Advertisement

ಆಡಳಿತ ನಡೆಸಲು ಆಗದಿದ್ರೆ ಬಿಟ್ಟು ಹೋಗಿ

11:41 PM Jun 29, 2019 | Lakshmi GovindaRaj |

ಬೆಂಗಳೂರು: “ಯೋಗ್ಯತೆ ಇದ್ದರೆ ಆಡಳಿತ ನಡೆಸಬೇಕು. ಇಲ್ಲವಾದರೆ ಬಿಟ್ಟುಹೋಗಬೇಕು. ಚುನಾವಣೆಗೆ ರಾಜ್ಯದ ಜನ ಸಿದ್ಧರಿಲ್ಲ’ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Advertisement

ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರದಿಂದ ತತ್ತರಿಸಿರುವ ಜನ ನೆರವಿನ ಎದುರು ನೋಡುತ್ತಿದ್ದಾರೆ. ಆದರೆ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳು ಕೂಡ ಆಗಿಲ್ಲ.

ಆಗಲೇ ಚುನಾವಣೆ ಮಾತುಗಳನ್ನು ಆಡುತ್ತಿದೆ. ಯೋಗ್ಯತೆ ಇದ್ದರೆ ಆಡಳಿತ ನಡೆಸಬೇಕು. ಇಲ್ಲವಾದರೆ ಬಿಟ್ಟುಹೋಗಬೇಕು. ಮತದಾರರು ಈಗ ಚುನಾವಣೆಗೆ ಸಿದ್ಧರಿಲ್ಲ. ಅಷ್ಟಕ್ಕೂ ಯಾರಿಗಾಗಿ ಈ ಚುನಾವಣೆ ಎಂದು ತರಾಟೆಗೆ ತೆಗೆದುಕೊಂಡರು.

ಚುನಾವಣೆ ಯಾವಾಗಾದ್ರೂ ಬರಲಿ: ಪ್ರಸ್ತುತ ಪರಿಸ್ಥಿತಿ ನೋಡಿದರೆ, ಯಾವಾಗಬೇಕಾದರೂ ಸರ್ಕಾರ ಬೀಳಬಹುದು. ನಾವು ಯಾವ ಶಾಸಕರನ್ನೂ “ಬನ್ನಿ’ ಎಂದು ಕರೆಯುವುದಿಲ್ಲ. ಆದರೆ, ತಾವಾಗಿಯೇ ಶಾಸಕರು ಹೊರಬಂದು ಸಮ್ಮಿಶ್ರ ಸರ್ಕಾರ ಬಿದ್ದರೆ, ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದರು.

“ಯಾವಾಗ ಬೇಕಾದರೂ ಚುನಾವಣೆ ಬರಲಿ ಹಾಗೂ ಯಾರೇ ಅಭ್ಯರ್ಥಿ ಇರಲಿ. ಬೆಂಗಳೂರು ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಕನಿಷ್ಠ 22ರಿಂದ 23 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಪಣ ತೊಡಬೇಕು. ಈ ನಿಟ್ಟಿನಲ್ಲಿ ಸಂಸದರು, ಶಾಸಕರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

Advertisement

ಲೋಕಸಭೆಯಲ್ಲಿ ಬಿಜೆಪಿ 303 ಸೀಟುಗಳನ್ನು ಗೆದ್ದಿದೆ. ಯಾವುದೇ ಹಂಗಿನಲ್ಲಿ ಸರ್ಕಾರ ನಡೆಸಬೇಕಾದ ಅಗತ್ಯವೇ ಇಲ್ಲ. ರಾಜ್ಯದಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 105 ಸೀಟುಗಳು ಬರುವ ಬದಲಿಗೆ, 115 ಸೀಟುಗಳು ಬಂದಿದ್ದರೆ ಚಿತ್ರಣವೇ ಬೇರೆ ಆಗಿರುತ್ತಿತ್ತು. ಆಗ, ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇರುತ್ತಿತ್ತು. ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಬಹುದಿತ್ತು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಯಾವಾಗ ಸರ್ಕಾರ ರಚಿಸುತ್ತೀರಾ?: ಇದು ಕುಳಿತಲ್ಲಿ, ನಿಂತಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಜನ ಕೇಳುವ ಪ್ರಶ್ನೆ ಅಂತೆ. ಇದನ್ನು ಸ್ವತಃ ಯಡಿಯೂರಪ್ಪ ಕೃತಜ್ಞತಾ ಸಮಾವೇಶದಲ್ಲಿ ತಿಳಿಸಿದರು. “ಅದಕ್ಕೆಲ್ಲಾ ಕಾಲ ಕೂಡಿ ಬರಬೇಕು’ ಎಂಬ ಉತ್ತರವನ್ನೂ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next