ನಾನೊಮ್ಮೆ ನಾಲ್ಕನೆಯ ತರಗತಿಯಲ್ಲಿದ್ದಾಗ, ಟೀಚರ್ ಪಾಠ ಮಾಡುತ್ತ, “”ಕಸವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ನಾನಾ ರೋಗಗಳಿಗೆ ಕಾರಣವಾಗುತ್ತದೆ, ಆದ ಕಾರಣ ಮನೆಯ ಹಿಂಬದಿಯ ಜಾಗದಲ್ಲಿ ಒಂದು ಗುಂಡಿ ತೋಡಿ ಅದರಲ್ಲಿ ಹಾಕಿಟ್ಟು ಸ್ವಚ್ಛತೆಯನ್ನು ಕಾಪಾಡಬೇಕು” ಎಂದಿದ್ದರು. ಆಗ ಇಂದಿನಂತೆ ಪ್ಲಾಸ್ಟಿಕ್ ಕಸಗಳ ಹಾವಳಿ ಇರಲಿಲ್ಲ.
ನೀವು ಏನೇ ಹೇಳಿ, ನಾವು ನಮ್ಮ ಮನೆಯಲ್ಲಿ ಮಕ್ಕಳಿಗೆ ಎಷ್ಟು ಬೇಕಾದರೂ ಸ್ವಚ್ಛತೆಯ ಬಗೆಗೆ ಪಾಠ ಮಾಡಿ, ಅವರುಗಳು ನಾವು ಹೇಳಿದ ಅಷ್ಟೊಂದು ನಿಯಮಗಳನ್ನು ಕೇಳ್ಳೋದೇ ಅಷ್ಟು ; ಅಂತಹುದರಲ್ಲಿ ಇನ್ನು ಅದರ ನಿಯಮಗಳನ್ನು ತಪ್ಪದೆ ಪಾಲಿಸುತ್ತಾರೆ ಎಂಬುದರ ಬಗ್ಗೆ ಖಾತ್ರಿಯಿಲ್ಲ. ಶಾಲೆಗೆ ಹೋಗುವ ತರಾತುರಿಯಲ್ಲಿ ಉಡುಪುಗಳನ್ನು ಸರಿಯಾಗಿ ಜೋಡಿಸಿಡದೆ ಎಲ್ಲೆಂದರಲ್ಲಿ ಹರವಿ ಹೋಗುತ್ತಾರೆ. ತಿಂದ ಚಾಕಲೇಟ್ ರ್ಯಾಪರ್‌ಗಳು, ಕುರ್‌ಕುರೆ, ಚಿಪ್ಸ್ ಪ್ಯಾಕೇಟುಗಳು ತಿಂದಲ್ಲೇ ಇಟ್ಟು ಹೋಗಿಬಿಡುವುದೇ ಹೆಚ್ಚು. ಹೇಳಿ ಹೇಳಿ ಗದರಿದರೆ ಒಂದಷ್ಟು ದಿನಕ್ಕೆ ಮಾಡುತ್ತಾರೆ. ಮತ್ತೆ ಯಥಾಪ್ರಕಾರ. ಎಷ್ಟೆಂದರೂ ಅಮ್ಮಂದಿರು ನೀಟಾಗಿ ಇಟ್ಟೇ ಇಡುತ್ತಾರೆಂಬ ಬಲವಾದ ನಂಬಿಕೆ ಅವರಿಗೆ ಇದ್ದೇ ಇದೆ. ಆದರೆ, ಅಚ್ಚರಿ ಎಂದರೆ ಶಾಲೆಯಲ್ಲಿ ಅವರ ಮಿಸ್ಸು , ಸರ್‌ಗಳು ಹೇಳಿದ ನಿಯಮವನ್ನು ಮಕ್ಕಳು ಚಾಚೂತಪ್ಪದೆ ಅನುಸರಿಸಿ ಬಿಡುತ್ತಾರೆ. ಇದು ಬರೇ ಹೆದರಿಕೆಯ ವಿಷಯ ಮಾತ್ರ ಅಲ್ಲ, ಟೀಚರ್ ಹೇಳಿದ ಮಾತನ್ನು ಅವರು ಬಹುತೇಕ ಮನೆಯಲ್ಲೂ ಕೂಡ ಅನುಸರಿಸಿ ಬಿಡುತ್ತಾರೆ ಎಂದರೆ ಅವರ ಮೇಲಿನ ಅಗಾಧ ನಂಬಿಕೆ ಮತ್ತು ಗೌರವವೇ ಕಾರಣ. ಏನೇ ಆದರೂ ಟೀಚರ್ ಹೇಳಿದ್ದೇ ವೇದವಾಕ್ಯ ಎನ್ನುವುದನ್ನು ನಂಬುವಷ್ಟು ಮುಗ್ಧ ಮತ್ತು ವಿನಯವಂತ ಮಕ್ಕಳು. ಈ ರೀತಿಯ ಗುರುಗಳ ಮೇಲಿನ ಗೌರವ ಅನಾದಿಯಿಂದಲೇ ನಡೆದು ಬಂದದ್ದು.
ನಾವೊಮ್ಮೆ ಪರಿವಾರ ಸಮೇತ ದೂರ ಪ್ರಯಾಣ ಹೊರಟಿದ್ದೆವು. ನಮ್ಮ ಜೊತೆ ನನ್ನ ಗೆಳತಿಯ ಪರಿವಾರವೂ ಇತ್ತು. ನಮ್ಮಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಎಷ್ಟರಮಟ್ಟಿಗೆ ಇದೆಯೆಂಬುದು ಇಂತಹ ಸಂದರ್ಭಗಳಲ್ಲಿಯೇ ಗೊತ್ತಾಗುವುದು. ನನ್ನ ಚಿಕ್ಕ ಮಗ ಕುರ್ ಕುರೆ ಪ್ಯಾಕೇಟ್ ತಿಂದು ಮುಗಿಸಿದಾಕ್ಷಣ ಅದನ್ನು ಕಿಟಕಿಯಿಂದಾಚೆ ಹೊರಕ್ಕೆ ಎಸೆದು ಬಿಟ್ಟ.ಮನೆಯಲ್ಲಿಯಾದರೆ ಕಸದ ಬುಟ್ಟಿ ಹತ್ತಿರದಲ್ಲಿಯೇ ಇರುತ್ತದೆ. ಇಲ್ಲಿ ಹಾಗಲ್ಲವಲ್ಲ? ಅವನು ಮಾಡಿದ ಕೆಲಸವನ್ನು ನೋಡಿದಾಕ್ಷಣ ನನ್ನ ಗೆಳತಿ, “”ಛೆ! ಅಲ್ಲಿ ಎಸೆದು ಬಿಟ್ಟೆಯಾ? ನನಗೆ ಕೊಟ್ಟಿದ್ದರೆ ನನ್ನ ಬ್ಯಾಗಿನೊಳಗಾದರೂ ಹಾಕಿಟ್ಟುಕೊಳ್ಳುತ್ತಿದ್ದೆನಲ್ಲ” ಅಂತ ತುಂಬಾ ನಯವಾಗಿ ಯಾವುದೇ ಉಪದೇಶವನ್ನು ಕೊಡದೆ ಹೇಳಿದಾಗ, ತಾನು ಮಾಡಿದ್ದು ದೊಡ್ಡ ತಪ್ಪು ಅಂತ ಅವನಿಗೆ ಅನ್ನಿಸಿಬಿಟ್ಟಿತ್ತು. ಆ ನಂತರ ಚಾಕಲೇಟ್ ರ್ಯಾಪರ್ ಕೂಡ ಹೊರಕ್ಕೆ ಎಸೆಯಲಿಲ್ಲ.
ಒಮ್ಮೆ ನಮ್ಮ ಪಕ್ಕದ ಶಾಲೆಗೆ ಕನ್ನಡ ಟೀಚರ್ ಬರಲಿಲ್ಲವೆಂದು ಮಕ್ಕಳ ಹಿತದೃಷ್ಟಿಯಿಂದ ಒಂದಷ್ಟು ದಿನಕ್ಕೋಸ್ಕರ ನನ್ನನ್ನು ಕನ್ನಡ ಪಾಠ ಮಾಡೋಕೆ ಕರೆದಿದ್ದರು. ಮಕ್ಕಳಿಗೆ ನೋಟ್ಸ್ ಬರಿಯೋಕೆ ಹೇಳಿದಾಗ ಎಲ್ಲರೂ ಬಣ್ಣ ಬಣ್ಣದ ಪೆನ್ನನ್ನು ಬಳಸುವುದು ನೋಡಿ ದಿಗಿಲುಗೊಂಡಿದ್ದೆ. ನಾನು ಅವರಲ್ಲಿ ಒಂದಷ್ಟು ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಇದೊಂದು ಸಕಾಲವೆಂದು ನನ್ನ ಇದ್ದಬದ್ದ ಬುದ್ಧಿಯನ್ನೆಲ್ಲ ಅವರ ಮೇಲೆ ಪ್ರಯೋಗಿಸಲು ತೊಡಗಿದೆ. ಬಳಸಿ ಬಿಸಾಡುವ ಮಣ್ಣಿನಲ್ಲಿ ಕರಗದೆ ಇರುವ ವಸ್ತುಗಳಿಂದಾಗುವ ಅನಾಹುತಗಳ ಬಗ್ಗೆ ಹೇಳುತ್ತ ಅವರು ಬಳಸುವ ಪೆನ್ನಿನತ್ತ ಕೈ ತೋರಿಸಿದೆ. ತತ್‌ಕ್ಷಣ ಮಕ್ಕಳೆಲ್ಲ ಮುಖ ಮುಖ ನೋಡಿಕೊಂಡು ಲಗುಬಗೆಯಿಂದ ಪೆನ್ನನ್ನು ಕಂಪಾಸಿನೊಳಗಿಟ್ಟು ಬೇರೆ ಪೆನ್ನು ಹಿಡಿದುಕೊಂಡು ಬರೆಯತೊಡಗಿದವು. ಕೆಲವು ದಿನಗಳ ಬಳಿಕ ಅವರ ಊಟವಾದ ನಂತರ ಮಕ್ಕಳು ಏನೋ ಜಗಿಯುವುದನ್ನು ಕಂಡು ಮತ್ತೂಂದು ವಿಷಯ ಅವರುಗಳಿಗೆ ಮನವರಿಕೆ ಮಾಡಲು ಸಿಕ್ಕಿತ್ತಲ್ಲ ಅಂತ ಖುಷಿಯಾಗಿ ತರಗತಿಗೆ ಹೋದಾಕ್ಷಣ, “”ನೀವು ಬಬ್ಬಲ್‌ಗಮ್ ತಿನ್ತೀರಾ?” ಅಂತ ಕೇಳಿದೆ. “”ಹೌದು ಮಿಸ್…” ಅಂದರು. “”ಜಗಿದಾದ ಮೇಲೆ ಏನು ಮಾಡ್ತೀರಾ?” ಅಂತ ಕೇಳಿದ್ರೆ, “”ದೂರ ಬಿಸಾಕ್ತೀವಿ ಮಿಸ್” ಅಂತ ಒಕ್ಕೊರಲಿನಿಂದ ರಾಗವಾಗಿ ಹೇಳಿದರು. ನಮ್ಮ ಮನೆಗಳ ಮಾಡಿನಲ್ಲಿ ಗೂಡುಕಟ್ಟಿ ಸಂಸಾರ ಮಾಡುತ್ತಿದ್ದ ಗುಬ್ಬಿ ಮರಿಗಳು ಕಾಣೆಯಾಗುವುದಕ್ಕೆ ಕಾರಣ ನೀವಾಗುತ್ತೀರಿ ಅಂತ ಹೇಳಿ ಗುಬ್ಬಿ ನಾಶದ ಅನೇಕ ಕತೆಗಳನ್ನು ಹೇಳಿದೆ. “”ನೀವು ಬಿಸಾಡುವ ಬಬ್ಬಲ್‌ಗಮ್ ಅನ್ನು ಕೊಕ್ಕು ಮತ್ತು ಕಾಲಿಗೆ ಅಂಟಿಸಿಕೊಂಡ ಗುಬ್ಬಿ ಮರಿಗಳು ಒ¨ªಾಡಿ ಸಾಯುತ್ತವೆ, ಗುಬ್ಬಿಯ ನಾಶದಿಂದ ಪ್ರಕೃತ್ತಿಯಲ್ಲಿ ಕೂಡ ಅನೇಕ ಅಸಮತೋಲನಗಳಿಗೆ ಕಾರಣವಾಗುತ್ತವೆ’ ಅಂತ ತಿಳಿ ಹೇಳಿದೆ. ಅಷ್ಟು ಕೇಳಿದಾಕ್ಷಣ, “”ಇನ್ನು ಮುಂದೆ ಪೇಪರ್‌ನಲ್ಲಿ ಸುತ್ತಿ ಕಸದ ಬುಟ್ಟಿಗೆ ಹಾಕ್ತೇವೆ ಮೇಡಂ” ಅಂತ ಒಂದೇ ದನಿಯಲ್ಲಿ ರಾಗ ಎಳೆದವು.
ನಾವು ಶಾಲೆಗೆ ಹೋಗುವಾಗ ಒಂದೇ ಪೆನ್ನಿಗೆ ಕಡ್ಡಿ ಹಾಕಿಕೊಂಡು ಬರೆಯುತ್ತಿದ್ದೆವು. ಪ್ರಮಾದವಶಾತ್ ಪೆನ್ನು ಕಾಣೆಯಾದರೆ, ಹಾಳಾದರೆ ಮತ್ತೂಂದು ಸಿಗೋಕೆ ಅಷ್ಟೇ ಪ್ರವಚನ ಮಾಡುತ್ತಿದ್ದರು. ಆಗ ಅಪರೂಪಕ್ಕೆ ಬಂದ ಪ್ಲಾಸ್ಟಿಕ್ ತೊಟ್ಟೆಯನ್ನು ಅಮೂಲ್ಯವೆಂಬಂತೆ ಜತನಮಾಡಿ ಒಂದೆರಡಷ್ಟೇ ಬಳಕೆಗೆ ಎತ್ತಿಡುತ್ತಿದ್ದೆವು. ಬುದ್ಧಿವಂತ ಮನುಷ್ಯರು ಇರುವ ನಾಡಿನ ತುಂಬಾ ಪ್ಲಾಸ್ಟಿಕ್ ಹಾವಳಿ, ಪ್ರಾಣಿಗಳಿರುವ ಕಾಡಿನ ತುಂಬಾ ಹಚ್ಚ ಹಸುರಿನ ಪರಿಸರದ ಚಿತ್ರ ಮೊನ್ನೆ ಮೊನ್ನೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವುದನ್ನು ಕಂಡು ದಿಗಿಲಾಯಿತು. ನಮ್ಮ ಅವಸ್ಥೆ ಇಷ್ಟೊಂದು ಕೆಟ್ಟು ಹೋಗಿ ಬಿಟ್ಟಿತಾ? ತಿನ್ನುವ ತಟ್ಟೆ, ಕುಡಿಯುವ ಲೋಟ, ಕೂರುವುದು, ಮಲಗುವುದು ಎಲ್ಲ ಪ್ಲಾಸ್ಟಿಕ್‌ಮಯವಾಗಿ ಇಡೀ ಜಗತ್ತನ್ನೇ ಇವತ್ತು ಪ್ಲಾಸ್ಟಿಕ್ ನಿಯಂತ್ರಿಸುವಂತಿದೆ. ಅದಕ್ಕೆ ಸರಿಯಾಗಿ ಪ್ಲಾಸ್ಟಿಕ್ ಭ್ರಮೆಯಲ್ಲಿರುವ ನಮಗೆ ತಿನ್ನುವ ಅಕ್ಕಿ, ಬೇಳೆ ಎಲ್ಲವೂ ಪ್ಲಾಸ್ಟಿಕ್ ಆಗಿ ನಮಗೆ ಮಂಕುಬೂದಿ ಎರಚುವಾಗ ದಾರಿಕಾಣದೆ ಕಂಗಾಲಾಗಿರುವ ಪರಿಸ್ಥಿತಿ ನಮ್ಮದು.
ನಮ್ಮ ಮಕ್ಕಳಿಗೆ ಅವಕಾಶ ಸಿಕ್ಕಾಗಲೆಲ್ಲ ತಿಳಿ ಹೇಳದೇ ಇದ್ದರೆ ಈ ಪ್ಲಾಸ್ಟಿಕ್ ಎಂಬ ಪೆಡಂಭೂತ ನಮ್ಮನ್ನು ಸರ್ವನಾಶ ಮಾಡದೇ ಇರದು. ಬೇರೆಯವರಿಗೆ ಉಪದೇಶ ಕೊಟ್ಟು ಸುಧಾರಣೆ ಮಾಡಲು ನಮಗೆ ಸಾಧ್ಯವಾಗದೇ ಇದ್ದರೂ ತಕ್ಕಮಟ್ಟಿಗೆ ನಾವು ಹೆಂಗಳೆಯರಾದರೂ ಪ್ಲಾಸ್ಟಿಕ್ ವ್ಯಾಮೋಹವನ್ನು ಬಿಡಲಾಗುತ್ತದಾ, ಎಂಬುದನ್ನು ನೋಡಬೇಕು. ಪ್ಲಾಸ್ಟಿಕ್ ತೊಟ್ಟೆಯ ಬದಲು ಪರಿಸರ ಸ್ನೇಹಿಯಾದ ಚೀಲಗಳನ್ನು ಉಪಯೋಗಿಸಿದರೆ, ಅದೆಷ್ಟೋ ಹೆಣ್ಮಕ್ಕಳ ಈ ದೃಢ ನಿರ್ಧಾರದಿಂದ ಒಂದಷ್ಟು ತ್ಯಾಜ್ಯ ಕಡಿಮೆಯಾಗಿ ಪರಿಸರಸ್ನೇಹಿ ವಾತಾವರಣ ನಿರ್ಮಾಣ ಆದರೆ ಅದಕ್ಕಿಂತ ಸಂತಸದ ಸಂಗತಿ ಈ ಹೊತ್ತಿನಲ್ಲಿ ಬೇರೊಂದಿಲ್ಲ ಅಂತನ್ನಿಸುತ್ತದೆ. ಇನ್ನು ಮನೆಯೊಡತಿಯರು ಹಸಿ ಕಸಗಳನ್ನು ಒಂದೆಡೆ ಕಲೆ ಹಾಕಿ ಅದನ್ನು ಬಯೋಗ್ಯಾಸಾಗಿ ಪರಿವರ್ತಿಸುವ ಮೂಲಕ ಇಂಧನ ಉಳಿತಾಯ ಕೂಡ ಮಾಡಿ ಬಿಡಬಹುದು. ಮನಸು ಮಾಡುವುದಷ್ಟೇ ಮುಖ್ಯ. ಒಂದಡಿ ಹೆಜ್ಜೆಯಿಟ್ಟರೆ ಅನುಸರಿಸುವ ಹೆಜ್ಜೆಗಳು ನೂರು… ಸಾವಿರವಾಗಬಹುದು.
ಸ್ವಿತಾ ಅಮೃತರಾಜ್