬಂಧ ವಿಧಿಸಲಾಯಿತು. ಈ ಕಾರಣದಿಂದ ಬಿಸಿಸಿಐ ಐಪಿಎಲ್ ಲೀಗ್ ಅನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿದೆ.
ಒಂದೊಮ್ಮೆ ಈ ವರ್ಷ ಐಪಿಎಲ್ ನಡೆಯದಿದ್ದರೆ 530 ದಶಲಕ್ಷ ಡಾಲರ್ (,4000 ಕೋಟಿ ರೂ.) ನಷ್ಟವಾಗಲಿದೆ. ಈ ಬಾರಿ ಐಪಿಎಲ್ ಆಯೋಜಿಸುವುದರ ಕುರಿತು ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಕೋವಿಡ್-19 ಬಿಕ್ಕಟ್ಟಿನಿಂದಾಗಿ ಎಷ್ಟು ಪಂದ್ಯಗಳು ರದ್ದಾಗಲಿವೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕ ಅನಂತರವಷ್ಟೇ ನಮಗಾಗುವ ನಷ್ಟವನ್ನು ನಿಖರವಾಗಿ ಹೇಳಲು ಸಾಧ್ಯ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
ಕಳೆದ ವರ್ಷ ಐಪಿಎಲ್ ಬ್ರ್ಯಾಂಡ್ ಮೌಲ್ಯ 51 ಸಾವಿರ ಕೋಟಿ ರೂ. ಇತ್ತು ಎಂದು ಡಫ್ ಆ್ಯಂಡ್ ಪೆಲ್ಪ್ ಹಣಕಾಸು ಸಲಹಾ ಸಂಸ್ಥೆ ಅಂದಾಜಿಸಿತ್ತು. ಸ್ಟಾರ್ ಸ್ಪೋರ್ಟ್ಸ್ 1,700 ಕೋಟಿ ರೂ.ಗೂ ಅಧಿಕ ಮೊತ್ತ ನೀಡಿ ಐದು ವರ್ಷಗಳ ಅವಧಿಯ ಟಿ.ವಿ.ಪ್ರಸಾರದ ಹಕ್ಕನ್ನು ಖರೀದಿಸಿತ್ತು. ಈ ಬಾರಿಯ ಲೀಗ್‌ನಿಂದ ಸ್ಟಾರ್ ಸ್ಪೋರ್ಟ್ಸ್ ಬೊಕ್ಕಸಕ್ಕೆ ಸುಮಾರು 3,000 ಕೋಟಿ ರೂ. ಆದಾಯ ಹರಿದು ಬರುವ ನಿರೀಕ್ಷೆ ಇತ್ತು. ಆದರೆ ಐಪಿಎಲ್ ನಡೆಯದೆ ಇದ್ದರೆ ಹಲವು ಕೋಟಿ ರೂ. ನಷ್ಟ ಅನುಭವಿಸುವ ಸಾಧ್ಯತೆ ಇದೆ.
ಕೋವಿಡ್-19 ಬಿಕ್ಕಟ್ಟಿನಿಂದಾಗಿ ಹಲವು ಕ್ರೀಡಾ ಮಂಡಳಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಆಸ್ಟ್ರೇಲಿಯ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಕೆಲವು ಫುಟ್ಬಾಲ್ ಸಂಸ್ಥೆಗಳು ಈಗಾಗಲೇ ಆಟಗಾರ ಮತ್ತು ಸಿಬಂದಿಗಳ ವೇತನ ಕಡಿತಕ್ಕೆ ಮುಂದಾಗಿವೆ. ಈ ಕುರಿತು ಮಾತನಾಡಿದ ಧುಮಾಲ್ ವೇತನ ಕಡಿತದ ಆಲೋಚನೆ ಸದ್ಯಕ್ಕಂತೂ ಇಲ್ಲ ಎಷ್ಟೇ ನಷ್ಟ ಸಂಭವಿಸಿದರೂ ಆಟಗಾರರ ವೇತನ ಕೊಡಲೇಬೇಕಿದೆ. ನಷ್ಟದ ಕುರಿತ ಸ್ಪಷ್ಟ ಚಿತ್ರಣ ಸಿಕ್ಕಿದ ಅನಂತರ ಮುಂದೇನು ಮಾಡ ಬೇಕೆಂಬುದನ್ನು ಯೋಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯ ನಡುವಣ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಸರಣಿಗಳು ನಿಗದಿಯಂತೆಯೇ ಈ ವರ್ಷಾಂತ್ಯದಲ್ಲಿ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿ ವಿರಾಟ್ ಕೊಹ್ಲಿ ಬಳಗವು ಆಸ್ಟ್ರೇಲಿಯದಲ್ಲಿ ಎರಡು ವಾರಗಳ ಪ್ರತ್ಯೇಕವಾಸಕ್ಕೆ ಸಿದ್ಧವಾಗಿದೆ ಎಂದು ಕೆಲ ದಿನಗಳ ಹಿಂದೆ ಧುಮಾಲ್ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಅವರು ಆಸ್ಟ್ರೇಲಿಯದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ರದ್ದಾದರೆ ಮಾತ್ರ ನಮ್ಮ ತಂಡದವರು ಆಸ್ಟ್ರೇಲಿಯದಲ್ಲಿ ಎರಡು ವಾರಗಳ ಪ್ರತ್ಯೇಕ ವಾಸದಲ್ಲಿ ಇರಲಿದ್ದಾರೆ. ವಿಶ್ವಕಪ್ ನಿಗದಿಯಂತೆ ನಡೆದರೆ ಪ್ರತ್ಯೇಕ ವಾಸದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಧುಮಾಲ್ ಸ್ಪಷ್ಟಪಡಿಸಿದ್ದಾರೆ.