ಅಫಜಲಪುರ: ದೇಶಕ್ಕೆ ಅನ್ನ ಹಾಕುವ ರೈತರನ್ನು ಮರೆಯಬಾರದು. ಯುವ ಜನಾಂಗ ಕೃಷಿಯತ್ತ ಮರಳಬೇಕು, ಕೃಷಿ ನಂಬಿದರೆ ಬದುಕೆಲ್ಲ ಬಂಗಾರ ವಾಗುತ್ತದೆ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ನಡೆದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ ಹಾಗೂ ಸಮಾರೋಪ ಸಮಾರಂಭವನ್ನು ಶಾಸಕ ಎಂ.ವೈ. ಪಾಟೀಲ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜರು ನೆಲ ನಂಬಿ ಬೀಜ ಬಿತ್ತಿ ನಮಗೆಲ್ಲ ದವಸ ಧಾನ್ಯ ಉತ್ಪಾದಿಸಿ ಕೊಡುತ್ತಿದ್ದರು. ಆದರೆ ಈಗ ಜನಸಂಖ್ಯೆ ವಿಪರೀತವಾಗಿ ಬೆಳೆಯುತ್ತಿದೆ. ಕೃಷಿ ಉತ್ಪಾದನೆ ಕುಸಿತವಾಗುತ್ತಿದೆ. ಈ ಪ್ರವೃತ್ತಿ ಬದಲಾಗಬೇಕು. ಯುವಕರು ನೌಕರಿಗಾಗಿ ಓದುವುದನ್ನು ಬಿಟ್ಟು ಕೃಷಿಯತ್ತ ಮರಳಬೇಕು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ಕೃಷಿ ಮಹಾ ವಿದ್ಯಾಲಯದ ಡೀನ್ ಡಾ| ಸುರೇಶ ಪಾಟೀಲ ಮಾತನಾಡಿ, ಒಕ್ಕಲಿಗ ಬಿತ್ತಿದರೆ ಉಕ್ಕುವುದು ಜಗವೆಲ್ಲ ಎನ್ನುವಂತೆ ರೈತರೇ ನಿಜವಾದ ವಿಜ್ಞಾನಿಗಳಾಗಿದ್ದಾರೆ. ಈ ರೈತ ವಿಜ್ಞಾನಿಗಳಿಗೆ ಆಧುನಿಕ ಸಲಕರಣೆಗಳು ಸಾಥಿಯಾದರೆ ಅವರಷ್ಟು ಉತ್ಪಾದನೆ ಮತ್ಯಾರೂ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಸದಾ ರೈತರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಲೇ ಇರುತ್ತದೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ನಡೆಯಿತು. ವಸ್ತು ಪ್ರದರ್ಶನಕ್ಕೆ ಶಾಸಕ ಎಂ.ವೈ. ಪಾಟೀಲ ಚಾಲನೆ ನೀಡಿದರು.
ವಸ್ತು ಪ್ರದರ್ಶನದಲ್ಲಿ ಮಳೆ, ನಕ್ಷತ್ರ, ನೀರಾವರಿ ಪದ್ಧತಿ, ಪೋಷಕಾಂಶ, ಕೋಳಿ ಸಾಕಾಣಿಕೆ, ಜೀವಾಮೃತ ಬೇವಿನ ಬೀಜದ ಕಷಾಯ, ಜೇನು ಕೃಷಿ ಹಾಗೂ ಸಾವಯವ ಕೀಡೆ ನಿರ್ವಾಹಕಗಳು, ಜಲಾನಯನ ಪ್ರದೇಶ, ಶೂನ್ಯ ಶಕ್ತಿ ತಂಪು ಘಟಕ, ಉದ್ಯಾನವನ ಮುಂತಾದವುಗಳ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಡಾ| ಕೆ.ಎನ್. ದೊಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಅದ್ಯಕ್ಷ ಶಂಕರ ಸಿಂಗೆ ಅಧ್ಯಕ್ಷತೆ ವಹಿಸಿದ್ದರು. ಗುರುಪಾದಯ್ಯ ಚರಂತಿಮಠ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಎಸ್.ವೈ. ಪಾಟೀಲ, ಸಿದ್ಧಯ್ಯ ಆಕಾಶಮಠ, ಡಾ| ಕೆ. ಭವಾನಿ, ಡಾ| ಸುಮಯ್ಯ, ಪಿಡಿಒ ಸಿಂಧುಬಾಯಿ ಹಾಗೂ ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.