Advertisement

ಸಮಾನ ಅವಕಾಶ ನೀಡಿದರೆ ಮಹಿಳೆ ಜಗತ್ತು ಆಳಬಲ್ಲಳು

06:02 AM Feb 01, 2019 | Team Udayavani |

ದಾವಣಗೆರೆ: ಸಮಾಜದಲ್ಲಿ ಇನ್ನೂ ಕೂಡ ಹುಟ್ಟಿದ ಹೆಣ್ಣು ಕುಲಕ್ಕೆ ಹೊರಗೆ ಎಂಬ ಭಾವನೆ ಆಳವಾಗಿ ಬೇರೂರಿದೆ ಎಂದು ಐಪಿಎಸ್‌ ಅಧಿಕಾರಿ ರೂಪಾ ಡಿ. ಮೌದ್ಗಿಲ್‌ ಕಳವಳ ವ್ಯಕ್ತಪಡಿಸಿದರು.

Advertisement

ಕುವೆಂಪು ಕನ್ನಡ ಭವನದಲ್ಲಿ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಗೋಷ್ಠಿ-4ರಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಕುರಿತು ಅವರು ಮಾತನಾಡಿದರು.

ಹುಟ್ಟಿದ ಹೆಣ್ಣು ಕುಲಕ್ಕೆ ಹೊರಗೆ ಎಂಬ ಧೋರಣೆಯಿಂದಾಗಿ ಶಿಕ್ಷಣ, ಮಗನ ಆಸಕ್ತಿಗಳಿಗೆ ನೀಡುವ ಬೆಲೆ, ಪ್ರಾಧಾನ್ಯತೆ ಹೆಣ್ಣು ಮಗಳಿಗೆ ನೀಡುತ್ತಿಲ್ಲ. ಈ ಧೋರಣೆ ಬಿಟ್ಟು ಅವಳಿಗೂ ಸಮಾನ ಅವಕಾಶ ನೀಡಿದರೆ, ತೊಟ್ಟಿಲು ತೂಗುವ ಕೈಗೆ ಜಗತ್ತನ್ನು ಆಳಬಲ್ಲ ಶಕ್ತಿ ಇದೆ ಎಂಬುದನ್ನು ನಿರೂಪಿಸುತ್ತಾಳೆ. ವೃದ್ಧಾಪ್ಯದಲ್ಲಿ ಗಂಡು ಮಕ್ಕಳಿಗಿಂತ ಹೆಚ್ಚಿನ ಆಸರೆ ಆಗುತ್ತಾಳೆ ಎಂದರು.

ಮಹಿಳೆ ಎಲ್ಲಾ ಕ್ಷೇತ್ರದಲ್ಲಿಂದು ಪಾದಾರ್ಪಣೆ ಮಾಡಿದ್ದಾಳೆ. ಆದರೂ, ಪ್ರಮುಖ ವಿಚಾರಗಳ ನಿರ್ಧಾರದಲ್ಲಿ ಮಹಿಳೆಯ ಅಭಿಪ್ರಾಯವನ್ನು ಪರಿಗಣಿಸುತ್ತಿಲ್ಲ. ಅವರಿಗೂ ವ್ಯಕ್ತಿತ್ವ, ಚಿಂತನೆ ಹಾಗೂ ಕನಸುಗಳಿವೆ. ಅವುಗಳು ಮುದುಡದಂತೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಮಕ್ಕಳನ್ನು ಬೆಳೆಸುವ ರೀತಿ ಬದಲಾದರೆ, ಸಮಾಜ ಬದಲಾಗುತ್ತದೆ. ಹಾಗಾಗಿ ಬದುಕಿನ ನವೀನ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿ ಆಯ್ಕೆ ಸ್ವಾತಂತ್ರ್ಯ ನೀಡಬೇಕು. ಅಲ್ಲದೇ ಮಹಿಳೆಯರು ಮಾನಸಿಕ, ದೈಹಿಕ ದೌರ್ಜನ್ಯ ಎದುರಿಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೇ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಸ್ತ್ರೀ ಸಶಕ್ತೀಕರಣ ಮತ್ತು ಕಾನೂನು ವಿಷಯ ಕುರಿತು ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್‌.ಟಿ. ಮಂಜುನಾಥ್‌ ಮಾತನಾಡಿ, ಮಹಿಳೆಯರು ಇತಿಹಾಸ ತಿಳಿದಿರಬೇಕು. ಏಕೆಂದರೆ, ರಾಮಾಯಣ, ಮಹಾಭಾರತ ಕಾಲದಿಂದ ಇಂದಿನ ಆಧುನಿಕ ಕಾಲಘಟ್ಟದವರೆಗೆ ಸ್ತ್ರೀ ಶೋಷಣೆ ನಿರಂತರವಾಗಿದೆ. ಸಂಪೂರ್ಣ ತಡೆಗಟ್ಟಲು ಆಗಿಲ್ಲ. ಶಬರಿಮಲೆ ಅಯ್ಯಪ್ಪ ದೇವಸ್ಥಾನ, ರಾಜ್ಯದ ವಿವಿಧ ಗ್ರಾಮಗಳಲ್ಲಿ ಇಂದಿಗೂ ಮಹೇಶ್ವರ ಜಾತ್ರೆಯಲ್ಲಿ ಮಹಿಳೆಯರಿಗೆ ಪ್ರವೇಶಾವಕಾಶ ನೀಡುತ್ತಿಲ್ಲ ಎಂದರು.

ಎಲ್ಲಾ ದೇವತೆ, ಭೂತಾಯಿ, ನದಿ ಹೆಣ್ಣಿನ ಪ್ರತೀಕಗಳೇ ಆಗಿವೆ. ಆದರೂ ಎಡ-ಬಲದ ರೀತಿ ಮಹಿಳೆ ಮೇಲೆ ಒಂದು ರೀತಿಯ ಶೋಷಣೆ ನಡೆಯುತ್ತಲೇ ಇದೆ ಎಂದ ಅವರು, ಪೌರಾಣಿಕ, ಐತಿಹಾಸಿಕ ಸಂದರ್ಭದ ಬಳಿಕ ಬಂದ ಸತಿಸಹಗಮನ ಪದ್ಧತಿಯಲ್ಲಿ ಗಂಡ ಸತ್ತ ಬಳಿಕ ಚಿತೆಗೆ ಹೆಂಡತಿಯನ್ನೇ ನೂಕಲಾಗುತ್ತಿತ್ತು. ವಿನಃ ಹೆಂಡತಿ ಸತ್ತಾಗ ಗಂಡನನ್ನು ನೂಕುತ್ತಿರಲಿಲ್ಲ. ರಾಮಾಯಣದಲ್ಲಿ ಅಗಸನ ಮಾತಿನಿಂದ ಗರ್ಭಿಣಿ ಸೀತೆಯನ್ನು ರಾಮ ಕಾಡಿಗೆ ಅಟ್ಟಿದ್ದ, ಧರ್ಮಿಷ್ಠ ಧರ್ಮರಾಯ ಪತ್ನಿಯನ್ನು ಪಣಕ್ಕಿಟ್ಟಿದ್ದ. ಹೀಗೆ ಒಂದಲ್ಲ ಒಂದು ರೀತಿ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಲೇ ಬಂದಿದೆ ಎಂದು ನುಡಿದರು.

1950ರಲ್ಲಿ ಸಂಸತ್‌ ಅಧಿವೇಶನದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಸ್ತ್ರೀ ಸಮಾನತೆ ಹಕ್ಕಿಗೆ ಪ್ರತಿಪಾದಿಸಿ ಈಡೇರದ ಹಿನ್ನೆಲೆ ಡಾ| ಬಿ.ಆರ್‌. ಅಂಬೇಡ್ಕರ್‌ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. 1956 ಹಿಂದೂ ಕಾನೂನು ಅನುಷ್ಠಾನಗೊಂಡು ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ಪರಿಗಣಿಸಲಾಯಿತು. 2005ರಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ತಂದ ಬಳಿಕ ಸಮಾನ ಆಸ್ತಿಹಕ್ಕು ಮಹಿಳೆಯರಿಗೆ ಇದೆ. ಹಾಗಂತ ಅನವಶ್ಯಕವಾಗಿ ತವರು ಮನೆಯಿಂದ ಆಸ್ತಿಯಲ್ಲಿ ಪಾಲು ಕೇಳಲು ಹೋಗಬೇಡಿ. ಇದರಿಂದ ತವರು ಮನೆಯ ಕೊಂಡಿ ಕಳಚುತ್ತದೆ. ಹಾಗಾಗಿ ಮಹಿಳಾ ಪರ ಕಾನೂನುಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸುಶೀಲಾದೇವಿ ರಾವ್‌ ಮಾತನಾಡಿ, ಪರಂಪರೆ, ನಾಗರಿಕತೆಯನ್ನು ಮುಂದಿನ ಪೀಳಿಗೆಗೆ ರವಾನಿಸುವುದು ಮಹಿಳೆಯರ ಕರ್ತವ್ಯ. ಹೆಣ್ಣು ಯಾವುದೇ ಹುದ್ದೆಯಲ್ಲಿದ್ದರೂ ಅಡುಗೆ ಮನೆ ಜವಾಬ್ದಾರಿ ಅವಳದ್ದೇ ಆಗಿರುತ್ತದೆ. ಈ ಮಧ್ಯೆಯೂ ಸಮೃದ್ಧ ಸಾಹಿತ್ಯ ರಚಿಸಬೇಕು ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಡಾ| ಲೋಕೇಶ್‌ ಅಗಸನಕಟ್ಟೆ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಎಚ್.ಎಸ್‌. ಮಂಜುನಾಥ್‌ ಕುರ್ಕಿ ಇದ್ದರು.

ಸಂಸ್ಕೃತಿ, ಸಂಸ್ಕಾರ ಎತ್ತಿ ಹಿಡಿಯುವಂತಿರಲಿ ಉಡುಪು
ಮಹಿಳೆಯರು ತೊಡುವ ಉಡುಪುಗಳು ನಾಡಿನ ಸಂಸ್ಕೃತಿ, ಸಂಸ್ಕಾರಕ್ಕೆ ತಕ್ಕಂತೆ ಇರಲಿ. ಬಿಗಿ ಉಡುಪುಗಳನ್ನು ಧರಿಸಬೇಡಿ. ಉಡುಗೆ, ತೊಡುಗೆಗಳಿಂದ ಸೌಂದರ್ಯ ಮಲೀನವಾಗದಿರಲಿ. ದೇಶದ ಭವ್ಯ ಸಂಸ್ಕೃತಿ, ಸಂಸ್ಕಾರ ಎತ್ತಿ ಹಿಡಿಯುವ ದೇವತೆಗಳಾಗಿ ಎಂದು ವಕೀಲ ಎನ್‌.ಟಿ. ಮಂಜುನಾಥ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next