Advertisement

ಪ್ರವಾಹ ವೇಳೆ ಕಾಂಗ್ರೆಸ್‌ ಶಾಸಕರಿಂದ ಮೋಜು; ಡಿಕೆಶಿಗೆ ಟಾಂಗ್

08:35 AM Oct 30, 2017 | Team Udayavani |

ಬೀದರ: ದೇಶದಲ್ಲಿ ಬೇರೂರಿರುವ ಭ್ರಷ್ಟಾಚಾರದ ವಿರುದ್ಧ ಕೇಂದ್ರ ಸರ್ಕಾರ ಹೋರಾಟ ನಡೆಸುತ್ತಿದ್ದರೆ ಕಾಂಗ್ರೆಸ್‌ ಪಕ್ಷ
ಸಂವೇದನಾ ಹೀನರಂತೆ ವರ್ತಿಸುತ್ತಿದೆ. ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ ಬಂದು ಜನ ನರಳಾಡುತ್ತಿದ್ದರೆ, ಅಲ್ಲಿನ ಕಾಂಗ್ರೆಸ್‌ ಶಾಸಕರು, ನಾಯಕರು ಬೆಂಗಳೂರಿನಲ್ಲಿ ಮೋಜು ಮಸ್ತಿಯಲ್ಲಿ ಕಾಲ ಕಳೆದಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿ, ಗುಜರಾತ್‌ ನ ಕಾಂಗ್ರೆಸ್‌ ಶಾಸಕರ ಮೋಜಿನ ವೇಳೆ ಕರ್ನಾಟಕದಲ್ಲಿ ಸಚಿವರೊಬ್ಬರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದು ನೋಟಿನ ಕಟ್ಟುಗಳು ಹೊರ ಬಿದ್ದಿದ್ದವು ಎಂದು ಸಚಿವ ಡಿ.ಕೆ.ಶಿವಕುಮಾರ ಹೆಸರು ಪ್ರಸ್ತಾಪಿಸದೆ ವಾಗ್ಧಾಳಿ ನಡೆಸಿದರು. ನೋಟು ಅಪನಗದೀಕರಣದ ನಿರ್ಧಾರದಿಂದ ಲೂಟಿಕೋರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೋಟು ಬ್ಯಾನ್‌ ಬಳಿಕ ಬೇನಾಮಿ ವಹಿವಾಟು ನಡೆಸುತ್ತಿದ್ದ ಕಂಪನಿಗಳು ಪತ್ತೆಯಾಗುತ್ತಿದ್ದು, ಅಂಥ 3 ಲಕ್ಷ ಬೋಗಸ್‌ ಕಂಪನಿಗಳಿಗೆ ಈಗಾಗಲೇ ಬೀಗ ಹಾಕಲಾಗಿದೆ. ಇನ್ನೂ 5 ಸಾವಿರ ಕಂಪನಿಗಳ ವಹಿವಾಟನ್ನು ಸೂಕ್ಷ ವಾಗಿ ಪರಿಶೀಲಿಸಲಾಗುತ್ತಿದ್ದು, ಅಲ್ಲಿ 4 ಸಾವಿರ ಕೋಟಿ ರೂ. ಅಕ್ರಮ ವಹಿವಾಟು ಮಾಡಿರುವುದು ಕಂಡುಬಂದಿದೆ. ಈ ಹಣ ದೇಶದ ಜನರಿಗೆ ಸೇರಿದ್ದು, ಇದನ್ನು ಲೂಟಿ ಮಾಡಲು ಬಿಡುವುದಿಲ್ಲ. ಕಪ್ಪು ಹಣದ ದಂಧೆ ಮಾಡುವ ಭ್ರಷ್ಟಾಚಾರಿಗಳ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.

ನೋಟು ಅಪನಗದೀಕರಣ ಮತ್ತು ಜಿಎಸ್‌ಟಿ ಮಸೂದೆ ಜಾರಿ ನಿರ್ಣಯವನ್ನು ದೇಶದ ಜನರು ಮುಕ್ತ ಮನದಿಂದ ಸ್ವೀಕಾರ ಮಾಡಿದ್ದಾರೆ. ಜಿಎಸ್‌ಟಿಗೆ ಯಾವುದೇ ವ್ಯಾಪಾರಿ ವಿರೋಧ ಮಾಡಿಲ್ಲ. ಸಣ್ಣ ಪುಟ್ಟ ತೊಂದರೆಗಳ ಸುಧಾರಣೆಗೆ ಸಲಹೆಗಳು
ವ್ಯಕ್ತವಾಗಿದ್ದು, ಅದನ್ನು ಮುಕ್ತ ಮನದಿಂದ ಸ್ವೀಕಾರ ಮಾಡುತ್ತೇನೆ ಎಂದರು. 

ಸಮಾವೇಶದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಪಿಯೂಷ ಗೋಯಲ್‌, ಅನಂತಕುಮಾರ, ರಮೇಶ ಜಿಗಜಿಣಗಿ, ಸದಾನಂದ ಗೌಡ, ಅನಂತಕುಮಾರ ಹೆಗಡೆ, ವಿಪಕ್ಷ ನಾಯಕರಾದ ಜಗದೀಶ ಶೆಟ್ಟರ್‌, ಈಶ್ವರಪ್ಪ, ಸಂಸದ ಭಗವಂತ ಖೂಬಾ, ಶಾಸಕರಾದ ಪ್ರಭು ಚವ್ಹಾಣ, ರಘುನಾಥ ಮಲ್ಕಾಪುರೆ, ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮತ್ತಿತರರು ಇದ್ದರು.

ಬೀದರ್‌-ಕಲಬುರಗಿ ರೈಲು ಮಾರ್ಗ ಲೋಕಾರ್ಪಣೆ
ಬೀದರ:
ಉತ್ತರ ಮತ್ತು ದಕ್ಷಿಣ ಭಾರತವನ್ನು ಬೆಸೆಯಲಿರುವ ಹೈ.ಕ. ಭಾಗದ ಮಹತ್ವಾಕಾಂಕ್ಷಿ ಯೋಜನೆ ಬೀದರ-ಕಲಬುರಗಿ ರೈಲು ಮಾರ್ಗವನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಣೆ ಮಾಡಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ನೂತನ ರೈಲು ಮಾರ್ಗಕ್ಕೆ ಚಾಲನೆ ನೀಡಿ ನಂತರ ಬೀದರ-ಕಲಬುರಗಿ ನಡುವಿನ ಡೆಮು ರೈಲು ಓಡಾಟಕ್ಕೂ ಹಸಿರು ನಿಶಾನೆ ತೋರಿದರು. ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರೈಲು ಉದ್ಘಾಟನೆಯ ಈ ಭಾಗದ ಜನರ ದಶಕಗಳ ಕನಸು ನನಸಾಗಿದೆ ಎಂದರು. ಕೇವಲ 3 ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಹೊಸ ಮಾರ್ಗಕ್ಕೆ ದಶಕಗಳೇ ಬೇಕಾಯಿತು. 400 ಕೋಟಿ ರೂ.ಯೋಜನಾ ವೆಚ್ಚ 300 ಪಟ್ಟು ಹೆಚ್ಚಳವಾಯಿತು. ಹಿಂದಿನ ಸರ್ಕಾರಗಳು ಮಹತ್ವದ ಗಂಭೀರತೆ ಅರಿತು ಅಗತ್ಯ ಅನುದಾನ ಕಲ್ಪಿಸಿದ್ದೆ ಆದಲ್ಲಿ ಏಳು ವರ್ಷಗಳ ಮೊದಲೇಈ ಕಾರ್ಯ ಮುಗಿಯಬಹುದಿತ್ತು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next